ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಾಡ| ಹದಗೆಟ್ಟ ರಸ್ತೆ: ಸಂಚಾರ ದುಸ್ತರ

ವಿದ್ಯಾರ್ಥಿಗಳು, ನೌಕರರಿಗೆ ತೊಂದರೆ, ದುರಸ್ತಿಗೆ ಗ್ರಾಮಸ್ಥರ ಒತ್ತಾಯ
Published 4 ಫೆಬ್ರುವರಿ 2024, 7:38 IST
Last Updated 4 ಫೆಬ್ರುವರಿ 2024, 7:38 IST
ಅಕ್ಷರ ಗಾತ್ರ

ಜನವಾಡ(ಬೀದರ್ ): ಇಸ್ಲಾಂಪುರ ಗ್ರಾಮದಿಂದ ಕೌಠಾ(ಬಿ) ಸೇತುವೆ ಸಮೀಪದ ಬೀದರ್-ಔರಾದ್ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. 2 ಕಿ.ಮೀ. ರಸ್ತೆಯ ಉದ್ದಕ್ಕೂ ತಗ್ಗು–ಗುಂಡಿಗಳು ನಿರ್ಮಾಣವಾಗಿದ್ದು, ಎರಡೂ ಬದಿಯಲ್ಲಿ ಮುಳ್ಳು, ಕಂಟಿ ಗಿಡಗಳು ಬೆಳೆದಿವೆ. ಹೀಗಾಗಿ ಸಂಚಾರ ಹರಸಾಹಸವಾಗಿ ಪರಿಣಮಿಸಿದೆ.

ಹಿಂದೆ ಬೀದರ್‌ನಿಂದ ಕೌಠಾ(ಬಿ) ಸೇತುವೆ ಸಮೀಪದಿಂದ ಇಸ್ಲಾಂಪುರ, ಯರನಳ್ಳಿ ಮಾರ್ಗವಾಗಿ ಬಂಪಳ್ಳಿಗೆ ಸಾರಿಗೆ ಸಂಸ್ಥೆ ಬಸ್ ಸೌಕರ್ಯ ಇತ್ತು. ರಸ್ತೆ ಹಾಳಾದ ಕಾರಣ ಇದೀಗ ಈ ಮಾರ್ಗದಲ್ಲಿ ಬಸ್ ಸಂಚರಿಸುತ್ತಿಲ್ಲ. ಖಾಸಗಿ ವಾಹನಗಳ ಸಂಚಾರವೂ ತೀರಾ ವಿರಳವಾಗಿದೆ. ಇಸ್ಲಾಂಪುರ ಹಾಗೂ ಸುತ್ತಲಿನ ಗ್ರಾಮಗಳ ಜನರಿಗೆ ಔರಾದ್‍ಗೆ ತೆರಳಲು ಇರುವ ಪ್ರಮುಖ ರಸ್ತೆ ಇದಾಗಿದೆ. ಆದರೆ, ಅಧೋಗತಿಗೆ ತಲುಪಿರುವುದರಿಂದ ಜನರಿಗೆ ಬದಲಿ ಮಾರ್ಗದಲ್ಲಿ ಸಂಚರಿಸಬೇಕಾದ ಅನಿವಾರ್ಯ ಎದುರಾಗಿದೆ. ಸದ್ಯ ಜನ ಇಸ್ಲಾಂಪುರದಿಂದ ಜನವಾಡಕ್ಕೆ ತಲುಪಿ, ಅಲ್ಲಿಂದ ಔರಾದ್‍ಗೆ ತೆರಳುತ್ತಿದ್ದಾರೆ. ಬದಲಿ ಮಾರ್ಗ ಬಳಕೆಯಿಂದ ಔರಾದ್‍ನ ಅಂತರ 5 ಕಿ.ಮೀ. ಹೆಚ್ಚಾಗುತ್ತಿದೆ. ಸಮಯವೂ ವ್ಯರ್ಥ ಆಗುತ್ತಿದೆ. ಸಂಬಂಧಪಟ್ಟವರು ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳದ ಕಾರಣ ಜನರ ಸಂಕಟ ಮುಂದುವರಿದಿದೆ.

‘20 ವರ್ಷಗಳ ಹಿಂದೆ ನಿರ್ಮಾಣವಾದ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ತಗ್ಗು–ಗುಂಡಿಗಳಿಂದಾಗಿ ಸಂಚಾರ ದುಸ್ತರವಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಮುಳ್ಳು-ಕಂಟಿಗಳು ಬೆಳೆದಿವೆ. ಟೊಂಗೆಗಳು ರಸ್ತೆ ಮೇಲೆಯೇ ಜೋತು ಬಿದ್ದಿವೆ. ಮುಂದಿನ ದಾರಿಯೇ ಕಾಣದಂತಹ ಪರಿಸ್ಥಿತಿಯಿದೆ. ಹೀಗಾಗಿ ಭಯದಲ್ಲೇ ಸಂಚರಿಸಬೇಕಾಗಿದೆ. ಹಿಂದೆ ಸಂಚಾರಕ್ಕೆ ಇದೇ ಮಾರ್ಗ ಬಳಸಲಾಗುತ್ತಿತ್ತು. ಇದೀಗ ಜನ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಬಹುತೇಕರು ಹೊಲಕ್ಕೆ ಹೋಗಲು ಬಳಸುತ್ತಿದ್ದಾರೆ’ ಎಂದು ಪ್ರಯಾಣಿಕರು ಅಳಲು ತೋಡಿಕೊಂಡರು.

ಸದ್ಯ ಬೀದರ್‌ನಿಂದ ಬಂಪಳ್ಳಿಗೆ ಸಂಚರಿಸುವ ಬಸ್ ಇಸ್ಲಾಂಪುರದಿಂದ ಅರ್ಧ ಕಿ.ಮೀ. ದೂರದಿಂದ ಸಂಚರಿಸುತ್ತಿದೆ. ವೃದ್ಧರು, ರೋಗಿಗಳಿಗೆ ಅಲ್ಲಿಯವರೆಗೆ ನಡೆದುಕೊಂಡು ಹೋಗಲು ಸಮಸ್ಯೆಯಾಗುತ್ತಿದೆ ಎಂದು ಹೇಳುತ್ತಾರೆ ಇಸ್ಲಾಂಪುರ ಗ್ರಾಮಸ್ಥರು.

ಹೊಸದಾಗಿ ರಸ್ತೆ ನಿರ್ಮಿಸಬೇಕು ಎಂಬುದು ವಿವಿಧ ಗ್ರಾಮಗಳ ಜನರ ಬಹುದಿನಗಳ ಬೇಡಿಕೆಯಾಗಿದೆ. ರಸ್ತೆ ನಿರ್ಮಾಣವಾದರೆ ಔರಾದ್‍ಗೆ ಹೋಗಿ ಬರುವವರಿಗೆ ಅನುಕೂಲವಾಗಲಿದೆ. ಔರಾದ್‍ನಿಂದ ಕೌಠಾ ಸೇತುವೆ, ಇಸ್ಲಾಂಪುರ, ಯರನಳ್ಳಿ, ಚಂದಾಪುರ, ಬಾಳೂರ, ಕೊಟಗ್ಯಾಳ ಮಾರ್ಗವಾಗಿ ಭಾಲ್ಕಿಗೆ ತೆರಳುವುದೂ ಸುಲಭವಾಗಲಿದೆ ಎಂದು ಗ್ರಾಮಸ್ಥರ ತಿಳಿಸಿದ್ದಾರೆ.

ಸಂಬಂಧಪಟ್ಟವರು ಕೂಡಲೇ ರಸ್ತೆ ನಿರ್ಮಿಸಬೇಕು. ರಸ್ತೆ ಬದಿಯ ಗಿಡಗಳ ಟೊಂಗೆಗಳನ್ನು ಕತ್ತರಿಸಬೇಕು. ಮಳೆಗಾಲದಲ್ಲಿ ಮುಳುಗುವ ರಸ್ತೆ ಮಧ್ಯದ ಸೇತುವೆ ಎತ್ತರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ.

ಕೌಠಾ(ಬಿ) ಸೇತುವೆ ಬಳಿಯಿಂದ ಇಸ್ಲಾಂಪುರವರೆಗಿನ ರಸ್ತೆ ನಿರ್ಮಾಣಕ್ಕೆ ಕೆಕೆಆರ್‌ಡಿಬಿಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಅನುದಾನ ಮಂಜೂರಾದ ನಂತರ ಕಾಮಗಾರಿ ಆರಂಭಿಸಲಾಗುವು
ಭಗವಾನ್ ಸಿಂಗ್,ಲೋಕೋಪಯೋಗಿ ಇಲಾಖೆ ಎಇಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT