ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14ರ ನಂತರ ಭಾಗಶಃ ಲಾಕ್‌ಡೌನ್

ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಅಂಗಡಿ ತೆರೆಯಲು ಅವಕಾಶ
Last Updated 12 ಜೂನ್ 2021, 14:55 IST
ಅಕ್ಷರ ಗಾತ್ರ

ಬೀದರ್‌: ‘ಜೂನ್ 14ರ ನಂತರ ಶೇಕಡ 5ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ಭಾಗಶಃ ತೆರವು ಮಾಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಇದರಲ್ಲಿ ಬೀದರ್ ಜಿಲ್ಲೆಯೂ ಸೇರಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ತಿಳಿಸಿದ್ದಾರೆ.

‘ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡಲಾಗುತ್ತಿದೆ ಎಂದ ಮಾತ್ರಕ್ಕೆ ಕೋವಿಡ್ ಸಂಪೂರ್ಣ ಕಡಿಮೆಯಾಗಿದೆ ಎಂದರ್ಥವಲ್ಲ. ಜನತೆ ಈ ಹಿಂದಿನಂತೆ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ತೊಳೆಯುವುದು ಇಂತಹ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು’ ಎಂದು ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

‘ವಾರಾಂತ್ಯದ ನಿಷೇಧಾಜ್ಞೆ ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಿಗ್ಗೆವರೆಗೆ ಜಾರಿಯಲ್ಲಿರುತ್ತದೆ. ಹೋಮ್ ಡೆಲಿವರಿ (ಪಾರ್ಸೆಲ್‌)ಗೆ ಅವಕಾಶ ನೀಡಲಾಗಿದೆ. ಆಟೊ ಟ್ಯಾಕ್ಸಿಯಲ್ಲಿ ಇಬ್ಬರು ಪ್ರಯಾಣಕ್ಕೆ ಅವಕಾಶ ಇರಲಿದೆ. ಆಹಾರ, ದಿನಸಿ, ಹಣ್ಣು–ತರಕಾರಿ, ಮಾಂಸ, ಮೀನು, ಡೇರಿ ಉತ್ಪನ್ನಗಳು, ಹಾಲಿನ ಬೂತ್, ಪ್ರಾಣಿ ಆಹಾರ, ಬೀದಿ ಬದಿ ವ್ಯಾಪಾರ, ಪಡಿತರ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ತೆರೆಯಬಹುದು’ ಎಂದು ಹೇಳಿದ್ದಾರೆ.

‘ಮಧ್ಯಾಹ್ನ 2ರ ಬಳಿಕ ಅನಗತ್ಯವಾಗಿ ಯಾರೂ ರಸ್ತೆಗಿಳಿಯುವಂತಿಲ್ಲ. ಅಂಗಡಿ ಮುಂಗಟ್ಟುಗಳನ್ನು 2 ಗಂಟೆಯೊಳಗಾಗಿ ಮುಚ್ಚಬೇಕು. ಉದ್ಯಾನಗಳಲ್ಲಿ ಮಧ್ಯಾಹ್ನದವರೆಗೆ ವಾಕ್ ಮತ್ತು ಜಾಗಿಂಗ್ ಮಾಡಲು ಅವಕಾಶ ನೀಡಲಾಗಿದೆ. ಅಲ್ಲಿಯೂ ಜನ ಗುಂಪುಗೂಡುವಂತಿಲ್ಲ. ಕಟ್ಟಡ ನಿರ್ಮಾಣ ಚಟುವಟಿಕೆಗೆ ಅವಕಾಶ ನೀಡಿರುವುದರಿಂದ ನಿರ್ಬಂಧಿತ ವಲಯವನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳ ಮಾರಾಟದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

‘ಮದುವೆಗೆ 40 ಜನ ಮತ್ತು ಶವಸಂಸ್ಕಾರಗಳಿಗೆ 5 ಜನ ಮಾತ್ರ ಭಾಗ ವಹಿಸಬಹುದಾಗಿದೆ. ಮದುವೆಯನ್ನು ಮನೆಗಳಲ್ಲೇ ಕನಿಷ್ಠ ಜನರ ಸಮ್ಮುಖದಲ್ಲಿ ನಡೆಸಬೇಕು. ಸ್ವಲ್ಪ ನಿರ್ಲಕ್ಷವೂ ದೊಡ್ಡ ಅವಾಂತರಕ್ಕೆ ಕಾರಣವಾಗುತ್ತದೆ. ಹಾಗಾಗಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಕೋರಿದ್ದಾರೆ.

‘ಐದಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳಿರುವ ಗ್ರಾಮಗಳನ್ನು ಸೀಲ್‌ಡೌನ್ ಮಾಡಲು ಸರ್ಕಾರ ನಿರ್ಣಯಿಸಿದೆ. ಹೆಚ್ಚು ಸೋಂಕಿತರಿರುವ ಜಿಲ್ಲೆಗಳಿಗೆ ಹೋಗಬಾರದು’ ಎಂದು ಸಚಿವ ಚವಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT