ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿಗೆ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳಿಗೆ ಬೀದರ್‌ ಜಿಲ್ಲಾಡಳಿತ ನೋಟಿಸ್

ಇನ್ನೂ ಪಾವತಿಯಾಗದ ರೈತರ ಕಬ್ಬಿನ ಬಾಕಿ
Last Updated 5 ಜುಲೈ 2020, 19:30 IST
ಅಕ್ಷರ ಗಾತ್ರ

ಬೀದರ್: 2019-20ನೇ ಸಾಲಿಗೆ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಬಾಕಿ ಪಾವತಿಸದ ಎರಡು ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಡಳಿತ ನೋಟಿಸ್‌ ಜಾರಿ ಮಾಡಿದೆ.

ಬೀದರ್‌ ತಾಲ್ಲೂಕಿನ ಇಮಾಮ್‌ಪುರ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ 3,823 ರೈತರು ಬೆಳೆದ 2.22 ಲಕ್ಷ ಮೆಟ್ರಿಕ್ ಟನ್‌ ಕಬ್ಬು ನುರಿಸಿದೆ. ಎಫ್‌ಆರ್‌ಪಿ ದರದಂತೆ ₹ 58.02 ಕೋಟಿಗಳ ಪೈಕಿ ಈಗಾಗಲೇ ₹ 53.17 ಕೋಟಿ ರೈತರ ಬ್ಯಾಂಕ್ ಖಾತೆಗೆ ಪಾವತಿಸಿದೆ. ರೈತರಿಗೆ ಇನ್ನೂ ₹ 4.84 ಕೋಟಿ ಪಾವತಿಸಬೇಕಿದೆ.

ಮೊಗದಾಳದ ಬೀದರ್ ಕಿಸಾನ್ ಸಹಕಾರ ಸಕ್ಕರೆ ಕಾರ್ಖಾನೆಯು 5,363 ರೈತರು ಬೆಳೆದ 3.22 ಲಕ್ಷ ಮೆಟ್ರಿಕ್ ಟನ್‌ ಕಬ್ಬು ನುರಿಸಿದೆ. ಎಫ್‌ಆರ್‌ಪಿ ದರದಂತೆ ₹ 89.49 ಕೋಟಿಗಳಲ್ಲಿ ಈಗಾಗಲೇ ₹ 82.02 ಕೋಟಿ ರೈತರ ಬ್ಯಾಂಕ್ ಖಾತೆಗೆ ಪಾವತಿಸಿದೆ. ರೈತರ ₹ 7.46 ಕೋಟಿ ಬಾಕಿ ಉಳಿಸಿಕೊಂಡಿದೆ.

ಹಿಂದಿನ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಮೇ 22 ರಂದು ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸಭೆ ಕರೆದು ರೈತರ ಕಬ್ಬಿನ ಬಾಕಿ ಪಾವತಿಸುವಂತೆ ಸೂಚನೆ ನೀಡಿದ್ದರು. ಸಕ್ಕರೆ ಕಾರ್ಖಾನೆಯವರು ತಾಂತ್ರಿಕ ಕಾರಣ ತಮ್ಮದೆಯಾದ ಸಮಯ ತೆಗೆದುಕೊಂಡಿದ್ದರು.

ಸಕ್ಕರೆ ಕಾರ್ಖಾನೆಗಳಿಗೆ ಜೆಸ್ಕಾಂನಿಂದ ಬಾಕಿ ಬರಬೇಕಾದ ಕಾರಣ ರೈತರಿಗೆ ಹಣ ಪಾವತಿಸಲು ವಿಳಂಬವಾಗುತ್ತಿದೆ. ಜೂನ್ 15 ರ ಒಳಗೆ ರೈತರ ಸಂಪೂರ್ಣ ಬಾಕಿ ಸಂದಾಯ ಮಾಡಲಾಗುವುದು ಎಂದು ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದರು.

2020-21ನೇ ಸಾಲಿನ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಪಾವತಿಸಬೇಕಾದ ಒಟ್ಟು ಮೊತ್ತದಲ್ಲಿ ₹5 ಕೋಟಿಯನ್ನು ತಿಂಗಳಾಂತ್ಯದೊಳಗೆ ಸಂದಾಯ ಮಾಡಲಾಗುವುದು ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಭರವಸೆ ನೀಡಿದ್ದರು.

ಹಣ ಪಾವತಿಸದ ಕಾರಣ ಜಿಲ್ಲಾಡಳಿತ 2020ರ ಏಪ್ರಿಲ್ 7 ಹಾಗೂ ಏಪ್ರಿಲ್‌ 27 ರಂದು ಕಾರ್ಖಾನೆಗಳಿಗೆ ನೋಟಿಸ್‌ ಜಾರಿ ಮಾಡಿತ್ತು. ಮೇ 22ರ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ಸೂಚನೆಯನ್ನೂ ನೀಡಿತ್ತು. ಕಾರ್ಖಾನೆಗಳು ನುಡಿದಂತೆ ನಡೆಯದ ಕಾರಣ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು 15 ದಿನಗಳಲ್ಲಿ ರೈತರ ಬಾಕಿ ಹಣ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT