ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ‘ಹೃದಯ ರೋಗಕ್ಕೆ ಒಸಿಟಿ ಚಿಕಿತ್ಸಾ ಸೌಲಭ್ಯ ಆರಂಭ’

Published 17 ಫೆಬ್ರುವರಿ 2024, 6:14 IST
Last Updated 17 ಫೆಬ್ರುವರಿ 2024, 6:14 IST
ಅಕ್ಷರ ಗಾತ್ರ

ಬೀದರ್‌: ‘ಹೃದಯ ಸಂಬಂಧಿ ಕಾಯಿಲೆಗಳಿಗೆ ‘ಆಪ್ಟಿಕಲ್‌ ಕೊಹಿರೆನ್ಸ್‌ ಟೊಮೊಗ್ರಫಿ’ (ಒಸಿಟಿ) ತಂತ್ರಜ್ಞಾನದ ಮೂಲಕ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ನಗರದ ಗುದಗೆ ಹೃದಯ ಆಸ್ಪತ್ರೆಯಲ್ಲಿ ಕಲ್ಪಿಸಲಾಗಿದ್ದು, ಇಡೀ ಕಲ್ಯಾಣ ಕರ್ನಾಟಕದಲ್ಲಿಯೇ ಬೀದರ್‌ ಜಿಲ್ಲೆಯಲ್ಲಿ ಈ ಸೌಕರ್ಯ ಇದೆ’ ಎಂದು ಕಾರ್ಡಿಯೊಲಜಿಸ್ಟ್‌ ಡಾ. ನಿತಿನ್‌ ಗುದಗೆ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯ ಇಬ್ಬರಿಗೆ ಈ ತಂತ್ರಜ್ಞಾನದ ಮೂಲಕ ಚಿಕಿತ್ಸೆ ನೀಡಲಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ. ಬಿಪಿಎಲ್‌ ಕಾರ್ಡು ಹೊಂದಿರುವವರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು.

ಒಸಿಟಿ ಚಿಕಿತ್ಸಾ ಸೌಲಭ್ಯದ ಯಂತ್ರ ಬಹಳ ದುಬಾರಿಯಾದುದು. ಸೂಕ್ಷ್ಮ ಕ್ಯಾಮೆರಾದ ಸಹಾಯದಿಂದ ಹೃದಯ ಸಂಬಂಧಿ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದರ ಸಹಾಯದಿಂದ ರೋಗಿಗಳಿಗೆ ಸ್ಟಂಟ್‌ ಖಚಿತವಾಗಿ ಅಳವಡಿಸಲಾಗಿದೆಯೋ ಎಲ್ಲವೋ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬಹುದು ಎಂದರು.

ಆಸ್ಪತ್ರೆಯ ತಜ್ಞ ವೈದ್ಯ ಡಾ.ಸಚಿನ್‌ ಗುದಗೆ ಮಾತನಾಡಿ, ಶೀಘ್ರದಲ್ಲಿಯೇ ಹೃದಯ ಬೈಪಾಸ್ ಸರ್ಜರಿ ಸೌಲಭ್ಯ ಕೂಡ ಒದಗಿಸಲಾಗುವುದು. ಹೃದಯ ಸಂಬಂಧಿ ರೋಗಿಗಳು ಹೈದರಾಬಾದ್, ಸೊಲ್ಲಾಪುರ, ಬೆಂಗಳೂರಿಗೆ ಹೋಗುವ ಅಗತ್ಯ ಇರುವುದಿಲ್ಲ. ಮೂರಕ್ಕಿಂತ ಹೆಚ್ಚು ಬ್ಲಾಕೆಜ್ ಇದ್ದರೆ ಬೈಪಾಸ್ ಸರ್ಜರಿ ಅನಿವಾರ್ಯ ಇರುತ್ತದೆ ಎಂದು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಪಡೆದ ಪತ್ರಕರ್ತರಿಗೆ ಉಚಿತವಾಗಿ ಹೃದಯ ಸಂಬಂಧಿ ಚಿಕಿತ್ಸೆ ನೀಡಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಿಬ್ಬಂದಿ, ಸರ್ಕಾರಿ ನೌಕರರು, ಅಗ್ನಿಶಾಮಕ ನೌಕರರು, ಪೋಲಿಸರು ಸೇರಿದಂತೆ 18 ಇಲಾಖೆಗಳ ಸಿಬ್ಬಂದಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಬಿ.ಪಿ.ಎಲ್ ಕಾರ್ಡ್, ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಕಾರ್ಡ್, ಯಶಸ್ವಿನಿ ಕಾರ್ಡ್ ಹೊಂದಿದವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಚಂದ್ರಕಾಂತ ಗುದಗೆ ಮಾತನಾಡಿ, ಹೃದಯ ರೋಗಕ್ಕೆ ಉತ್ತಮ ಚಿಕಿತ್ಸೆ ನೀಡುತ್ತಿರುವುದು, ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದರಿಂದ ರಾಜ್ಯ ಸರ್ಕಾರವು ನಮ್ಮ ಆಸ್ಪತ್ರೆಗೆ ‘ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಅಚಿವಮೆಂಟ್’ ಪ್ರಶಸ್ತಿ ನೀಡಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT