ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಹೀನ್’ನಲ್ಲಿ ಸ್ವಾತಂತ್ರ್ಯ ಸೇನಾನಿಗಳ ಛಾಯಾಚಿತ್ರ ಪ್ರದರ್ಶನ

ಕೋಟಿ ಜನರಿಗೆ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ ಪರಿಚಯ ಗುರಿ: ಖದೀರ್
Last Updated 8 ಆಗಸ್ಟ್ 2022, 13:22 IST
ಅಕ್ಷರ ಗಾತ್ರ

ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ಶಹಾಪುರ ಗೇಟ್ ಬಳಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ಉದ್ಯಾನದಲ್ಲಿ ಸ್ವಾತಂತ್ರ್ಯ ಸೇನಾನಿಗಳ ಮೂರು ದಿನಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದೆ.

ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಅರಿವು ಮೂಡಿಸಲು ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಲಾಲ್ ಬಹಾದ್ದೂರ್ ಶಾಸ್ತ್ರಿ, ಭಗತ್‍ಸಿಂಗ್, ಸುಖದೇವ್, ಚಂದ್ರಶೇಖರ ಆಝಾದ್, ಸರ್ದಾರ್ ವಲ್ಲಭಭಾಯಿ ಪಟೇಲ್, ನಾನಾ ಸಾಹಿಬ್, ಲಾಲಾ ಲಚಪತ್‍ರಾಯ, ರಾಣಿ ಲಕ್ಷ್ಮೀಬಾಯಿ, ಟಿಪ್ಪು ಸುಲ್ತಾನ್, ಹೈದರ್ ಅಲಿ, ಮಿರ್ಝಾ ಖಾಸಿಂ ಅಲಿ ಖಾನ್, ಸಿರಾಜ್ ಉದ್ ದೌಲಾ, ಹಾಜಿ ಷರಿಯತುಲ್ಲಾ, ಬೇಗಂ ಹಝರತ್ ಮಹಲ್ ಸೇರಿ 100 ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ತಿಳಿಸಿದರು.

ಛಾಯಾಚಿತ್ರಗಳ ಮೇಲೆ ಸ್ವಾತಂತ್ರ್ಯ ಹೋರಾಟಗಾರರ ಸಂಕ್ಷಿಪ್ತ ಪರಿಚಯ ಇದೆ. ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‍ನಲ್ಲಿ ಅವರ ವಿಡಿಯೊ ತಯಾರಿಸಿ ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಸಹ ಮಾಡಲಾಗಿದೆ. ಛಾಯಾಚಿತ್ರದ ಮೇಲಿನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಸ್ವಾತಂತ್ರ್ಯ ಹೋರಾಟಗಾರರ ಕುರಿತ ವಿಡಿಯೊ ತೆರೆದುಕೊಳ್ಳಲಿದೆ ಎಂದು ಹೇಳಿದರು.

ಜಿಲ್ಲೆಯ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಯುವಕರು, ಪಾಲಕರು ಹಾಗೂ ಸಾರ್ವಜನಿಕರು ಆ. 10 ರ ವರೆಗೆ ಕಾಲೇಜಿನಲ್ಲಿ ಪ್ರದರ್ಶನ ವೀಕ್ಷಿಸಬಹುದು. ನಂತರ ನಗರದ ಪ್ರಮುಖ ವೃತ್ತ, ಸಾರ್ವಜನಿಕ ಸ್ಥಳ, ಹೊಟೇಲ್, ಶಾಪಿಂಗ್ ಮಾಲ್‍ಗಳಲ್ಲಿ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಸಾರ್ವಜನಿಕರ ಮೊಬೈಲ್‍ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸಲಾಗುವುದು. ವಾಟ್ಸ್‍ಆ್ಯಪ್ ಗ್ರುಪ್, ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲು ಮನವೊಲಿಸಲಾಗುವುದು. ಒಟ್ಟು ಒಂದು ಕೋಟಿ ಜನರಿಗೆ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ ಪರಿಚಯಿಸುವ ಗುರಿ ಇದೆ ಎಂದು ತಿಳಿಸಿದರು.

ಶಾಹೀನ್ ಹಿಂದಿನಿಂದಲೂ ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮ ಬೆಳೆಸುತ್ತ ಬಂದಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಆಗಸ್ಟ್ 11 ರಿಂದ 17 ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಾರ್ವಜನಿಕರಿಗೆ ಶರ್ಟ್ ಜೇಬಿನ ಮೇಲೆ ಹಚ್ಚಿಕೊಳ್ಳುವ 50 ಸಾವಿರ ರಾಷ್ಟ್ರಧ್ವಜ ಹಾಗೂ ಮೆರವಣಿಗೆಯಲ್ಲಿ ಕೈಯಲ್ಲಿ ಹಿಡಿದುಕೊಂಡು ಸಾಗುವ 10 ಸಾವಿರ ರಾಷ್ಟ್ರಧ್ವಜಗಳನ್ನು ವಿತರಿಸಲಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ದೇಶದ ಸ್ವಾತಂತ್ರ್ಯ ಹಾಗೂ ಸ್ವಾತಂತ್ರ್ಯ ಸೇನಾನಿಗಳ ಕುರಿತ ನಿಬಂಧ ಸೇರಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಒಂದು ಸಾವಿರ ವಿದ್ಯಾರ್ಥಿಗಳು ತಮ್ಮ ಮನೆಯ ಸುತ್ತಮುತ್ತಲಿನ ತಲಾ 10 ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲಿದ್ದಾರೆ ಎಂದು ಹೇಳಿದರು.

ಪ್ರದರ್ಶನಕ್ಕೆ ಚಾಲನೆ: ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು ಛಾಯಾಚಿತ್ರ ಪ್ರದರ್ಶನಕ್ಕೆ ಜಂಟಿಯಾಗಿ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT