ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕಲ್ಯಾಣ ಕರ್ನಾಟಕದ ಗಟ್ಟಿ ಬರಹಗಾರ್ತಿ ಪಾರ್ವತಿ'

ಕಸಾಪ ಮಾಜಿ ಅಧ್ಯಕ್ಷ ಮಹಿಪಾಲ ರೆಡ್ಡಿ ಮುನ್ನೂರ ಅಭಿಮತ
Last Updated 6 ನವೆಂಬರ್ 2020, 14:02 IST
ಅಕ್ಷರ ಗಾತ್ರ

ಬೀದರ್‌: ‘ಧರಿನಾಡಿನ ಸಾಹಿತಿ ಬಿ.ಜೆ. ಪಾರ್ವತಿ ವಿ.ಸೋನಾರೆ ಬರೆದ ‘ಅವ್ವ ನೀ ಸಾಯಬಾರದಿತ್ತು’ ಕಥಾ ಸಂಕಲನದಲ್ಲಿನ ಏಳು ಕಥೆಗಳು ಓದುಗರ ಮನ ತಟ್ಟುವಂತಿವೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರ್ಗಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಹಿಪಾಲ ರೆಡ್ಡಿ ಮುನ್ನೂರ ಅಭಿಪ್ರಾಯಪಟ್ಟರು.

ನಗರದ ಡಾ.ಚನ್ನಬಸವ ಪಟ್ಟದೇವರ ಜಿಲ್ಲಾ ರಂಗ ಮಂದಿರದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಜಾನಪದ ಕಲಾವಿದರ ಬಳಗದ ವತಿಯಿಂದ ಕಥೆಗಾರ್ತಿ ಬಿ.ಜೆ. ಪಾರ್ವತಿ ಸೋನಾರೆ ರಚಿತ ‘ಅವ್ವ ನೀ ಸಾಯಬಾರದಿತ್ತು’ ಕಥಾ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪಾರ್ವತಿ ಈ ಮೊದಲು ಬರೆದಿರುವ ಭವರಿ ಕಥಾ ಸಂಕಲನದಂತೆಯೇ ಹೊಸ ಕಥಾ ಸಂಕಲನವೂ ಇದೆ. ಶಬ್ದಗಳ ಬಳಕೆ, ಸಂದರ್ಭಗಳು ಸೊಗಸಾಗಿ ಮೂಡಿ ಬಂದಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಲೇಖಕಿ ಸಂಕಷ್ಟದಲ್ಲಿರುವ ಮಹಿಳೆಯರ ಬದುಕಿನ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ಮಾಡಿದ್ದಾರೆ. ಬರಹದ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗಟ್ಟಿ ಕಥೆಗಾರ್ತಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಹೀರೆಮಠ ಸಂಸ್ಥಾನದ ಗುರುಬಸವಪಟ್ಟದ್ದೇವರು ಮಾತನಾಡಿ, ‘ಪಾರ್ವತಿ ಸೋನಾರೆ ಅವರು ತಮಗೆ ತಾಯಿ ಮೇಲೆ ಇರುವ ಅಗಾಧವಾದ ಪ್ರೀತಿಯನ್ನು ಬರಹಗಳಲ್ಲಿ ಉಲ್ಲೇಖಿಸಿದ್ದಾರೆ. ತಾಯಿಯ ಶ್ರೇಷ್ಠತೆ, ಮಮತೆ, ಕರುಣೆಯನ್ನು ಬಿಂಬಿಸಿದ್ದಾರೆ’ ಎಂದು ಹೇಳಿದರು.

ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಖದೀರ್ ಮಾತನಾಡಿ, ‘ಜಿಲ್ಲೆಯಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆ ಮತ್ತು ಭಾಲ್ಕಿ ಹಿರೇಮಠ ಸಂಸ್ಥಾನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿವೆ’ ಎಂದರು.

ಕಥೆಗಾರ್ತಿ ಪಾರ್ವತಿ ಸೋನಾರೆ ಮಾತನಾಡಿ, ‘ನನ್ನ ಮೊದಲ ಕಥಾ ಸಂಕಲನ ಭವರಿಗೆ ಪ್ರಶಸ್ತಿ ಬಂದಿದೆ. ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ ನಿತ್ಯ ಜನರ ನೋವು ನಲಿವುಗಳನ್ನು ನೋಡುತ್ತೇನೆ. ಮಹಿಳೆಯರು ಹೇಳಿಕೊಳ್ಳುವ ನೋವು-ನಲಿವು ಹಾಗೂ ತಲ್ಲಣಗಳು ಕಥೆ ರೂಪದಲ್ಲಿ ಹೊರ ತಂದಿದ್ದೇನೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ನೆಲಮೂಲದ ಗಟ್ಟಿ ಸಾಹಿತ್ಯ ರಚನೆಯ ಮೂಲಕ ಪಾರ್ವತಿ ಸೋನಾರೆ ಅವರು ಜಿಲ್ಲೆಯಲ್ಲಿ ಮನೆ ಮಾತಾಗಿದ್ದಾರೆ. ಮಕ್ಕಳು ತಂದೆ-ತಾಯಿಯನ್ನು ಎಂದೆಂದಿಗೂ ನೋಯಿಸಬಾರದು. ತಂದೆ-ತಾಯಿ ಕಣ್ಣಲ್ಲಿ ನೀರು ಬರದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ಜಾನಪದ ಪರಿಷತ್ತಿನ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿದರು.
ಜಿಲ್ಲಾ ಆರ್.ಸಿ.ಎಚ್. ಆರೋಗ್ಯ ಅಧಿಕಾರಿ ಡಾ. ರವೀಂದ್ರ ಶಿರಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಹಿರಿಯ ಸಾಹಿತಿ ಜಯದೇವಿ ದುಬುಲಗುಂಡೆ, ಹಿರಿಯ ಆರೋಗ್ಯ ಸಹಾಯಕಿ ಲಕ್ಷ್ಮಿ ಇದ್ದರು.

ನೀಟ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 9ನೇ ರ್‍ಯಾಂಕ್‌ ಪಡೆದ ಕಾರ್ತಿಕ ರೆಡ್ಡಿ, 85ನೇ ರ್‍ಯಾಂಕ್‌ ಪಡೆದ ಎಂ.ಡಿ. ಅರ್ಬಾಜ್ ಅಹ್ಮದ್, ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡ ಘೋಡಂಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಶೀದ್ ಹಾಸ್ಮಿ, ಆರೋಗ್ಯ ಸಿಬ್ಬಂದಿ ರೀಟಾ ಮಠಪತಿ, ಪ್ರೇಮಲತಾ, ಸುಕೀರ್ತಾ, ಝರೆಮ್ಮ, ಶಕುಂತಲಾ, ಪ್ರಮೋದ, ಶಿವಲೀಲಾ, ಸ್ನೇಹಲತಾ, ಧೂಳಪ್ಪ, ಅನಿಲ, ರೆಹಮಾನ್, ವಿಲ್ಸನ್, ರಿಯಾಜ್, ನಾಗೇಶ ಡಪಲಾಪೂರೆ ಅವರನ್ನು ಸನ್ಮಾನಿಸಲಾಯಿತು.

ವಿಜಯಕುಮಾರ ಸೋನಾರೆ ಸ್ವಾಗತಿಸಿದರು. ದೇವಿದಾಸ್ ಜೋಶಿ ನಿರೂಪಿಸಿದರು. ಓಂಕಾರ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT