ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಮಳೆಗಾಲಕ್ಕೆ ಮಳೆಗಾಲದಲ್ಲೇ ಸಿದ್ಧತೆ!

ಹಿಂದಿನ ಘಟನೆಗಳಿಂದ ಎಚ್ಚೆತ್ತುಕೊಳ್ಳದ ಸ್ಥಳೀಯ ಆಡಳಿತಗಳು
Published 4 ಜೂನ್ 2023, 23:35 IST
Last Updated 4 ಜೂನ್ 2023, 23:35 IST
ಅಕ್ಷರ ಗಾತ್ರ

ಶಶಿಕಾಂತ ಎಸ್‌. ಶೆಂಬೆಳ್ಳಿ

ಬೀದರ್‌: ಇನ್ನೇನು ಮುಂಗಾರು ಮಳೆ ಆರಂಭವಾಗಲಿದೆ. ಆದರೆ, ಮಳೆಗಾಲ ಎದುರಿಸಲು ಸ್ಥಳೀಯ ಸಂಸ್ಥೆಗಳು ಈಗಷ್ಟೇ ಸಿದ್ಧತೆ ಆರಂಭಿಸಿವೆ. ಮಳೆಗಾಲದ ಪೂರ್ವ ತಯಾರಿ ಹೇಗಿದೆ ಎನ್ನುವುದನ್ನು ಇದರಿಂದಲೇ ಅರಿತುಕೊಳ್ಳಬಹುದು. 

ನಗರ ಸೇರಿದಂತೆ ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಈಗ ಚರಂಡಿ, ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವುದು, ದುರಸ್ತಿಗೊಳಿಸುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಅನೇಕ ಕಡೆಗಳಲ್ಲಿ ಕಟ್ಟಡಗಳನ್ನು ಒಡೆದು, ಹೊಸದಾಗಿ ಚರಂಡಿ ನಿರ್ಮಿಸಲು ಯೋಜಿಸಲಾಗಿದೆ. ಆದರೆ, ಯಾವುದೇ ಸಂದರ್ಭದಲ್ಲಿ ವರ್ಷಧಾರೆ ಸುರಿಯಬಹುದು. ಮಳೆಯಿಂದ ಅವಾಂತರಗಳು ಸೃಷ್ಟಿಯಾಗಬಾರದು ಎನ್ನುವುದು ಸ್ಥಳೀಯ ಆಡಳಿತಗಳ ಉದ್ದೇಶ. ಆದರೆ, ಮಳೆಗಾಲ ಋತು ಹೊಸ್ತಿಲಲ್ಲಿದೆ. ಇಷ್ಟು ದಿನ, ತಿಂಗಳುಗಳ ಕಾಲ ಸುಮ್ಮನಿದ್ದು ಈಗ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ಇನ್ನೂ ಹೆಚ್ಚಿನ ಅವಾಂತರಗಳು ಸೃಷ್ಟಿಯಾಗಬಹುದು.

ಸ್ಥಳೀಯ ಆಡಳಿತಗಳ ಈ ಬೇಜವಾಬ್ದಾರಿ ನಡವಳಿಕೆಯನ್ನು ಜನ ಕಟುವಾಗಿ ಟೀಕಿಸಿದ್ದಾರೆ. ಪ್ರತಿ ಮಳೆಗಾಲದಲ್ಲಿ ಒಂದಿಲ್ಲೊಂದು ಅವಾಂತರಗಳು ನಡೆಯುತ್ತವೆ. ಚರಂಡಿಗಳು ಉಕ್ಕಿ ಹರಿದು ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತದೆ. ಪಾದಚಾರಿಗಳು, ವಾಹನಗಳು ಸಂಚರಿಸಲಾರದ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ರಾಜಕಾಲುವೆಗಳ ನೀರು ಮನೆಯೊಳಗೆ ನುಗ್ಗಿ ಜನರ ಬದುಕು ಹಾಳು ಮಾಡಿರುವ ಅನೇಕ ನಿದರ್ಶನಗಳಿವೆ. ಇಷ್ಟೇ ಅಲ್ಲ, ರಸ್ತೆಯ ಎಲ್ಲೆಡೆ ನೀರು ಆವರಿಸಿ, ಗುಂಡಿಯಲ್ಲಿ ಕೈಕಾಲು ಮುರಿದುಕೊಂಡಿರುವ ಅನೇಕ ಉದಾಹರಣೆಗಳು ಕಣ್ಣ ಮುಂದಿವೆ. ಇಷ್ಟೆಲ್ಲ ಇದ್ದರೂ ಸ್ಥಳೀಯ ಆಡಳಿತಗಳು ಇಷ್ಟು ದಿನಗಳೇಕೆ ಕಣ್ಣುಮುಚ್ಚಿ ಕುಳಿತಿದ್ದವು? ಸಾರ್ವಜನಿಕರ ಪ್ರಶ್ನೆಗೆ ಯಾವುದೇ ಉತ್ತರ ಇಲ್ಲ.

‘ಮಳೆಗಾಲಕ್ಕೆಂದೆ ಪ್ರತಿ ವರ್ಷ ಸ್ಥಳೀಯ ಆಡಳಿತಗಳಿಗೆ ಹೆಚ್ಚಿನ ಅನುದಾನ ಬರುತ್ತದೆ. ಹೀಗಿದ್ದರೂ ಅವುಗಳು ಬೇಸಿಗೆಯಲ್ಲಿ ಸಿದ್ಧತೆ ಕೈಗೊಳ್ಳುವುದಿಲ್ಲ. ಬದಲಾಗಿ ಮಳೆಗಾಲಕ್ಕೆ ಕೆಲವೇ ದಿನಗಳು ಇರುವಾಗ ಕೆಲಸ ಆರಂಭಿಸುತ್ತಾರೆ. ಮಳೆ ಬಂದು ಇನ್ನಿಲ್ಲದ ಸಮಸ್ಯೆಗಳು ಉದ್ಭವಿಸಿ ಜನ ತೊಂದರೆಗೆ ಸಿಲುಕುತ್ತಾರೆ. ಅರೆಬರೆ ಕಾಮಗಾರಿ ಪೂರ್ಣಗೊಳಿಸಿ ಹಣ ಎತ್ತುತ್ತಾರೆ. ಇದೆಲ್ಲ ನೋಡಿದರೆ ಅಧಿಕಾರಿಗಳು ದುರುದ್ದೇಶದಿಂದಲೇ.. ಹೀಗೆ ಮಾಡುತ್ತಾರೆ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣಿಸುತ್ತದೆ’ ಎನ್ನುತ್ತಾರೆ ಆದರ್ಶ ಕಾಲೊನಿಯ ನಿವಾಸಿ ಶಿವು.

ನಮ್ಮ ರಸ್ತೆಯುದ್ದಕ್ಕೂ ಹೊಸದಾಗಿ ಚರಂಡಿ ನಿರ್ಮಿಸಲು ಮನೆ, ವಾಣಿಜ್ಯ ಸಂಕೀರ್ಣಗಳ ಕಟ್ಟಡಗಳನ್ನು ತೆರವುಗೊಳಿಸಿದ್ದಾರೆ. ಒಂದೆಡೆ ರಸ್ತೆಯ ಒಂದಿ ಬದಿ ಕಟ್ಟಡಗಳ ಅವಶೇಷಗಳು ಬಿದ್ದಿವೆ. ಇನ್ನೊಂದೆಡೆ, ಚರಂಡಿಗಾಗಿ ನೆಲ ಅಗೆದಿರುವುದರಿಂದ ನಡೆದಾಡಲು ಸಾಧ್ಯವಾಗುತ್ತಿಲ್ಲ. ಇಷ್ಟರಲ್ಲೇ ಕಾಮಗಾರಿ ಕೂಡ ಮುಗಿಸಲು ಸಾಧ್ಯವಾಗುವುದಿಲ್ಲ. ಒಂದು ಜೋರು ಮಳೆ ಬಂದರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಅಧಿಕಾರಿಗಳು ವಿವೇಕ, ತರ್ಕವಿಲ್ಲದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇರೇನೂ ಇಲ್ಲ’ ಎಂದು ಹೊಸ ಬಸ್‌ ನಿಲ್ದಾಣ ಸಮೀಪದ ನಿವಾಸಿ ರಾಘವೇಂದ್ರ ಗೋಳು ತೋಡಿಕೊಂಡರು.

ಇದು ನಗರದ ಪರಿಸ್ಥಿತಿಯಷ್ಟೇ ಅಲ್ಲ. ತಾಲ್ಲೂಕು ಕೇಂದ್ರಗಳೂ ಇದಕ್ಕೆ ಹೊರತಾಗಿಲ್ಲ. ಅಲ್ಲಲ್ಲಿ ಚರಂಡಿ ಸ್ವಚ್ಛಗೊಳಿಸುವ ಕೆಲಸ ಆರಂಭಿಸಲಾಗಿದೆ. ಆದರೆ, ರಾಜಕಾಲುವೆಗಳು ತುಂಬಿ ಹರಿಯುತ್ತಿದ್ದರೂ ಅವುಗಳತ್ತ ಗಮನಹರಿಸಿಲ್ಲ. ಇದು ಸ್ಥಳೀಯ ಆಡಳಿತಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಹಿಡಿಶಾಪ ಹಾಕುತ್ತಾರೆ ನಾಗರಿಕರು.

ಚರಂಡಿ ಶುಚಿ, ಜಲ ಶುದ್ಧೀಕರಣ:

ಜನವಾಡ: ಮಳೆಗಾಲ ಆರಂಭವಾಗಲಿರುವ ಕಾರಣ ಬೀದರ್ ತಾಲ್ಲೂಕಿನ ಜನವಾಡ ಗ್ರಾಮ ಪಂಚಾಯಿತಿಯು ಚರಂಡಿ ಸ್ವಚ್ಛತೆ ಹಾಗೂ ಜಲ ಶುದ್ಧೀಕರಣಕ್ಕೆ ಮುಂದಾಗಿದೆ.

ಈಗಾಗಲೇ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಚರಂಡಿಗಳ ಸ್ವಚ್ಛತೆ ಆರಂಭಿಸಿದೆ. ಚರಂಡಿ ಸುತ್ತಮುತ್ತ ಬ್ಲೀಚಿಂಗ್ ಪೌಡರ್ ಸಿಂಪಡಿಸುತ್ತಿದೆ. ಸಾರ್ವಜನಿಕ ತೆರೆದ ಬಾವಿ ಹಾಗೂ ಓವರ್ ಹೆಡ್ ಟ್ಯಾಂಕ್‍ಗಳಿಗೂ ಬ್ಲೀಚಿಂಗ್ ಪೌಡರ್ ಹಾಕಿ ನೀರು ಶುದ್ಧಗೊಳಿಸುತ್ತಿದೆ.

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದು ಸಾಮಾನ್ಯ. ಪಂಚಾಯಿತಿಯಿಂದ ಸ್ವಚ್ಛತೆಗೆ ಮೊದಲ ಆದ್ಯತೆ ಕೊಡಲಾಗುತ್ತಿದೆ. ಈಗಾಗಲೇ ಚರಂಡಿ, ತೆರೆದ ಬಾವಿ ಹಾಗೂ ಕುಡಿಯುವ ನೀರಿನ ಟ್ಯಾಂಕ್‍ಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗುತ್ತಿದೆ ಎಂದು ಹೇಳುತ್ತಾರೆ ಜನವಾಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಹಿರೇಮಠ.

ಪೂರಕ ಮಾಹಿತಿ: ನಾಗೇಶ ಪ್ರಭಾ, ಬಸವರಾಜ ಪ್ರಭಾ, ಮಾಣಿಕ್‌ ಭುರೆ, ಮನ್ಮಥ ಸ್ವಾಮಿ, ವೀರೇಶ ಮಠಪತಿ, ಗುಂಡು ಅತಿವಾಳ

ಹುಮನಾಬಾದ್‌ ಪಟ್ಟಣದಲ್ಲಿ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ
ಹುಮನಾಬಾದ್‌ ಪಟ್ಟಣದಲ್ಲಿ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ
ಬಸವಕಲ್ಯಾಣದಲ್ಲಿ ರಾಜಕಾಲುವೆಯ ದುಸ್ಥಿತಿ
ಬಸವಕಲ್ಯಾಣದಲ್ಲಿ ರಾಜಕಾಲುವೆಯ ದುಸ್ಥಿತಿ

ಚರಂಡಿಗಳ ಸ್ವಚ್ಛತೆ ಹುಮನಾಬಾದ್ : ಮಳೆಗಾಲ ಸಮೀಪಿಸುತ್ತಿದ್ದಂತೆ ಪಟ್ಟಣದ ಮುಖ್ಯರಸ್ತೆ ವೃತ್ತಗಳು ಹಾಗೂ ತಗ್ಗು ಪ್ರದೇಶಗಳು ಹಾಗೂ ಮಳೆಯಾದಾಗ ನೀರು ಸಂಗ್ರಹಗೊಳ್ಳುವ ಸ್ಥಳಗಳನ್ನು ಗುರುತಿಸಿರುವ ಪುರಸಭೆ ಅಧಿಕಾರಿಗಳು ನೀರು ಸರಾಗವಾಗಿ ಹರಿದುಹೋಗಲು ಕೆಲಸ ಆರಂಭಿಸಿದ್ದಾರೆ. ಕಳೆದ ಎರಡು ದಿನಗಳಿಂದ ಪಟ್ಟಣದಲ್ಲಿರುವ ಮೂರು ರಾಜ ಕಾಲುವೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿನ ಚರಂಡಿಗಳ ಸ್ವಚ್ಚತೆ ಕೆಲಸ ಮಾಡಲಾಗುತ್ತಿದೆ. ಮಳೆಗಾಲ ಬಂದರೆ ಪಟ್ಟಣದ ನಾಗರಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ ತಿಳಿಸಿದರು.

ಮಳೆಗಾಲದಲ್ಲಿ ಸ್ವಚ್ಛತೆ ಚಿಟಗುಪ್ಪ: ಪಟ್ಟಣದಲ್ಲಿ ಮಳೆಗಾಲದಲ್ಲಿ ಆಗುವ ಅನಾಹುತಗಳನ್ನು ನಿಯಂತ್ರಿಸಲು ಪುರಸಭೆ ಮುನ್ನೆಚ್ಚರಿಕೆ ಕ್ರಮಗಳು ಕೈಗೊಂಡಿದೆ. ಪಟ್ಟಣದ ಹೊಸ ಬಸ್ ನಿಲ್ದಾಣ ಎದುರುಗಡೆಯ ರಸ್ತೆಯಲ್ಲಿ ಮಳೆ‌ನೀರು ರಭಸವಾಗಿ ಹರಿದು ಪಟ್ಟಣದ ಒಳಗಡೆ ಬರುತ್ತವೆ. ಅದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪಟ್ಟಣದ ಎಲ್ಲ ವಾರ್ಡ್‌ಗಳ ಚರಂಡಿ ಮೇಲೆ ಈ ತಿಂಗಳಲ್ಲಿ ಬ್ಲೀಚಿಂಗ್‌ ಪೌಡರ್‌ ಸಿಂಪರಣೆ ಮಾಡಲಾಗುವುದು. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೂ ಸೂಚನೆ ನೀಡಲಾಗಿದೆ. ಯಾವುದೇ ವ್ಯಕ್ತಿ ಸಾಂಕ್ರಾಮಿಕ ರೋಗದಿಂದ ಬಳಲಿ ಆಸ್ಪತ್ರೆ ಗೆ ಬಂದಲ್ಲಿ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ತಗ್ಗು ಪ್ರದೇಶದ ಮನೆಗಳಿಗೆ ಸಮಸ್ಯೆ ಔರಾದ್: ಮಳೆಯಾದರೆ ಪಟ್ಟಣದ ವಿವಿಧೆಡೆ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಮಸ್ಯೆಯಾಗುತ್ತಿದೆ. ಮಳೆಗಾಲದಲ್ಲಿ ಕುಂಬಾರ ಗಲ್ಲಿ ರಾಮನಗರ ಶಿಕ್ಷಕರ ಕಾಲೊನಿಯ ಕೆಲ ಭಾಗ ಸೇರಿದಂತೆ ಹಲವೆಡೆ ಅವಾಂತರ ಸೃಷ್ಟಿಯಾಗುತ್ತದೆ. ಭವಾನಿ ಮಂದಿರದ ಬಳಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆಯಿಲ್ಲದೆ ಹೊಳೆಯಾಗಿ ಪರಿಣಮಿಸುತ್ತದೆ. ಇಲ್ಲಿ ವಾಸಿಸುವ ಜನ ಪ್ರತಿ ವರ್ಷ ಮಳೆಗಾಲದಲ್ಲಿ ತೊಂದರೆ ಎದುರಿಸಬೇಕಾಗಿದೆ. ತಾಲ್ಲೂಕು ಪಂಚಾಯಿತಿ ಕಚೇರಿ ಹಿಂಬದಿಯ ಜನತಾ ಕಾಲೊನಿಯ ಜನ ಮಳೆ ನೀರಿನಲ್ಲಿ ರಸ್ತೆ ದಾಟುವುದು ದೊಡ್ಡ ಸಮಸ್ಯೆ. ಇಲ್ಲಿ ಗಂಟೆಗಟ್ಟಲೇ ಸಂಚಾರ ಸ್ಥಗಿವಾಗುತ್ತದೆ. ಈ ಕಾಲೊನಿ ಮನೆಗಳಿಗೂ ನೀರು ಬರುತ್ತದೆ. ಸಮಸ್ಯೆ ಪರಿಹರಿಸುವಂತೆ ಪಟ್ಟಣ ಪಂಚಾಯಿತಿಗೆ ಹಲವು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಜೆಡಿಎಸ್ ಮುಖಂಡ ಮಲ್ಲಿಕಾರ್ಜುನ ಶೆಟಕಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಟ್ಟಣದ ವಿವಿಧೆಡೆ ಚರಂಡಿಗಳಲ್ಲಿ ಹೂಳು ತಂಬಿದೆ. ಅನೇಕ ಕಡೆ ಚರಂಡಿ ಅತಿಕ್ರಮಣವಾಗಿವೆ. ಈಗ ಮಳೆ ಬಂದರೆ ತುಂಬಾ ತೊಂದರೆಯಾಗಲಿದೆ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ತಿಳಿಸಿದ್ದಾರೆ. ‘ಮಳೆಯಿಂದ ಸಮಸ್ಯೆಯಾಗಬಹುದಾದ ಕೆಲ ಪ್ರದೇಶ ಗುರುತಿಸಲಾಗಿದೆ. ಅಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಯಾರಿ ನಡೆಸಿದ್ದೇವೆ. ಈ ಕುರಿತು ಆಡಳಿತಾಧಿಕಾರಿಗಳಾದ ತಹಶೀಲ್ದಾರ್  ಅವರ ಗಮನಕ್ಕೂ ತರಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ವಾಮಿದಾಸ ತಿಳಿಸಿದ್ದಾರೆ.

ಎಚ್ಚೆತ್ತುಕೊಳ್ಳದ‌ ನಗರಸಭೆ                                             

ಬಸವಕಲ್ಯಾಣ: ಜಿಲ್ಲೆಯಲ್ಲಿನ ಎರಡನೇ ದೊಡ್ಡ ಪಟ್ಟಣವಾದರೂ ಚರಂಡಿ ವ್ಯವಸ್ಥೆ ಸರಿ‌‌ ಇಲ್ಲದ್ದರಿಂದ ಮಳೆ ನೀರು ಮನೆ ಮತ್ತು ಅಂಗಡಿಗಳಿಗೆ‌ ನುಗ್ಗುತ್ತಿದ್ದು ಜನರು ಹಾನಿ ಅನುಭವಿಸುತ್ತಿದ್ದಾರೆ.       ತ್ರಿಪುರಾಂತದಿಂದ ಡಾ.ಅಂಬೇಡ್ಕರ್ ವೃತ್ತ ಹಾಗೂ ಮಹಾತ್ಮ ಗಾಂಧಿ ವೃತ್ತದ ಮೂಲಕ ಕೋಟೆಯ ವರೆಗೆ ಹೋಗುವ ಮತ್ತು ನಾರಾಯಣಪುರ ರಸ್ತೆ ಕ್ರಾಸ್‌ದಿಂದ ಮುಖ್ಯ ಬಸ್ ನಿಲ್ದಾಣದವರೆಗೆ ಹೋಗುವ ರಸ್ತೆ‌ ಪಕ್ಕದಲ್ಲಿ ನೀರು ಸರಾಗವಾಗಿ‌ ಮುಂದಕ್ಕೆ ಸಾಗುವುದಕ್ಕೆ ಅನುಕೂಲ ಆಗುವ ಚರಂಡಿಗಳಿಲ್ಲ. ಕೆಲ ಸ್ಥಳದಲ್ಲಿ ಚರಂಡಿ ಇದ್ದರೂ ಕಲ್ಲು ಮಣ್ಣು ಸಂಗ್ರಹಗೊಂಡಿದೆ. ಹೀಗಾಗಿ ಮಳೆಯಾದಾಗ ಅಲ್ಲಲ್ಲಿ ನೀರು‌ ಸಂಗ್ರಹಗೊಂಡು ಮಿನಿ‌ ಕೆರೆಗಳು‌ ಸೃಷ್ಟಿ ಆಗುತ್ತವೆ.                     ‌                

ನಗರದ ಎಲ್ಲ ನೀರು ಇಳಿಜಾರು ಪ್ರದೇಶವಾದ  ಬಸ್ ನಿಲ್ದಾಣದ ಕಡೆಗೆ ಹೋಗಿ ಅಲ್ಲಿ ಸಂಗ್ರಹಗೊಳ್ಳುತ್ತದೆ. ಆದ್ದರಿಂದ ಕೈಕಾಡಿ ಗಲ್ಲಿ ಪ್ರಕಾಶ ಗಲ್ಲಿ‌ ಸ್ವಾಮಿ ನಾರಾಯಣ ಗಲ್ಲಿ ಹಾಗೂ‌ ಜ್ಞಾನಪ್ರಿಯ ಶಾಲೆ ಸುತ್ತಲಿನ ಓಣಿಗಳ ಮನೆಗಳು ಜಲಾವೃತಗೊಳ್ಳುತ್ತವೆ. ಈ ಭಾಗದಲ್ಲಿ ಮನೆಗಳಿಗೆ‌ ನೀರು‌ ನುಗ್ಗಿದಾಗ‌ ಹಿಂದಿನ ಉಪ ವಿಭಾಗಾಧಿಕಾರಿ ತಹಶೀಲ್ದಾರ್ ಪೌರಾಯುಕ್ತರೇ ಸ್ಥಳದಲ್ಲಿದ್ದು ನೀರು ಖಾಲಿ ಮಾಡಿಸಿದ್ದಾರೆ. ಆದರೆ ಚರಂಡಿ‌ ವ್ಯವಸ್ಥೆ ‌ಸುಧಾರಣೆಗೆ ಮಾತ್ರ ಇದುವರೆಗೆ‌ ಪ್ರಯತ್ನ ನಡೆದಿಲ್ಲ. ಕೆಲವೆಡೆ ಕಳಪೆ ಕಾಮಗಾರಿ‌ ನಡೆದಿದ್ದರಿಂದಲೂ ಚರಂಡಿಗಳು‌ ಹಾಳಾಗಿವೆ.                                                        

ಕಾಡುತ್ತಿದೆ ಭಯ ಭಾಲ್ಕಿ: ಪಟ್ಟಣದ ಶರಣ ನಗರ ಮಾಸುಮ್‌ ಪಾಶಾ ಕಾಲೊನಿ ಅಂಬೇಡ್ಕರ್‌ ನಗರ ಹುಲಸೂರ ಬೇಸ್‌ ಬಡಾವಣೆ ಸೇರಿದಂತೆ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಚರಂಡಿಗಳು ಸ್ವಚ್ಛವಾಗಿಲ್ಲ. ಇನ್ನೇನು ಮಳೆಗಾಲ ಸಮೀಪಿಸುತ್ತಿದೆ. ಎಲ್ಲಿ ಚರಂಡಿ ನೀರಿನೊಂದಿಗೆ ಮಳೆ ನೀರು ಬೆರೆತು ಮನೆಗಳಿಗೆ ನುಗ್ಗುತ್ತದೆಯೋ ಎನ್ನುವ ಭಯ ಪಟ್ಟಣ ವಾಸಿಗಳಿಗೆ ಕಾಡುತ್ತಿದೆ. ಸುಗಮ ಚರಂಡಿ ವ್ಯವಸ್ಥೆ ಕಲ್ಪಿಸದ ಚರಂಡಿ ಸ್ವಚ್ಛಗೊಳಿಸದ ಕಾರಣ ಕಳೆದ ಮಳೆಗಾಲದಲ್ಲಿ ಸುರಿದ ಭಾರಿ ಮಳೆಗೆ ಆನಂದವಾಡಿ ರಸ್ತೆಯಲ್ಲಿ ಭಾರಿ ನೀರು ಸಂಗ್ರಹಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಜೊತೆಗೆ ಸಮೀಪದ ಮನೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ‘ಮುಖ್ಯರಸ್ತೆ ಅಕ್ಕಪಕ್ಕದ ಚರಂಡಿ ಸ್ವಚ್ಛಗೊಳಿಸಲಾಗುತ್ತಿದೆ. ಶೀಘ್ರದಲ್ಲಿ ಎಲ್ಲೆಡೆ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುವುದು’ ಎಂದು ಪುರಸಭೆ ಪರಿಸರ ಎಂಜಿನಿಯರ್‌ ಸಂಗಮೇಶ ಕಾರಬಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT