ಬುಧವಾರ, ಜನವರಿ 20, 2021
26 °C
ಶರಣರ ಚಿಂತನೆಗಳ ಅನುಭವ ಮಂಟಪ ನಿರ್ಮಿಸಿ: ಬಸವರಾಜ ಧನ್ನೂರ

‘ಸನಾತನ ಪ್ರಗತಿಪರ' ಶೀರ್ಷಿಕೆಗೆ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ನೂತನ ಅನುಭವ ಮಂಟಪ ಭೂಮಿ ಪೂಜೆ ಕಾರ್ಯಕ್ರಮ ಕುರಿತು ಸರ್ಕಾರ ಪತ್ರಿಕೆಗಳಿಗೆ ಕೊಟ್ಟ ಜಾಹೀರಾತಿಗೆ ‘ಸನಾತನ ಪ್ರಗತಿ ಪರ ಚಿಂತನೆಗಳ ಮರು ಸೃಷ್ಟಿ’ ಎನ್ನುವ ಶೀರ್ಷಿಕೆ ನೀಡಿರುವುದಕ್ಕೆ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಸವಕಲ್ಯಾಣದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಅನುಭವ ಮಂಟಪವು ಶರಣರ ಪ್ರಗತಿ ಪರ ಚಿಂತನೆಗಳ ಮರು ಸೃಷ್ಟಿ ಆಗಲಿದೆಯೇ ಹೊರತು ಸನಾತನ ಪ್ರಗತಿ ಪರ ಚಿಂತನೆಗಳ ಮರು ಸೃಷ್ಟಿ ಅಲ್ಲ ಎಂದು ಹೇಳಿದ್ದಾರೆ.

ಬಸವಣ್ಣನವರು 12ನೇ ಶತಮಾನದಲ್ಲಿ ಸನಾತನ ಪರಂಪರೆ ವಿರುದ್ಧ ಸಿಡಿದೆದ್ದು ನವೀನ ಶರಣ ಪರಂಪರೆ ಹುಟ್ಟುಹಾಕಿದ್ದರು. ಅವರ ವಿಚಾರಧಾರೆಗಳು ಸನಾತನ ಪರಂಪರೆಯ ವಿರುದ್ಧವಾಗಿದ್ದವು. ಹೀಗಾಗಿ ಶರಣರ ಪ್ರಗತಿ ಪರ ಚಿಂತನೆಗಳನ್ನು ಸನಾತನ ಪ್ರಗತಿ ಪರ ಚಿಂತನೆಗಳೆಂದು ಬಿಂಬಿಸಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಬಸವಣ್ಣನವರ ಹಾಗೆ ವಿಶ್ವಮಾನ್ಯವಾದ ಪ್ರಗತಿ ಪರ ವಿಚಾರಧಾರೆಗಳನ್ನು ಹಿಂದೆ ಯಾರೂ ಮಂಡಿಸಿರಲಿಲ್ಲ. ಅದಕ್ಕಾಗಿಯೇ ಅಂದಿನ ಕಾಲಮಾನದಲ್ಲಿ ಅವರ ವಿಚಾರಧಾರೆಗಳನ್ನು ಒಪ್ಪಿಕೊಂಡು, ದೇಶದ ನಾನಾ ಭಾಗಗಳ ಎಲ್ಲ ಜಾತಿ, ಮತ, ಪಂಥಗಳ ಜನ ಬಸವಕಲ್ಯಾಣದತ್ತ ಮುಖ ಮಾಡಿದರು. ಆಗ ಹೊಸ ಪರಂಪರೆಯೇ ಉದಯಿಸಿತು. ಅದುವೇ ಬಸವ ಪರಂಪರೆ, ಶರಣ ಪರಂಪರೆ ಹಾಗೂ ವಚನ ಪರಂಪರೆ ಎಂದು ತಿಳಿಸಿದ್ದಾರೆ.

ಬಸವಾದಿ ಶರಣರು ಎಂದೆಂದಿಗೂ ಪ್ರಸ್ತುತವಾದ ವಿಶಿಷ್ಟ ಮೌಲ್ಯಗಳನ್ನು ಜಗತ್ತಿಗೆ ಕೊಟ್ಟಿದ್ದಾರೆ. ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿ ಇದ್ದ ಮೌಢ್ಯವನ್ನು ಕಿತ್ತೊಗೆದು ಹೊಸ ವ್ಯಕ್ತಿ ಹಾಗೂ ಸಮಾಜ ನಿರ್ಮಾಣ ಮಾಡಿದ್ದರು.
ಅವರದ್ದು ಸರ್ವರಿಗೂ ಸಮಾನ ಹಕ್ಕು ನೀಡಿದ, ಸ್ತ್ರೀ ಸ್ವಾತಂತ್ರ್ಯ ಕಲ್ಪಿಸಿದ, ವೃತ್ತಿ, ಮಾನವ ಘನತೆ ಎತ್ತಿ ಹಿಡಿದ ಹಾಗೂ ಹೊಸ ವೈಚಾರಿಕತೆ ಬಿತ್ತಿದ ಪರಂಪರೆ ಎಂದು ಹೇಳಿದ್ದಾರೆ.

ಶರಣ ಪರಂಪರೆಗೆ ಸನಾತನದೊಂದಿಗೆ ಥಳಕು ಹಾಕುವುದನ್ನು ಒಪ್ಪಲಾಗದು. ತತ್ವಕ್ಕೆ ಚ್ಯುತಿ ಬಂದರೆ ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ನೂತನ ಅನುಭವ ಮಂಟಪವು ಶರಣ ಪರಂಪರೆಯನ್ನು ಪ್ರತಿನಿಧಿಸುವ ಸ್ಮಾರಕವಾಗಲಿರುವ ಕಾರಣ ಶರಣ ಪರಂಪರೆಗೆ ಅನುಗುಣವಾಗಿಯೇ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಭಿನಂದನಾರ್ಹ ಕಾರ್ಯ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ₹ 500 ಕೋಟಿ ಅನುದಾನ ಘೋಷಿಸಿ, ನೂತನ ಅನುಭವ ಮಂಟಪಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ನುಡಿದಂತೆ ನಡೆದಿದ್ದಾರೆ. ಬಸವ ಭಕ್ತರ ಬಹುದಿನಗಳ ಬೇಡಿಕೆ ಈಡೇರಿಸಿದ ಅವರ ಕಾರ್ಯ ಅಭಿನಂದನಾರ್ಹವಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು