ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾನಲ್ಲಿ ಚಿತ್ತಾರ ಮೂಡಿಸಿದ ವಿಮಾನಗಳು: ಲೋಹದ ಹಕ್ಕಿಗಳ ಕಸರತ್ತಿಗೆ ಮನಸೋತ ಜನ

Published 30 ಆಗಸ್ಟ್ 2024, 13:54 IST
Last Updated 30 ಆಗಸ್ಟ್ 2024, 13:54 IST
ಅಕ್ಷರ ಗಾತ್ರ

ಬೀದರ್: ನಗರದ ಬಹಮನಿ ಕೋಟೆ ಆವರಣದಲ್ಲಿ ಭಾರತೀಯ ವಾಯುಪಡೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಏರ್ಪಡಿಸಿರುವ ಎರಡು ದಿನಗಳ ಏರ್ ಶೋ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಕೋಟೆಯಲ್ಲಿ ನೆರೆದಿದ್ದ ಅಪಾರ ಜನರು ಸೂರ್ಯಕಿರಣ ಏರೋಬ್ಯಾಟಿಕ್ ತಂಡದಿಂದ ಪ್ರದರ್ಶಿಸಿದ ಲೋಹಗಳ ಹಕ್ಕಿಗಳ ಹಾರಾಟ ನೋಡಿ ಸಂಭ್ರಮಿಸಿದರು. ಲೋಹದ ಹಕ್ಕಿಗಳು 360 ಡಿಗ್ರಿಯಲ್ಲಿ ವೈಮಾನಿಕ ಕಸರತ್ತು ನಡೆಸುತ್ತ ತಮ್ಮ ತಲೆಯ ಮೇಲಿಂದ ಹಾದು ಹೋದಾಗ ವಿದ್ಯಾರ್ಥಿಗಳು, ಜನರು ಜೋರಾಗಿ ಶಿಳ್ಳೆ ಹೊಡೆದು ಸಂಭ್ರಮಿಸಿದರು. ಭಾರತ ಮಾತಾ ಕೀ ಜೈ ಎಂದು ಘೋಷಣೆಗಳು ಕೂಗಿ ಸಂತಸ ಪಟ್ಟರು.

ಏರ್ ಶೋ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದದ್ದರಿಂದ ಕೋಟೆಯ ಪ್ರವೇಶ ದ್ವಾರದಲ್ಲಿ

ನೂಕು ನುಗ್ಗಲು ಉಂಟಾಯಿಉ. ಜನರು ಸಾಲಾಗಿ ನಿಲ್ಲದೇ ಅಲ್ಲಲ್ಲಿ ಗುಂಪು ಗುಂಪಾಗಿ ನಿಂತು ಲೋಹಗಳ ಹಕ್ಕಿಗಳ ಕಲರವ ವೀಕ್ಷಿಸಿದರು.

ಸೂರ್ಯಕಿರಣ ತಂಡದ ಗ್ರುಪ್ ಕ್ಯಾಪ್ಟನ್ ಗುರುಪ್ರೀತ್ ಸಿಂಗ್ ದಿಲ್ಲೋನ್ ನೇತೃತ್ವದಲ್ಲಿ ನಡೆದ ಏರ್ ಶೋ ಕಾರ್ಯಕ್ರಮದಲ್ಲಿ 9 ಸೂರ್ಯಕಿರಣ ವಿಮಾನಗಳು ವಿವಿಧ ರೀತಿಯಲ್ಲಿ ಆಕರ್ಷಕ ಪ್ರದರ್ಶನ ನೀಡುವ ಮೂಲಕ ನೋಡುಗರನ್ನು ಮಂತ್ರಮುಗ್ದರಾಗಿಸಿದವು.

ಸೂರ್ಯಕಿರಣ‌ ವಿಮಾನಗಳು ಆಕಾಶದಲ್ಲಿ ಮೇಲಿನಿಂದ ಕೆಳಗೆ, ಪರಸ್ಪರ ಮುಕಾಮುಖಿಯಾಗಿ ಕ್ರಾಸಿಂಗ್, ಬ್ಯಾರಲ್ ರೋಲ್ ಸೇರಿದಂತೆ ವಿವಿಧ ರೀತಿಯ ವೈಮಾನಿಕ ಪ್ರದರ್ಶನ ನೀಡಿದವು. ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ಆಕಾಶದಲ್ಲಿ ಮೂಡಿಸಿದಾಗ ಕರತಾಡನ ಮುಗಿಲು ಮುಟ್ಟಿತು. ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಶನಿವಾರ ಕೂಡ ಏರ್ ಶೋ ನಡೆಯಲಿದ್ದು ವಿದ್ಯಾರ್ಥಿಗಳು, ಸರ್ಕಾರಿ ನೌಕರರು ತಮ್ಮ ಪರಿವಾರದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮನವಿ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

1996 ರಲ್ಲಿ ಆರಂಭಗೊಂಡ ಸೂರ್ಯಕಿರಣ ಏರೋಬ್ಯಾಟಿಕ್ ತಂಡದ ವಿಮಾನಗಳು ಇದುವರೆಗೆ ಭಾರತವಲ್ಲದೇ ಶ್ರೀಲಂಕಾ, ಸಿಂಗಪುರ, ದುಬೈ ಸೇರಿದಂತೆ ಇತರೆ ದೇಶಗಳಲ್ಲಿ 600 ಕ್ಕಿಂತಲೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿವೆ. 9 ವಿಮಾನಗಳನ್ನು ಈ ಏರ್ ಕ್ರಾಫ್ಟ್ ತಂಡ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT