ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಉಕ್ಕಿ ಹರಿದ ನದಿ, ಹಳ್ಳ, ಮೂರು ಸೇತುವೆ ಮೇಲೆ ನೀರು

ಡಿಗ್ರಿ ಗ್ರಾಮದಲ್ಲಿ ಮನೆಗಳಿಗೆ ನುಗ್ಗಿದ ನೀರು, ಶಾಲಾ ಆವರಣ ಗೋಡೆ ಕುಸಿತ
Last Updated 15 ಸೆಪ್ಟೆಂಬರ್ 2020, 15:45 IST
ಅಕ್ಷರ ಗಾತ್ರ

ಬೀದರ್‌: ಮಳೆಗಾಲ ಆರಂಭವಾದ ನಂತರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗಿನ ಜಾವ ಭಾರಿ ಮಳೆಯಾಗಿದೆ. ಜಿಲ್ಲೆಯ ಒಂದು ನದಿ ಸೇತುವೆ ಹಾಗೂ ಎರಡು ಹಳ್ಳದ ಸೇತುವೆಗಳ ಮೇಲೆ ನೀರು ಬಂದಿದೆ. ಕಾರಂಜಾ ಜಲಾಶಯಕ್ಕೆ 4166.65 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.

ಭಾಲ್ಕಿ ತಾಲ್ಲೂಕಿನ ಆನಂದವಾಡಿ ಸಮೀಪ ಕಾರಂಜಾ ನದಿ ಉಕ್ಕಿ ಹರಿದು ಎರಡು ತಾಸು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇಂಚೂರು ಬಳಿ ಸೇತುವೆ ಮೇಲೆ ನೀರು ಹರಿದು ಸಂಜೆ ವೇಳೆಗೆ ಕಡಿಮೆಯಾಗಿದೆ. ಜ್ಯಾಂತಿ ಗ್ರಾಮದ ಹಳ್ಳ ಹಾಗೂ ಧಾಡಗಿ ಕೆರೆ ತುಂಬಿ ಹರಿಯುತ್ತಿವೆ.

ಕಮಲನಗರದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ನೀರು ಓಣಿಗಳಲ್ಲಿ ಉಕ್ಕಿ ಹರಿಯಿತು. ಡಿಗ್ರಿ ಗ್ರಾಮದಲ್ಲಿ ದತ್ತು ಸೂರ್ಯವಂಶಿ, ಬಾಲಾಜಿ ಸೂರ್ಯವಂಶಿ, ಪ್ರಕಾಶ ತೇರಬಾಳ್‌, ಮಲ್ಲಿಕಾರ್ಜುನ ವಿರೂಪಾಕ್ಷ ಅವರ ಮನೆಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸಿದರು. ಡಿಗ್ರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ಬಿದ್ದಿದೆ. ಸಂಗಮ–ಠಾಣಾ ರಸ್ತೆ ಮಧ್ಯದ ಹಳ್ಳಕ್ಕೆ ಪ್ರವಾಹ ಬಂದು ಎಂಟು ತಾಸು ಸೇತುವೆ ಮೇಲಿನ ಸಂಚಾರ ಸ್ಥಗಿತಗೊಂಡಿತ್ತು.

ಕಮಲನಗರ–ಕೊಟ್ಯಗಾಳ ರಸ್ತೆ ಮಧ್ಯೆ ಇರುವ ಕಿರು ಸೇತುವೆ ಮೇಲಿಂದ ಬಿದ್ದು ದ್ವಿಚಕ್ರವಾಹನ ಸವಾರ ಕೊಟ್ಯಾಗಾಳದ ಅನಿಲ ಕೋಟೆ ಗಾಯಗೊಂಡಿದ್ದಾರೆ. ಕಮಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗ್ರಾಮಕ್ಕೆ ತೆರಳಿದ್ದಾರೆ. ಮುರ್ಕಿ ಗ್ರಾಮದಲ್ಲಿ ಹಳ್ಳದ ನೀರು ಹೊಲಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ.

ಮಳೆಗೆ ಕೊಚ್ಚಿಹೋದ ರಸ್ತೆ, ಹೊಲಗಳು

ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಔರಾದ್ ತಾಲ್ಲೂಕಿನ ನಾಗನಪಲ್ಲಿ, ಚಿಂತಾಕಿ, ಬೋರಗಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಸಣ್ಣ ಸೇತುವೆ ಮತ್ತು ರಸ್ತೆಗಳು ಕುಸಿದು ಸಂಚಾರಕ್ಕೆ ತೊಂದರೆಯಾಗಿದೆ. ಬೋರಗಿ ಬಳಿ ರಸ್ತೆ ಕೊಚ್ಚಿ ಹೋಗಿ ಕೆಲ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬೀದರ್– ಔರಾದ್ ರಸ್ತೆ ಮತ್ತಷ್ಟು ಕಿತ್ತು ಹೋಗಿದೆ.

ಮಾಂಜ್ರಾ ನದಿಗೆ ಒಳ ಹರಿವು ಜಾಸ್ತಿಯಾಗಿದೆ. ಹೀಗಾಗಿ ನದಿ ಪಾತ್ರದ ಬಾಚೆಪಳ್ಳಿ, ಮಣಿಗೆಂಪುರ, ಬಾಬಳಿ, ಲಾಧಾ, ಕೌಠಾ ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಿಗೆ ನೀರು ನುಗ್ಗಿದೆ. ಇದರಿಂದ ನೂರಾರು ಎಕರೆ ಜಮೀನು ಜಲಾವೃತವಾಗಿದೆ.

‘ಕಳೆದ ತಿಂಗಳು ಸುರಿದ ಮಳೆಯಿಂದ ಹೆಸರು, ಉದ್ದು ಹಾಳಾಗಿದೆ. ಸೋಮವಾರ ರಾತ್ರಿ ಬಿದ್ದ ಮಳೆಯಿಂದ ಸೋಯಾ, ಜೋಳ, ತೊಗರಿ ಬೆಳೆಗಳು ನೀರು ಪಾಲಾಗಿವೆ’ ಎಂದು ರೈತ ಮುಖಂಡ ಶ್ರೀಮಂತ ಬಿರಾದಾರ ತಿಳಿಸಿದ್ದಾರೆ.

‘ಔರಾದ್ ಪಟ್ಟಣದ ಹಳೆ ಗಂಜ್ ಹಾಗೂ ಸಂತಪುರ, ಜಮಗಿ ಸೇರಿದಂತೆ ವಿವಿಧ ಗ್ರಾಮಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ಬಂದಿದೆ. ಆದರೆ ಯಾವುದೇ ಹಾನಿಯಾಗಿಲ್ಲ’ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

11 ಹಳ್ಳಿಗಳಲ್ಲಿ ಮಳೆಯಿಂದ ಹಾನಿ

ಬೀದರ್‌: ಅತಿವೃಷ್ಟಿಯಿಂದಾಗಿ ತೊಂದರೆಗೆ ಸಿಲುಕಿದ ಹುಮನಾಬಾದ್ ತಾಲ್ಲೂಕಿನ ಬೋತಗಿ, ಅಲ್ಲೂರ, ನಿಂಬೂರ್ ಮತ್ತು ಸಿತಾಳಗೇರ ಗ್ರಾಮಗಳಿಗೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅತಿಯಾದ ಮಳೆಯಿಂದಾಗಿ ಬೋತಗಿ-ಹಳ್ಳಿಖೇಡ ಮತ್ತು ಬೋತಗಿ-ಸಿತಾಳಗೇರಾ ಸೇತುವೆಗಳು ತುಂಬಿ ಹರಿಯುತ್ತಿರುವುದನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ಮಳೆಯ ಅಬ್ಬರಕ್ಕೆ 11 ಗ್ರಾಮಗಳ ರಸ್ತೆಗಳು ಕೆಟ್ಟು ಹೋಗಿವೆ. ಹೊಲಗಳಿಗೆ ನೀರು ಹರಿದು ಹಾನಿಯಾಗಿದೆ ಎಂದು ತಹಶೀಲ್ದಾರ್ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಅವರೊಂದಿಗೆ ಜಿಲ್ಲಾಧಿಕಾರಿ ಚರ್ಚೆ ನಡೆಸಿದರು.
ಹೆಚ್ಚು ಮಳೆ ಸುರಿದಾಗ ಸೇತುವೆ ಮೇಲೆ ನೀರು ಬಂದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸಿ ಕೊಡಬೇಕು ಎಂದು ಬೋತಗಿ ಗ್ರಾಮಸ್ಥರು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ಹುಮಾನಾಬಾದ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ, ಉಪಾಧ್ಯಕ್ಷ ಸುಗಂಧಾ ಅಣ್ಣೆಪ್ಪ, ತಹಶೀಲ್ದಾರ್ ನಾಗಯ್ಯ ಹಿರೇಮಠ ಇದ್ದರು.

ಲಖನಗಾಂವದಲ್ಲಿ ಅತಿ ಹೆಚ್ಚು ಮಳೆ

ಬೀದರ್‌: 24 ಗಂಟೆಗಳಲ್ಲಿ ಭಾಲ್ಕಿ ತಾಲ್ಲೂಕಿನ ಲಖನಗಾಂವ್‌ದಲ್ಲಿ 173 ಮಿ.ಮೀ ಹಾಗೂ ಭಾಲ್ಕಿಯಲ್ಲಿ 169 ಮಿ.ಮೀ ಮಳೆಯಾಗಿದೆ. ಕಮಲನಗರದಲ್ಲಿ 15 ವರ್ಷಗಳಲ್ಲಿ 142 ಮಿ.ಮೀ ಮಳೆ ದಾಖಲಾಗಿದೆ.
ಕಮಲನಗರ ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ 66 ಮಿ.ಮೀ., ಠಾಣಾಕುಸನೂರಲ್ಲಿ 76 ಮಿ.ಮೀ, ಔರಾದ್‌ ತಾಲ್ಲೂಕು ಗುಡಪಳ್ಳಿಯಲ್ಲಿ 68 ಮಿ.ಮೀ, ಜೋಜನಾ, ಚಿಂತಾಕಿ, ಬಲ್ಲೂರಲ್ಲಿ 66 ಮಿ.ಮೀ., ಲಾಧಾದಲ್ಲಿ 73 ಮಿ.ಮೀ, ಜಮಗಿಯಲ್ಲಿ 68 ಮಿ.ಮೀ ಮಳೆ ಸುರಿದಿದೆ.

ಭಾಲ್ಕಿ ತಾಲ್ಲೂಕಿನ ಭಾತಾಂಬ್ರಾದಲ್ಲಿ 130 ಮಿ.ಮೀ, ಲಂಜವಾಡದಲ್ಲಿ 125 ಮಿ.ಮೀ., ಹಲಬರ್ಗಾದಲ್ಲಿ 107 ಮಿ.ಮೀ, ಜೋಳದಾಬಕಾದಲ್ಲಿ 69 ಮಿ.ಮೀ, ಕೋಸಂನಲ್ಲಿ 65.5 ಮಿ.ಮೀ, ಡಾವರಗಾಂವ್‌, ಖಟಕಚಿಂಚೋಳಿಯಲ್ಲಿ 66 ಮಿ.ಮೀ, ಧೋಂಡಾಪುರದಲ್ಲಿ 64 ಮಿ.ಮೀ ಮಳೆಯಾಗಿದೆ.

ಬೀದರ್‌ ತಾಲ್ಲೂಕಿನ ಅಲ್ಲಮಬಾರ್‌ದಲ್ಲಿ 79 ಮಿ.ಮೀ, ಜನವಾಡ, ಶ್ರೀಮಂಡಲದಲ್ಲಿ 71 ಮಿ.ಮೀ, ಬಸವಕಲ್ಯಾಣ ತಾಲ್ಲೂಕಿನ ಹನಮಂತವಾಡಿಯಲ್ಲಿ 68 ಮಿ.ಮೀ, 71 ಮಿ.ಮೀ, ಹುಮನಾಬಾದ್‌ ತಾಲ್ಲೂಕಿನ ಜಲಸಂಘ್ವಿ, ದುಬಲಗುಂಡಿಯಲ್ಲಿ 79 ಮಿ.ಮೀ, ಹಳ್ಳಿಖೇಡದಲ್ಲಿ 68 ಮಿ.ಮೀ, ಮಾಣಿಕನಗರದಲ್ಲಿ 67 ಮಿ.ಮೀ ಮಳೆ ಬಿದ್ದಿದೆ.

ಬೀದರ್‌ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ 56 ಮಿ.ಮೀ. ಮಳೆಯಾಗಿದೆ. ಔರಾದ್‌ ತಾಲ್ಲೂಕಿನಲ್ಲಿ 61,
ಭಾಲ್ಕಿ ತಾಲ್ಲೂಕಿನಲ್ಲಿ 76 ಮಿ.ಮೀ., ಹುಮನಾಬಾದ್ ತಾಲ್ಲೂಕಿನಲ್ಲಿ 72 ಮಿ.ಮೀ., ಕಮಲನಗರ ತಾಲ್ಲೂಕಿನಲ್ಲಿ 61 ಮಿ.ಮೀ., ಹುಲಸೂರು ತಾಲ್ಲೂಕಿನಲ್ಲಿ 49 ಮಿ.ಮೀ., ಬೀದರ್ ತಾಲ್ಲೂಕಿನಲ್ಲಿ 47, ಚಿಟಗುಪ್ಪ ತಾಲ್ಲೂಕಿನಲ್ಲಿ 42 ಮಿ.ಮೀ ಹಾಗೂ ಬಸವಕಲ್ಯಾಣ ತಾಲ್ಲೂಕಿನಲ್ಲಿ 38 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT