ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಪಾನಿಪುರಿ ವ್ಯಾಪಾರಿಗಳು

ಅನ್‌ಲಾಕ್‌ ಆದರೂ ವ್ಯಾಪಾರಕ್ಕಿಲ್ಲ ಅವಕಾಶ; ಮಿರ್ಚಿ ಬಜ್ಜಿ ಮಾರಾಟವೂ ಇಲ್ಲ
Last Updated 17 ಜೂನ್ 2021, 5:31 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಪಾನಿಪುರಿ ಎಂದರೆ ಸಾಕು ಚಿಕ್ಕವರಿಂದ ಹಿಡಿದು ಹಿರಿಯರ ತನಕ ಎಲ್ಲರ ಬಾಯಲ್ಲಿ ನೀರು ಬರುತ್ತದೆ. ಲಾಕ್‌ಡೌನ್‌ ದಿನಗಳಲ್ಲಿ ಆರ್ಥಿಕ ಸಮಸ್ಯೆ ಎದುರಿಸಿದ್ದ ಪಾನಿಪುರಿ ವ್ಯಾಪಾರಿಗಳ ಬದುಕು ಅನ್‌ಲಾಕ್‌ ಆದರೂ ಇನ್ನೂ ಸುಧಾರಿಸಿಲ್ಲ.

ಪ್ರಸ್ತುತ ದಿನಗಳಲ್ಲಿ ಕೆಲವರಿಗೆ ಪಾನಿಪುರಿ ಪ್ರತಿದಿನ ಸೇವಿಸುವ ಆಹಾರದ ಒಂದು ಭಾಗವಾಗಿದೆ. ಕೆಲವರು ಊಟ ಇಲ್ಲದಿದ್ದರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಪಾನಿಪುರಿ ತಿನ್ನದೇ ಮಲಗುತ್ತಿರಲಿಲ್ಲ. ಅಂಥವರು ಇನ್ನೂ ಕೂಡ ನಿರಾಸೆ ಅನುಭವಿಸುವಂತಾಗಿದೆ.

ಸರ್ಕಾರ ವ್ಯಾಪಾರ ವಹಿವಾಟಿಗೆ ಬೆಳಿಗ್ಗೆ 6ರಿಂದ 10 ರವರೆಗೆ ಇದ್ದ ಸಮಯವನ್ನು ಮಧ್ಯಾಹ್ನ 2ರವರೆಗೆ ವಿಸ್ತರಿಸಿದೆ. ಆದರೆ ಪಾನಿಪುರಿ, ಮಿರ್ಚಿ ಭಜ್ಜಿ ಅಂಗಡಿಗಳು ಸಂಜೆ 5ರಿಂದ ರಾತ್ರಿ 9 ರವರೆಗೆ ವ್ಯಾಪಾರ ನಡೆಯುವಂತವು. ಹೀಗಾಗಿ ವ್ಯಾಪಾರಿಗಳು ಚಿಂತೆಗೀಡಾಗಿದ್ದಾರೆ.

‘ಮೊದಲು ಪಾನಿಪುರಿ ಅಂಗಡಿಗಳು ಕೇವಲ ನಗರ ಹಾಗೂ ಪಟ್ಟಣಗಳಿಗೆ ಸೀಮಿತವಾಗಿದ್ದವು. ಆದರೆ ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿಯೂ ಪಾನಿಪುರಿ ಅಂಗಡಿಗಳು ಪ್ರಾರಂಭವಾಗಿವೆ. ಪಾನಿಪುರಿ ತಿನ್ನುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಮಾರಾಟ ಮಾಡಲಾಗುತ್ತಿಲ್ಲ’ ಎಂದು ಚಳಕಾಪುರದ ಪಾನಿಪುರಿ ವ್ಯಾಪಾರಿ ರಾಚಯ್ಯ ಕೆನಾಡೆ ತಿಳಿಸುತ್ತಾರೆ.

‘ಸ್ವಾವಲಂಬಿ ಜೀವನ ನಡೆಸಬೇಕು ಎನ್ನುವ ಉದ್ದೇಶದಿಂದ ಖಾಸಗಿ ವ್ಯಕ್ತಿಗಳ ಹತ್ತಿರ ಬಡ್ಡಿಯಿಂದ ಸಾಲ ಪಡೆದು ಪಾನಿಪುರಿ ಅಂಗಡಿ ಪ್ರಾರಂಭಿಸಿದೆ. ಆದರೆ ಲಾಕ್‌ಡೌನ್‌ನಿಂದಾಗಿ ಸಾಲದ ಬಡ್ಡಿ ಸಹ ಪಾವತಿಸಲು ಆಗುತ್ತಿಲ್ಲ. ಹೀಗಾಗಿ ಸಾಲದ ಸುಳಿಯಲ್ಲಿ ಸಿಲುಕಿದಂತಾಗಿದೆ. ಹೀಗೆ ಮುಂದುವರೆದರೆ ಮುಂದೆ ಏನಾಗುವುದೋ ಎಂಬ ಚಿಂತೆ ಕಾಡುತ್ತಿದೆ’ ಎಂದು ವ್ಯಾಪಾರಿ ಶಿವಕುಮಾರ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

‘ನಾನು ಪ್ರತಿದಿನ ಸಂಜೆ 4 ರಿಂದ ರಾತ್ರಿ 10ರವರೆಗೆ ಮಿರ್ಚಿ ಬಜ್ಜಿ, ಕಟ್ ಮಿರ್ಚಿ, ಪಾವಭಾಜಿ ಮಾರಾಟ ಮಾಡಿ ₹3 ಸಾವಿರದವರೆಗೆ ಗಳಿಸುತ್ತಿದ್ದೆ. ಆದರೀಗ ಅಂಗಡಿ ತೆರೆಯಲಾಗುತ್ತಿಲ್ಲ. ಸುಮ್ಮನೆ ಇರಲೂ ಸಾಧ್ಯವಾಗುತ್ತಿಲ್ಲ. ಜೀವನಕ್ಕೆ ಏನು ಮಾಡುವುದು ತಿಳಿಯುತ್ತಿಲ್ಲ’ ಎಂದು ಬಹುತೇಕ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.

‘ನಾನು ನಿತ್ಯ ಊಟ ತಿಂದರೂ ಪಾನಿಪುರಿ ಸವಿದರೇನೆ ತೃಪ್ತಿಯಾಗುತ್ತಿತ್ತು. ಆದರೆ ಕೊರೊನಾದಿಂದ ಕಳೆದ 50 ದಿನಗಳಿಂದ ಪಾನಿಪುರಿ ತಿಂದಿಲ್ಲ. ಹೀಗಾಗಿ ಏನೇ ಊಟ ಮಾಡಿದರು ನಾಲಿಗೆಗೆ ರುಚಿ ಅನಿಸುತ್ತಿಲ್ಲ’ ಎಂದು ಹೇಳುತ್ತಾರೆ ಶ್ವೇತಾ ಅಂಬಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT