ಶನಿವಾರ, ಜನವರಿ 29, 2022
23 °C
ಪ್ರಮುಖ ವೃತ್ತಗಳಲ್ಲಿ ಪೊಲೀಸರಿಂದ ತಪಾಸಣೆ

ಕರ್ಫ್ಯೂ ಇದ್ದರೂ ಜನ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದರೂ ಭಾನುವಾರ ಜಿಲ್ಲೆಯಲ್ಲಿ ಗಂಭೀರತೆ ಕಂಡು ಬರಲಿಲ್ಲ. ಬಸವಕಲ್ಯಾಣ ತಾಲ್ಲೂಕಿನ ಹಾರಕೂಡದಲ್ಲಿ ಜನಜಂಗಳಿ ಮಧ್ಯೆ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ನಗರದಲ್ಲಿ ಸಾರ್ವಜನಿಕರ ಸಂಚಾರ ಸಹಜವಾಗಿತ್ತು.

ಗುಂಪಾ ಪ್ರದೇಶದಲ್ಲಿ ಅಂಗಡಿಗಳು ಬಂದ್‌ ಇದ್ದರೂ ಸಾರ್ವಜನಿಕರ ಓಡಾಟ ಎಂದಿನಂತೆ ಇತ್ತು. ನೂರಾರು ಸಂಖ್ಯೆಯಲ್ಲಿದ್ದ ಕಟ್ಟಡ ಕಾರ್ಮಿಕರು ಅಂತರ ಕಾಯ್ದುಕೊಳ್ಳದೆ ಒಂದೇ ಜಾಗದಲ್ಲಿ ಗುಂಪುಗೂಡಿ ನಿಂತಿದ್ದರು. ಮಹಿಳೆಯರು ಸಹ ಗುಂಪುಗೂಡಿ ಅಲ್ಲಲ್ಲಿ ಕುಳಿತುಕೊಂಡಿದ್ದರು. ಬಹುತೇಕರು ಮಾಸ್ಕ್‌ ಸಹ ಧರಿಸಿರಲಿಲ್ಲ.

ಬೊಮ್ಮಗೊಂಡೇಶ್ವರ ವೃತ್ತದ ಸಮೀಪದಿಂದ ಮೈಲೂರ್ ಕ್ರಾಸ್‌ ವರೆಗೆ ಅಲ್ಲಲ್ಲಿ ಕೆಲವು ಅಂಗಡಿಗಳು ತೆರೆದುಕೊಂಡಿದ್ದವು. ಜನ ಸಹ ಮಳಿಗೆಗಳಿಗೆ ತೆರಳಿ ಖರೀದಿ ಮಾಡಿದರು. ಪಾನಬೀಡಾ ಅಂಗಡಿಗಳ ವ್ಯವಹಾರ ಎಂದಿನಂತೆ ಇತ್ತು. ಪೊಲೀಸರು ಬಂದಾಗ ಅಂಗಡಿ ಬಾಗಿಲು ಮುಚ್ಚುತ್ತಿದ್ದ ಮಾಲೀಕರು ಪೊಲೀಸರು ಹೋದ ತಕ್ಷಣ ಮತ್ತೆ ವ್ಯವಹಾರ ನಡೆಸುತ್ತಿದ್ದರು.

ಕುಳಿತು ತಿನ್ನಲು ಅವಕಾಶ ಇಲ್ಲದ ಕಾರಣ ಹೋಟೆಲ್‌, ಖಾನಾವಳಿ ಹಾಗೂ ಟಿಫನ್‌ ಸೆಂಟರ್‌ಗಳಿಗೆ ಗ್ರಾಹಕರು ಬರಲಿಲ್ಲ. ಪಾರ್ಸೆಲ್‌ಗಳನ್ನು ಒಯ್ಯದ ಕಾರಣ ಹೋಟೆಲ್‌ ಮಾಲೀಕರು ನಷ್ಟ ಅನುಭವಿಸಿದರು. ಸರ್ಕಾರ ಕನಿಷ್ಠ ಅಂತರ ಕಾಯ್ದುಕೊಂಡು ಹೋಟೆಲ್‌ಗಳಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಬೇಕಿತ್ತು ಎಂದು ಹೋಟೆಲ್‌ ಮಾಲೀಕರು ಅಳಲು ತೋಡಿಕೊಂಡರು.

ಉದಗಿರ ರಸ್ತೆ, ಜನವಾಡ ರಸ್ತೆ, ಅಂಬೇಡ್ಕರ್‌ ವೃತ್ತ, ಮೋಹನ್‌ ಮಾರ್ಕೆಟ್‌ನಲ್ಲಿ ಪೊಲೀಸರು ಬಿಗಿ ಮಾಡಿದ್ದರಿಂದ ಜನ ಸ್ವಲ್ಪ ಮಟ್ಟಿಗೆ ಅಂತರ ಕಾಯ್ದು ಕೋವಿಡ್‌ ನಿಯಮಗಳನ್ನು ಪಾಲಿಸಿದರು. ಉಳಿದ ಕಡೆ ಕಟ್ಟುನಿಟ್ಟಿನ ನಿಯಮ ಪಾಲನೆ ಕಂಡು ಬರಲಿಲ್ಲ.

ಮಡಿವಾಳ ವೃತ್ತ, ರೋಟರಿ ವೃತ್ತ, ಹರಳಯ್ಯ ವೃತ್ತ ಹಾಗೂ ಅಂಬೇಡ್ಕರ್‌ ವೃತ್ತದಲ್ಲಿ ಪೊಲೀಸ್‌ ಬಂದೋಬಸ್ತ್‌ ಇತ್ತು. ಪೊಲೀಸ್‌ ವಾಹನ ಗಸ್ತು ತಿರುಗುತ್ತಿದ್ದ ಕಾರಣ ಅಂಗಡಿ ಮಾಲೀಕರು ಇಲ್ಲಿ ಮಳಿಗೆಗಳನ್ನು ತೆಗೆಯುವ ಧೈರ್ಯ ಮಾಡಲಿಲ್ಲ. ಪೊಲೀಸರು ಸಂಚರಿಸದ ಕೆಲ ಪ್ರದೇಶಗಳಲ್ಲಿ ಅಂಗಡಿಗಳು ತೆರೆದುಕೊಂಡಿದ್ದವು.

ಅಂಬೇಡ್ಕರ್‌ ವೃತ್ತದಲ್ಲಿ ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಸವಾರರನ್ನು ತಡೆದು ವಿಚಾರಿಸಿದರು. ಮಾಸ್ಕ್‌ ಧರಿಸದೇ ಅನಗತ್ಯವಾಗಿ ಅಲೆದಾಡುತ್ತಿದ್ದವರಿಗೆ ದಂಡ ವಿಧಿಸಿದರು. ವಾಹನಗಳನ್ನು ಜಪ್ತಿ ಮಾಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೆ ಸಂಚರಿಸುತ್ತಿದ್ದ 96 ಜನರ ವಿರುದ್ಧ ಶನಿವಾರ ಪ್ರಕರಣ ದಾಖಲಿಸಲಾಗಿದೆ. ಅನಗತ್ಯವಾಗಿ ಸಂಚರಿಸುತ್ತಿದ್ದ ಜನರ 126 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ತಿಳಿಸಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.