ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂಪುರ ನೃತ್ಯೋತ್ಸವ: ಪ್ರೇಕ್ಷಕರಲ್ಲಿ ಪುಳಕ

ಗರ್ಭಾ, ಬಂಗಾಳಿ, ಭರತ ನಾಟ್ಯ ಪ್ರದರ್ಶನ
Last Updated 30 ಜನವರಿ 2023, 15:17 IST
ಅಕ್ಷರ ಗಾತ್ರ

ಬೀದರ್: ನೂಪುರ ನೃತ್ಯ ಅಕಾಡೆಮಿಯು ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ನೂಪುರ ನೃತ್ಯೋತ್ಸವವು ನಾಟ್ಯಗಳ ಸಂಗಮಕ್ಕೆ ವೇದಿಕೆಯಾಯಿತು.

ನೃತ್ಯೋತ್ಸವದಲ್ಲಿ ಅನಾವರಣಗೊಂಡ ಬಂಗಾಳಿ ನೃತ್ಯ, ಗುಜರಾತ್‍ನ ಗರ್ಭಾ ನೃತ್ಯ, ರಾಜಸ್ತಾನಿ ನೃತ್ಯ, ಕೊಂಕಣಿ ನೃತ್ಯ, ಪಾಶ್ಚಾತ್ಯ-ಶಾಸ್ತ್ರೀಯ ನೃತ್ಯ ಬೆಸೆಯುವ ಫ್ಯೂಷನ್ ನೃತ್ಯ, ಭರತ ನಾಟ್ಯ, ನಟರಾಜ ನೃತ್ಯ, ದೇಶ ಭಕ್ತಿ, ಗೀತೆ, ಹಳೆಯ ಹಿಂದಿ ಗೀತೆ ನೃತ್ಯಗಳು ಪ್ರೇಕ್ಷಕರನ್ನು ಪುಳಕಿತಗೊಳಿಸಿದವು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಗುರು ಬಹೆನ್‍ಜಿ ಅವರು ‘ನಟರಾಜ'ನಿಗೆ ಆರತಿ ಎತ್ತುವ ಮೂಲಕ ನೃತ್ಯ ಸಂಭ್ರಮ ಶುರುವಾಯಿತು. ಕನ್ನಡ ತಾಯಿ ಭುವನೇಶ್ವರಿ ಹಾಗೂ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳಿಗೆ ಸಲ್ಲಿಸಿದ ನೃತ್ಯ ನಮನ ಗಮನ ಸೆಳೆದವು.

ಜಾನಪದ ವಿಭಾಗದಲ್ಲಿ ಕಲಾವಿದೆ ಉಷಾ ಪ್ರಭಾಕರ ಅವರು ಪ್ರದರ್ಶಿಸಿದ ‘ಚೆಲ್ಲಿದರು ಮಲ್ಲಿಗೆಯಾ', 'ಸುಗ್ಗಿ ಕಾಲ ಮೂಡಿ ಬಂದಿತೋ' ನೃತ್ಯಗಳು ಸುಗ್ಗಿಯ ನೆನಪು ಮಾಡಿಸಿದವು. ದೇವರ ಪೂಜೆ, ಹೂ ಕಟ್ಟುವುದು, ರಾಶಿ ಮಾಡುವುದು ಕಣ್ಣಿಗೆ ಹಬ್ಬ ನೀಡಿದವು. ವಚನ ನೃತ್ಯ ವಿಭಾಗದಲ್ಲಿ ಕಿರಿಯ ವಿದ್ಯಾರ್ಥಿಗಳು ನೀಡಿದ ಅಲ್ಲಮನ ನೃತ್ಯ ಪ್ರದರ್ಶನವು ಉತ್ತಮ ಸಂದೇಶ ನೀಡಿತು.

ಕೊಂಕಣಿ ನೃತ್ಯ ಹೊಸ ಲೋಕ ಸೃಷ್ಟಿಸಿತು. ‘ಕಾಂತಾರ’ದ ರೂಪಕ ನೃತ್ಯ, ದೈವ ಪಾರ್ತಿಯ ನರ್ತನ, ದುಷ್ಟ ಶಿಕ್ಷೆಯ ಅಭಿನಯ ಮನಸೂರೆಗೊಂಡವು. ಬಂಗಾಳಿ ನೃತ್ಯ ಬಂಗಾಳದ ಜಾನಪದ ತೆರೆದಿಟ್ಟರೆ, ಗುಜರಾತ್‍ನ ಗರ್ಭಾ ನೃತ್ಯ ಹಾಗೂ ಮಾತೆಯರ ಕೋಲಾಟ ಮನಸ್ಸಿಗೆ ಮುದ ನೀಡಿದವು. ಶಿವಾನಿ ಸ್ವಾಮಿ ಹಾಡಿದ ಹಳೆಯ ಹಿಂದಿ ಗೀತೆಗಳ ತಾಳಕ್ಕೆ ತಕ್ಕಂತೆ ಕಲಾವಿದರು ಆಕರ್ಷಕ ನೃತ್ಯ ಪ್ರದರ್ಶಿಸಿದರು.

ಉದ್ಘಾಟನೆ ನೆರವೇರಿಸಿದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ನೃತ್ಯಗಳು ಮನಸ್ಸನ್ನು ಅರಳಿಸುತ್ತವೆ. ಶರೀರಕ್ಕೆ ವ್ಯಾಯಾಮ ನೀಡುತ್ತವೆ. ಉತ್ತಮ ಸ್ವಾಸ್ಥ್ಯ ಕಾಯ್ದುಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಭರತನಾಟ್ಯ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಉಷಾ ಪ್ರಭಾಕರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಹಾರಕೂಡದ ಚನ್ನವೀರ ಶಿವಾಚಾರ್ಯರು ಮಾತನಾಡಿ, ಉತ್ತಮ ಆಚಾರ, ವಿಚಾರ ಹಾಗೂ ಶರಣರ ಸಂಗದಿಂದ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ವಿಶೇಷ ಉಪನ್ಯಾಸ ನೀಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ಭಾಲ್ಕಿಯ ಬಿ.ಕೆ. ಐಟಿ ನಿವೃತ್ತ ಪ್ರಾಚಾರ್ಯ ಪಿ.ಎನ್. ದಿವಾಕರ್, ಮಹೇಶ್ವರಿ ಹೇಡೆ, ಅರ್ಚನಾ ಮಾತನಾಡಿದರು.

ನೂಪುರ ನೃತ್ಯ ಅಕಾಡೆಮಿಯ ನಿರ್ದೇಶಕಿ ಉಷಾ ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು.

ಡಿಸಿಸಿ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕರಾದ ಸದಾಶಿವ ಪಾಟೀಲ, ರಾಜಕುಮಾರ ಆಣದೂರೆ, ಪ್ರಮುಖರಾದ ಸಿದ್ರಾಮಪ್ಪ ಆಣದೂರೆ, ಬಸವರಾಜ ರುದನೂರ, ಬಸವರಾಜ ಬಿರಾದಾರ, ಉಮೇಶ ನಾಯಕ್, ಬಾಬುರಾವ್ ದಾನಿ, ರೂಪಾ ಪಾಟೀಲ, ಭಾರತಿ ವಸ್ತ್ರದ್, ಮಂಗಲಾ ಭಾಗವತ್, ಶಾರದಾ ದಯಾನಂದ ಶೆಟ್ಟಿ, ವಿಜಯಲಕ್ಷ್ಮಿ ಚೊಂಡೆ, ಸತೀಶ್ ಕೊಟ್ಯಾನ್, ಮಮತಾ, ಪ್ರಫುಲ್ಲಾ ಪ್ರಭು, ಮಂಜುಳಾ, ಜ್ಯೋತಿ, ಶ್ವೇತಾ, ಸದ್ಗುಣಿ, ಕಾಜಲ್ ಠಾಕೂರ್ ಇದ್ದರು.

ನೂಪುರ ನೃತ್ಯ ಅಕಾಡೆಮಿಯ ಕಾರ್ಯದರ್ಶಿ ಪ್ರಭಾಕರ ಎ.ಎಸ್. ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯ ಸುಬ್ರಹ್ಮಣ್ಯ ಪ್ರಭು ನಿರೂಪಿಸಿದರು. ರಘುರಾಮ ಉಪಾಧ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT