ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕರು: ನಿರ್ಗತಿಕರಿಗೆ ನಿತ್ಯ ಊಟ ವಿತರಣಾ ಸೇವಾ ಕೈಂಕರ್ಯ

ಕೊಠಡಿ ಬಾಡಿಗೆಗೆ ಪಡೆಯಲಾಗಿದ್ದು ಯುವಕರು ಸ್ವತಃ ಊಟ ತಯಾರಿಸುತ್ತಾರೆ
Last Updated 1 ಜನವರಿ 2022, 7:29 IST
ಅಕ್ಷರ ಗಾತ್ರ

ಬಸವಕಲ್ಯಾಣ: ಯುವ ತಂಡವೊಂದು ಎರಡು ತಿಂಗಳಿಂದ ಬಸವಕಲ್ಯಾಣ ನಗರದ ಬುದ್ಧಿಮಾಂದ್ಯರಿಗೆ ಹಾಗೂ ನಿರ್ಗತಿಕರಿಗೆ ನಿತ್ಯವೂ ಸಂಜೆ ಹೊತ್ತು ಸದ್ದಿಲ್ಲದೆ ಊಟ ವಿತರಿಸುತ್ತಿದೆ.

ಲೋಕೇಶ ಮೋಳಕೆರೆ ನೇತೃತ್ವದ ತಂಡ ಇಂಥ ಪುಣ್ಯ ಕಾರ್ಯದಲ್ಲಿ ತೊಡಗಿದೆ. ಲೋಕೇಶ ಎಂ.ಎಸ್.ಡಬ್ಲೂ ಪದವಿ ಪಡೆದು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿನಿಂದಲೂ ಸಮಾಜ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಇವರು ಅನೇಕ ಸಲ ಕೈಯಲ್ಲಿ ಡಬ್ಬ ಹಿಡಿದುಕೊಂಡು ವ್ಯಾಪಾರಸ್ಥರಿಂದ ದೇಣಿಗೆ ಸಂಗ್ರಹಿಸಿ ಕಾರ್ಗಿಲ್ ಯೋಧರಿಗೆ, ಕೊಡಗು ಅತಿವೃಷ್ಠಿ ನಿರಾಶ್ರಿತರಿಗೆ, ಅತ್ಯಾಚರಕ್ಕೊಳಗಾದ ಬಾಲಕಿಯರ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.

ತಾಲ್ಲೂಕಿನಲ್ಲಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮಯಕ್ಕ ಬಸ್ ಸೌಲಭ್ಯ ದೊರಕುವಂತಾಗಲು ಮನವಿ ಸಲ್ಲಿಸಿದ್ದಾರೆ. ಧರಣಿ ಕುಳಿತಿದ್ದಾರೆ. ಸರ್ಕಾರಿ ಪದವಿ ಕಾಲೇಜು ಹೊರ ವಲಯದಲ್ಲಿ ಇದ್ದುದರಿಂದ ವಿದ್ಯಾರ್ಥಿಗಳಿಗೆ ಅಲ್ಲಿಗೆ ಹೋಗಲು ತೊಂದರೆ ಆಗುತ್ತಿತ್ತು. ಆಗ ನಗರದ ಮಧ್ಯದಲ್ಲಿನ ಕಲ್ಯಾಣ ಮಂಟಪದಲ್ಲಿ ಕಾಲೇಜಿನ ತರಗತಿ ನಡೆಯುವಂತೆ ಪ್ರಯತ್ನಿಸಿ ದಾಖಲಾತಿ ಹೆಚ್ಚಲು ಕಾರಣರಾಗಿದ್ದಾರೆ. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಮೃತರ ಅಂತ್ಯಕ್ರಿಯೆಗೆ ಸಂಬಂಧಿಕರು ಕೂಡ ಮುಂದಾಗದ ಪರಿಸ್ಥಿತಿ ಇದ್ದಾಗ ಅಂಥವರ ಅಂತ್ಯಕ್ರಿಯೆಗೆ ವ್ಯವಸ್ಥೆಗೈದಿದ್ದಾರೆ. ತಾವೇ ಸ್ವತಃ ಮುಂದಾಗಿ ಶವಸಂಸ್ಕಾರ ನಡೆಸಿದ್ದಾರೆ.

ಈಚೆಗೆ ನಿರ್ಗತಿಕರಿಗೆ ಊಟ ವಿತರಿಸುವ ಕಾರ್ಯ ಆರಂಭಿಸಿದ್ದಾರೆ. ಜ್ಞಾನೇಶ್ವರ ರಾಚಪ್ಪನೋರ್, ರಾಹುಲ್ ಶಾಶೆಟ್ಟೆ, ನಾಗೇಶ ಬಾವಗೆ, ಆಕಾಶ ಮುತ್ತೆ, ಪ್ರಶಾಂತ ಅಂಬಾಡೆ, ಶಿವಶಂಕರ ಕಾಮಣ್ಣ, ಪ್ರವೀಣ ಬಿರಾದಾರ, ಚೇತನ ಹಿರೋಳೆ, ಅಂಬರೀಶ ಕೋರಾಳೆ ಇವರು ಕೂಡ ಈ ಕಾರ್ಯದಲ್ಲಿ ಸಹಕಾರ ನೀಡುತ್ತಿದ್ದಾರೆ. ಸರದಿಯಂತೆ ಪ್ರತಿದಿನ ಹುಚ್ಚರು, ನಿರ್ಗತಿಕರು ಇರುವಲ್ಲಿಗೆ ಹೋಗಿ ಊಟ ವಿತರಿಸಲಾಗುತ್ತಿದೆ. ಹುಚ್ಚರಿಗೆ ಸ್ವತಃ ಕ್ಷೌರ, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿದ್ದಾರೆ.

`ದೈಹಿಕವಾಗಿ ಸಬಲರಿದ್ದು ಭಿಕ್ಷೆ ಬೇಡುವವರ ಹೊಟ್ಟೆ ಹೇಗೋ ತುಂಬುತ್ತದೆ. ಆದರೆ, ವೃದ್ಧರು, ಬುದ್ಧಿಮಾಂದ್ಯರು ಮಾತ್ರ ಎಲ್ಲಿಗೂ ಹೋಗಲಾಗದೆ ಉಪವಾಸವೇ ಇರುವುದನ್ನು ಗಮನಿಸಿ ಮನಸ್ಸಿಗೆ ನೋವಾಗಿದ್ದರಿಂದ ಅಂಥವರಿಗೆ ಊಟ ವಿತರಣೆ ಆರಂಭಿಸಲಾಗಿದೆ. ದಿನವೂ ನಿರ್ಗತಿಕರು ಇರುವ ಸ್ಥಳಕ್ಕೆ ಹೋಗಿ ಊಟ, ಕುಡಿಯಲು ನೀರು ಕೊಡುತ್ತೇವೆ' ಎಂದು ತಂಡದ ಪ್ರಮುಖರಾದ ಜ್ಞಾನೇಶ್ವರ ರಾಚಪ್ಪನೋರ್ ಹೇಳಿದ್ದಾರೆ.

`ಸಂಘದ ಸದಸ್ಯರಿಂದಲೇ ಹಣ ಸಂಗ್ರಹಿಸಿ ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ, ಬೆಲ್ಲ, ತರಕಾರಿ, ಗ್ಯಾಸ್ ಸಿಲೆಂಡರ್ ಖರೀದಿಸಿ ಅಡುಗೆ ಮಾಡುತ್ತೇವೆ. ಇದಕ್ಕಾಗಿ ನಗರದಲ್ಲಿ ಕೋಣೆಯೊಂದನ್ನು ಬಾಡಿಗೆಗೆ ಪಡೆಯಲಾಗಿದೆ. ಅಡುಗೆ ಕೂಡ ನಾವೇ ಸ್ವತಃ ಸಿದ್ಧಪಡಿಸಿ, ಪ್ರತಿದಿನ ಬೇರೆ ಬೇರೆಯಾದ ಊಟ ವಿತರಿಸುತ್ತೇವೆ' ಎಂದು ಲೋಕೇಶ ಮೋಳಕೆರೆ ತಿಳಿಸಿದ್ದಾರೆ. `ತಂಡದ ಯುವಕರೆಲ್ಲರೂ ಸೇವಾ ಮನೋಭಾವದವರು. ದಿನವೂ ತಪ್ಪದೇ ನಿರ್ಗತಿಕರಿಗೆ ಊಟ ನೀಡುತ್ತಿದ್ದಾರೆ. ಅನ್ಯ ಸ್ಥಳದಿಂದ ಬಂದು ಹಣವಿಲ್ಲದೆ ಊಟಕ್ಕಾಗಿ ಪರದಾಡುವವರಿಗೂ ಇವರು ಊಟ ನೀಡುತ್ತಿರುವುದು ಪುಣ್ಯದ ಕಾರ್ಯವಾಗಿದೆ' ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗಡಿನಾಡು ಪ್ರತಿನಿಧಿ ಬಸವಣ್ಣಪ್ಪ ನೆಲ್ಲಗಿ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT