ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಪ್ಪಳಗಾಂವ್ ರೈತನ ಕೈ ಹಿಡಿದ ನರೇಗಾ; ಕೃಷಿಯಲ್ಲಿ ಸಂತೃಪ್ತ ಜೀವನ

ಉತ್ತಮ ಇಳುವರಿ ಕೊಡುತ್ತಿರುವ ಸೀತಾಫಲ
Last Updated 1 ನವೆಂಬರ್ 2021, 4:35 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಹಿಪ್ಪಳಗಾಂವ್ ಗ್ರಾಮದ ರೈತರೊಬ್ಬರು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಯನ್ನು (ನರೇಗಾ) ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲತಃ ವ್ಯಾಪಾರಿಯಾಗಿದ್ದ ಸಂತೋಷ ಪಾಟೀಲ್, ಈಗ ಕೃಷಿಯನ್ನೇ ತಮ್ಮ ಪೂರ್ಣಾವಧಿ ಕಾಯಕ ಮಾಡಿಕೊಂಡಿದ್ದಾರೆ. ಉದ್ಯೋಗ ಖಾತರಿ ನೆರವು ಹಾಗೂ ತಮ್ಮ ಶ್ರಮದಿಂದಾಗಿ ಬರಡು ಭೂಮಿಗೆ ಜೀವ ತುಂಬಿದ್ದಾರೆ.

2017ರ ಮೊದಲು ಮಹಾರಾಷ್ಟ್ರದ ಉದಗೀರನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದ ಇವರು ಅದರಲ್ಲಿ ಪೂರ್ಣ ಯಶಸ್ವಿ ಕಾಣಲು ಸಾಧ್ಯವಾಗಲಿಲ್ಲ. ಹೀಗಾಗಿ ಆ ವ್ಯಾಪಾರವನ್ನು ತಮ್ಮ ಸಹೋದರನಿಗೆ ಒಪ್ಪಿಸಿ ಊರಿಗೆ ವಾಪಸ್ ಮರಳಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಪಾಳು ಬಿದ್ದ ಪಿತ್ರಾರ್ಜಿತ ಆಸ್ತಿಗೆ ಮರುಜೀವ ಕೊಡಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಎರಡು ಕಿ.ಮೀ. ದೂರದ ಬಾವಿಯಿಂದ ಪೈಪ್‍ಲೈನ್ ಮೂಲಕ ನೀರು ತಂದಿದ್ದಾರೆ. ನರೇಗಾದಲ್ಲಿ ಗುಂಡಿ ತೋಡಿ ವಿವಿಧ ತಳಿಯ 1,600 ಸಸಿಗಳನ್ನು ನೆಟ್ಟಿದ್ದಾರೆ. ಮೂರು ವರ್ಷಗಳ ಹಿಂದೆ ನಾಟಿ ಮಾಡಿದ ಸೀತಾಫಲ ಈ ವರ್ಷ ಇಳುವರಿ ಕೊಡುತ್ತಿದೆ. ಈಗಾಗಲೇ ₹ 30 ಸಾವಿರದ ಸೀತಾಫಲ ಮಾರಾಟ ಮಾಡಿದ್ದಾರೆ. ಲಾಕ್‍ಡೌನ್ ಮೊದಲು ₹ 3 ಲಕ್ಷದ ನುಗ್ಗೆಕಾಯಿ ಮಾರಿ ಹಣ ಮಾಡಿಕೊಂಡಿದ್ದಾರೆ.

‘300 ನಿಂಬೆ ಗಿಡಗಳಿದ್ದು, ಈ ಬೇಸಿಗೆಯಲ್ಲಿ ಇಳುವರಿ ನಿರೀಕ್ಷಿಸಲಾಗಿದೆ. 300 ಮಾವಿನ ಗಿಡಗಳು ಇವೆ. ಇವುಗಳ ಜತೆ ಅಂತರ ಬೆಳೆಯಾಗಿ ತರಕಾರಿ ಬೆಳೆಸುತ್ತೇನೆ. ಅದರಿಂದಲ್ಲೂ ನಿತ್ಯ ಕೈಯಲ್ಲಿ ಹಣ ಓಡಾಡುತ್ತಿದೆ. ಹೀಗಾಗಿ ಸದ್ಯ ನಾನು ಕೃಷಿ ಕಾಯಕದಲ್ಲೇ ಸಂತೃಪ್ತಿಯಿಂದ ಇದ್ದೇನೆ’ ಎಂದು ಹೇಳುತ್ತಾರೆ ರೈತ ಸಂತೋಷ ಪಾಟೀಲ.

‘ಆರಂಭದಲ್ಲಿ ನೀರು ತರಲು ಹಾಗೂ ಒಂದಿಷ್ಟು ನಿರ್ವಹಣೆ ಹೊರತುಪಡಿಸಿ ಎಲ್ಲವೂ ಉದ್ಯೋಗ ಖಾತರಿಯಲ್ಲಿ ಆಗಿದೆ. ಇದಕ್ಕೆಲ್ಲ ಅರಣ್ಯ ಇಲಾಖೆ ಅಧಿಕಾರಿಗಳ ಕರ್ತವ್ಯನಿಷ್ಠೆ ಹಾಗೂ ರೈತರ ಮೇಲಿನ ಕಾಳಜಿ ಪ್ರಮುಖ ಕಾರಣ’ ಎಂದು ಅವರು ತಿಳಿಸಿದ್ದಾರೆ.

‘ಉದ್ಯೋಗ ಖಾತರಿ ಬಹಳ ಅತ್ಯುತ್ತಮ ಕಾರ್ಯಕ್ರಮ. ಹಿಪ್ಪಳಗಾಂವ್ ಗ್ರಾಮದ ಸಂತೋಷ ಪಾಟೀಲ ಅವರ ಹೊಲದಲ್ಲಿ 15 ಕಾರ್ಮಿಕರು ಒಂದು ವಾರ ಕೆಲಸ ಮಾಡಿದ ಪರಿಣಾಮ ಈಗ ಅಲ್ಲಿ ಸಾಕಷ್ಟು ಬದಲಾವಣೆಯಾಗಿದೆ’ ಎಂದು ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ ರಾಮಪುರೆ ಹೇಳುತ್ತಾರೆ.

‘ತಾಲ್ಲೂಕಿನ ಅನೇಕ ರೈತರು ನರೇಗಾ ಯೋಜನೆ ಬಳಸಿಕೊಂಡು ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಲಾಕ್‍ಡೌನ್‍ದಲ್ಲಿ ಇದರಿಂದ ಸಾಕಷ್ಟು ಪರಿಣಾಮಕಾರಿ ಕೆಲಸ ಆಗಿದೆ. ನೂರಾರು ಕಾರ್ಮಿಕ ಕುಟುಂಬಗಳಿಗೆ ಕೆಲಸ ಸಿಕ್ಕಿದೆ. ಪಾಳು ಬಿದ್ದ ಅನೇಕ ರೈತರ ಜಮೀನುಗಳಿಗೆ ಮರು ಜೀವ ಸಿಕ್ಕಿದೆ’ ಎಂದು ವಲಯ ಅರಣ್ಯಾಧಿಕಾರಿ ವೀರೇಶ್ ಕಲ್ಯಾಣಿ ತಿಳಿಸಿದ್ದಾರೆ.

***

ನರೇಗಾ ಯೋಜನೆಯಲ್ಲಿ ರೈತರ ಹೊಲಗಳಲ್ಲಿ ಗುಂಡಿ ತೋಡಿ ಸಸಿಗಳು ನಾಟಿ ಮಾಡಿಕೊಡಲು ಅವಕಾಶವಿದೆ

-ವೀರೇಶ್ ಕಲ್ಯಾಣಿ, ವಲಯ ಅರಣ್ಯಾಧಿಕಾರಿಗಳು ಸಾಮಾಜಿಕ ವಲಯ ಔರಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT