ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಂದ ಸ್ವಯಂ ಪ್ರೇರಿತ ಲಾಕ್‌ಡೌನ್

Last Updated 11 ಜುಲೈ 2020, 16:47 IST
ಅಕ್ಷರ ಗಾತ್ರ

ಔರಾದ್: ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡ ಇಲ್ಲಿಯ ಜನ ಸ್ವಯಂ ನಿಯಂತ್ರಣ ಹಾಕಿಕೊಂಡಿದ್ದಾರೆ.

ಪಟ್ಟಣದ ಕೆಲ ಪ್ರಜ್ಞಾವಂತ ಜನ ಹಾಗೂ ವ್ಯಾಪಾರಿಗಳು ಪೊಲೀಸರನ್ನು ಭೇಟಿ ಮಾಡಿ ನಿತ್ಯ ಅರ್ಧದಿನ ಸ್ವಯಂ ಲಾಕ್‌ಡೌನ್‌ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಜನರ ಈ ನಿರ್ಧಾರವನ್ನು ಸ್ವಾಗತಿಸಿರುವ ಪೊಲೀಸರು ಕೋವಿಡ್ ಸೋಂಕಿನ ವಿರುದ್ಧ ಹೋರಾಡಲು ಇದೊಂದು ಉತ್ತಮ ಮಾರ್ಗ ಎಂದುಕೊಂಡಿದ್ದಾರೆ.

ಈ ಸ್ವಯಂ ಲಾಕ್‌ಡೌನ್‌ ಶನಿವಾರದಿಂದ ಜಾರಿಗೆ ಬಂದಿದೆ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಎಲ್ಲ ಅಂಗಡಿಗಳ ಬಾಗಿಲು ಹಾಕಲಾಗಿದೆ. ಕೆಲ ಔಷಧ ಅಂಗಡಿ ಹೊರತುಪಡಿಸಿ ಎಲ್ಲಿಯೂ ಒಂದು ಸಣ್ಣ ಅಂಗಡಿ ಕೂಡ ತೆರೆದಿರಲಿಲ್ಲ. ಇದು ಸರ್ಕಾರ ಘೋಷಿಸಿದ ಲಾಕ್‌ಡೌನ್‌ ಇರಬೇಕೆಂದು ಜನ ಕೂಡ ಬೇಗನೆ ಮನೆ ಸೇರಿಕೊಂಡರು.

‘ನಮಗೆ ಯಾರೂ ನೀವು ಅಂಗಡಿ ಬಂದ್ ಮಾಡಿ ಎಂದು ಒತ್ತಾಯ ಮಾಡಿಲ್ಲ. ಸೋಂಕು ನಿಯಂತ್ರಣಕ್ಕಾಗಿ ನಾವೇ ಲಾಕ್‌ಡೌನ್‌ ಹಾಕಿಕೊಂಡಿದ್ದೇವೆ. ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಇದು ಹೀಗೆ ಮುಂದುವರಿಯಲಿದೆ’ ಎಂದು ವ್ಯಾಪಾರಿ ಮುಖಂಡ ಸಂದೀಪ್ ಮೀಸೆ ತಿಳಿಸಿದ್ದಾರೆ.

‘ನಿತ್ಯ ಲಾಕ್‌ಡೌನ್‌ ಮಾಡಿ ಎಂದು ನಾವು ಯಾರಿಗೂ ಹೇಳಿಲ್ಲ. ಸರ್ಕಾರದಿಂದ ಆದೇಶವೂ ಬಂದಿಲ್ಲ. ಆದರೆ ಜನ ತಾವೇ ನಿತ್ಯ ಅರ್ಧ ದಿನ ವ್ಯಾಪಾರ ವಹಿವಾಟು ಸ್ಥಗಿತ ಮಾಡುವುದಾಗಿ ಹೇಳಿದ್ದಾರೆ. ಅದರಂತೆ ಶನಿವಾರ ಅರ್ಧದಿನ ಲಾಕ್‌ಡೌನ್‌ ಕೂಡ ಮಾಡಿಕೊಂಡಿದ್ದಾರೆ’ ಎಂದು ಸಿಪಿಐ ಟಿ. ರಾಘವೇಂದ್ರ ತಿಳಿಸಿದ್ದಾರೆ.

‘ಔರಾದ್ ಮತ್ತು ಕಮಲನಗರ ತಾಲ್ಲೂಕುಗಳು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವುದರಿಂದ ಇಲ್ಲಿ ಸೋಕಿತರ ಪ್ರಮಾಣ ಜಾಸ್ತಿಯಾಗುತ್ತಿದೆ. ಈ ತನಕ 120ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಜನ ಜಾಗೃತರಾಗುವುದು ಉತ್ತಮ. ಔರಾದ್ ಪಟ್ಟಣದಲ್ಲಿ ಸ್ವಯಂ ಲಾಕ್‌ಡೌನ್‌ ಮಾಡಿಕೊಂಡಿದ್ದು ಒಳ್ಳೆಯ ಬೆಳವಣಿಗೆ. ಜತೆಗೆ ಎಲ್ಲರೂ ಮಾಸ್ಕ್ ಹಾಕುವುದು, ಅಂತರ ಕಾಯ್ದುಕೊಳ್ಳುವುದು ಕಡ್ಡಾಯ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶರಣಯ್ಯ ಸ್ವಾಮಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT