ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ,ಡೆಕ್ಕನ್ ಹೆರಾಲ್ಡ್‌,Insights IAS ಕಾರ್ಯಾಗಾರಕ್ಕೆ ವಿದ್ಯಾರ್ಥಿ ಸಮೂಹ

ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದ ‘ಗೈಡಿಂಗ್‌ ಫೋರ್ಸ್‌’
Published 4 ಸೆಪ್ಟೆಂಬರ್ 2024, 14:28 IST
Last Updated 4 ಸೆಪ್ಟೆಂಬರ್ 2024, 14:28 IST
ಅಕ್ಷರ ಗಾತ್ರ

ಬೀದರ್‌: ಮೋಡ ಕವಿದ ವಾತಾವರಣ, ಜಿಟಿಜಿಟಿ ಮಳೆ, ಸಂಪೂರ್ಣ ತಂಪಾದ ವಾತಾವರಣ. ಇಂತಹ ಪರಿಸರದಲ್ಲಿ ಹೆಸರು ನೋಂದಣಿಗೆ ತಾ ಮುಂದು, ನಾ ಮುಂದು ಎಂದು ಕೌಂಟರ್‌ಗಳ ಎದುರು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸಾಲು, ಕಾರ್ಯಕ್ರಮ ಆರಂಭಗೊಳ್ಳುವುದಕ್ಕೂ ಅರ್ಧಗಂಟೆ ಮೊದಲೇ ಇಡೀ ಸಭಾಂಗಣ ಕಿಕ್ಕಿರಿದು ಭರ್ತಿ.

ಐಎಎಸ್‌, ಐಪಿಎಸ್‌ ಹಾಗೂ ಕೆಎಎಸ್‌ ಅಧಿಕಾರಿಗಳಾಗಲು ಬಯಸುವ ಆಕಾಂಕ್ಷಿಗಳಿಗೆ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕಾ ಬಳಗವು ‘ಇನ್‌ಸೈಟ್ಸ್ ಐಎಎಸ್’ ಸಂಸ್ಥೆಯ ಸಹಭಾಗಿತ್ವದಲ್ಲಿ ಬುಧವಾರ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ‘ಗೈಡಿಂಗ್‌ ಫೋರ್ಸ್‌’ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರದಲ್ಲಿ ಕಂಡು ಬಂದ ದೃಶ್ಯಗಳಿವು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಬೆಳಿಗ್ಗೆ 9ಕ್ಕೆ ಹೆಸರು ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ, ಜಿಲ್ಲೆಯ ವಿವಿಧ ಕಡೆಗಳಿಂದ ಅದಕ್ಕೂ ಮುಂಚೆಯೇ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಬಂದು ಸಾಲುಗಟ್ಟಿ ನಿಂತಿದ್ದರು. ಎಲ್ಲರೂ ಉತ್ಸಾಹದಿಂದ ಬಂದು ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. 9.30ಕ್ಕೆಲ್ಲ ಇಡೀ ಸಭಾಂಗಣ ಸಂಪೂರ್ಣ ಭರ್ತಿಯಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದದ್ದರಿಂದ ಹೆಚ್ಚುವರಿಯಾಗಿ ಕುರ್ಚಿಗಳನ್ನು ತರಿಸಲಾಯಿತು. ಅದು ಕೂಡ ಸಾಲದಾದಗ ವೇದಿಕೆಯ ಅಕ್ಕಪಕ್ಕ, ಮೆಟ್ಟಿಲುಗಳ ಸಾಲು, ಸಭಾಂಗಣದ ಹೊರಭಾಗದಲ್ಲಿ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಲಾಗಿತ್ತು.

ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕರೂ ಆಗಿರುವ ವಿನಯ್‌ ಕುಮಾರ್ ಜಿ.ಬಿ., ಸಾಧನಾ ಅಕಾಡೆಮಿಯ ನಿರ್ದೇಶಕರೂ ಆದ ಕಾಲೇಜು ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಮಂಜುನಾಥ ಬಿ. ಅವರು ವೇದಿಕೆಗೆ ಬರುತ್ತಿದ್ದಂತೆ ಕರತಾಡನ ಮುಗಿಲು ಮುಟ್ಟಿತ್ತು. ಶಿಳ್ಳೆ ಹೊಡೆದು ಸ್ವಾಗತಿಸಿದರು. ಇದಕ್ಕೂ ಮುನ್ನ ರಾಷ್ಟ್ರಗೀತೆ ಹಾಡಲಾಯಿತು. ಆನಂತರ ಒಬ್ಬೊಬ್ಬರಾಗಿಯೇ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿನ ಗುಟ್ಟು ಹೇಳಿದರು. ಬೆಳಿಗ್ಗೆ 10ಗಂಟೆಗೆ ಆರಂಭಗೊಂಡ ಕಾರ್ಯಕ್ರಮ ಮಧ್ಯಾಹ್ನ 3ರ ವರೆಗೆ ನಡೆಯಿತು. ಯಾರೊಬ್ಬರೂ ಅವರು ಕುಳಿತ ಸ್ಥಳ ಬಿಟ್ಟು ಕದಲಲಿಲ್ಲ. ಅಷ್ಟರಮಟ್ಟಿಗೆ ಸಂಪನ್ಮೂಲ ವ್ಯಕ್ತಿಗಳು ಅವರನ್ನು ಹಿಡಿದಿಟ್ಟಿದ್ದರು. ವಿದ್ಯಾರ್ಥಿಗಳು ಕೂಡ ವಿಷಯವನ್ನು ಚೆನ್ನಾಗಿ ಗ್ರಹಿಸಿ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಪಣ ತೊಟ್ಟವರಂತೆ ತಾಳ್ಮೆಯಿಂದ ಸಂಪನ್ಮೂಲ ವ್ಯಕ್ತಿಗಳ ಮಾತುಗಳನ್ನು ಆಲಿಸಿದರು. ಗದ್ದಲ, ಗೊಂದಲಕ್ಕೆ ಅವಕಾಶ ಇಲ್ಲದಂತೆ ಕಾರ್ಯಕ್ರಮ ಜರುಗಿತು.

ಮೂರು ಹಂತ ದಾಟಬೇಕು:

ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಹಮ್ಮಿಕೊಂಡಿರುವ ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಕಾರ್ಯ ಶ್ಲಾಘನಾರ್ಹವಾದುದು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಬೇಕಾದರೆ ಮೂರು ಹಂತ ದಾಟಬೇಕಾಗುತ್ತದೆ. ಪ್ರಿಲಿಮ್ಸ್‌, ಮೇನ್ಸ್‌ ಪರೀಕ್ಷೆ ಮತ್ತು ಸಂದರ್ಶನ ಯಶಸ್ವಿಯಾಗಿ ಪೂರೈಸಿದರೆ ಐಎಎಸ್‌ ಆಗಬಹುದು. ಒಂದರಲ್ಲೂ ಹಿಂದೆ ಬಿದ್ದರೆ ಮತ್ತೆ ಇಡೀ ವರ್ಷ ಆರಂಭದಿಂದ ಓದಬೇಕಾಗುತ್ತದೆ. ಸಿದ್ಧತೆ ಮಾಡಿಕೊಳ್ಳುವಾಗ ಬಹಳ ಎಚ್ಚರ ವಹಿಸಬೇಕು ಎಂದು ಸಲಹೆ ಮಾಡಿದರು.

ನಮ್ಮ ಸುತ್ತಮುತ್ತ ಏನಾಗುತ್ತದೆ ಅದನ್ನು ಕುತೂಹಲದಿಂದ ಗಮನಿಸಿ ಅದರ ಬಗ್ಗೆ ಆಳವಾಗಿ ತಿಳಿದುಕೊಳ್ಳಬೇಕು. ಬೀದರ್‌ನಲ್ಲಿ ಚಳಿ ಜಾಸ್ತಿ ಇರುತ್ತದೆ. ಕಲಬುರಗಿಯಲ್ಲೇಕೆ ಬಿಸಿಲು ಜಾಸ್ತಿ ಇರುತ್ತೆ? ಈ ರೀತಿಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಪ್ರತಿಯೊಂದು ವಿಷಯದ ಆಳ ಅಧ್ಯಯನ ಬಹಳ ಅಗತ್ಯ ಎಂದು ಹೇಳಿದರು.

ಪಿಎಚ್‌.ಡಿ ರೀತಿ ಸಂಶೋಧನೆ ಮಾಡಬೇಕು:

‘ಯುಪಿಎಸ್‌ಸಿ ಪರೀಕ್ಷೆ ಕ್ಲೀಯರ್‌ ಮಾಡಬೇಕಾದರೆ ಪಿಎಚ್‌.ಡಿ ಮಾದರಿಯಲ್ಲಿ ಅಧ್ಯಯನ ಮಾಡಬೇಕು. ಪಿಎಚ್‌.ಡಿಯಲ್ಲಿ ಒಂದು ವಿಷಯದ ಬಗ್ಗೆ ಸಂಶೋಧನೆ ಮಾಡಲಾಗುತ್ತದೆ. ಆದರೆ, ಯುಪಿಎಸ್‌ಸಿ ಪರೀಕ್ಷೆ ಬರೆಯುವವರು ಪ್ರತಿಯೊಂದು ವಿಷಯದ ಬಗ್ಗೆ ಸಂಶೋಧನೆ ಅಥವಾ ಆಳವಾಗಿ ಅಧ್ಯಯನ ಮಾಡಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ತಿಳಿಸಿದರು.

ನಾನೊಬ್ಬ ಡಿಸಿ ಅಥವಾ ಎಸ್‌ಪಿ ಆದರೆ ಏನು ಮಾಡುತ್ತಿದ್ದೆ ಎಂಬ ಯೋಚನೆ ಬೆಳೆಸಿಕೊಳ್ಳಬೇಕು. ಹೆಚ್ಚಿನ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಎಲ್ಲ ಜಾತಿ, ಧರ್ಮದ ಜನರನ್ನು ಪ್ರೀತಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ದುಡುಕಿಲಿ ಯಾರಿಗೂ ಮಾರಕವಾಗುವ ನಿರ್ಧಾರಗಳನ್ನು ಕೈಗೊಳ್ಳಬಾರದು. ಇಂತಹ ಗುಣಗಳೊಂದಿಗೆ ಅಪಾರ ಜ್ಞಾನ ಬೆಳೆಸಿಕೊಂಡರೆ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಪ್ರಸರಣ ವಿಭಾಗದ ಪ್ರಾಂತೀಯ ವ್ಯವಸ್ಥಾಪಕ ಪ್ರಕಾಶ ನಾಯಕ, ‘ಪ್ರಜಾವಾಣಿ’ ಕಲಬುರಗಿ ಬ್ಯುರೊ ಮುಖ್ಯಸ್ಥ ವಿನಾಯಕ ಭಟ್‌ ವೇದಿಕೆ ಮೇಲೆ ಹಾಜರಿದ್ದರು. ‘ಪ್ರಜಾವಾಣಿ’ ಬೀದರ್‌ ಜಿಲ್ಲಾ ಹಿರಿಯ ವರದಿಗಾರ ಶಶಿಕಾಂತ ಎಸ್‌. ಶೆಂಬೆಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಿಸಿದರು. ಶ್ರೀ ಗುರುಬಸವ ಕಾಲೇಜಿನ ವೈಷ್ಣವಿ, ಭಕ್ತಿ ಅವರು ಪ್ರಾರ್ಥನಾ ಗೀತೆ ಹಾಡಿದರು.

ಸ್ಪರ್ಧಾತ್ಮಕ ಪರೀಕ್ಷೆ ಯಶಸ್ಸಿನ ಸೂತ್ರಗಳು...

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕಾದ ಕೆಲವು ಸೂತ್ರಗಳನ್ನು ವಿನಯ್‌ ಕುಮಾರ್‌ ಜಿ.ಬಿ. ಮತ್ತು ಮಂಜುನಾಥ ಬಿ. ವಿವರಿಸಿದರು. ಅವುಗಳು ಕೆಳಕಂಡಂತಿವೆ.

* ಸಮಯಕ್ಕೆ ಹೆಚ್ಚಿನ ಮಹತ್ವ ಕೊಡುವುದು

* ಓದಿನಲ್ಲಿ ಶಿಸ್ತು, ಏಕಾಗ್ರತೆ ಬಹಳ ಮುಖ್ಯ

* ಸ್ಪಷ್ಟ ಗುರಿಯೊಂದಿಗೆ ಪೂರಕ ಸಿದ್ಧತೆ ಮಾಡುವುದು

* ವಿಷಯ ಪರಿಣತರ ಸಲಹೆಗೆ ತಕ್ಕಂತೆ ಸಿದ್ಧತೆ

* ಪರಿಣತರ ಸಲಹೆ ಪ್ರಕಾರ ಅಧ್ಯಯನ ಸಾಮಗ್ರಿ ಹೊಂದಿಸಿಕೊಳ್ಳುವುದು

‘ಪುಸ್ತಕ ಓದಿನಿಂದಷ್ಟೇ ಯಶಸ್ಸು ಸಿಗದು’

‘ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಬೇಕು ಎಂಬುವವರಿಗೆ ಜಗತ್ತಿನಲ್ಲಿ ನಿತ್ಯ ಆಗುವ ವಿದ್ಯಮಾನಗಳ ಬಗ್ಗೆ ಜ್ಞಾನ ಇರಬೇಕು. ನಿತ್ಯದ ಆಗು ಹೋಗುಗಳ ಬಗ್ಗೆ ತಿಳಿದು, ಅದನ್ನು ವಿಶ್ಲೇಷಿಸುವ ಜಾಣ್ಮೆ ಬೆಳೆಸಿಕೊಳ್ಳಬೇಕು. ಪಠ್ಯಪುಸ್ತಕ ಓದಿನಿಂದಷ್ಟೇ ಪರೀಕ್ಷೆ ಕ್ಲೀಯರ್‌ ಮಾಡಲು ಆಗುವುದಿಲ್ಲ’ ಎಂದು ‘ಇನ್‌ಸೈಟ್ಸ್‌ ಐಎಎಸ್‌’ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಶಮಂತಾ ಗೌಡ ತಿಳಿಸಿದರು.

ನಮ್ಮ ನಿತ್ಯದ ಪ್ರತಿಯೊಂದು ಕೆಲಸ, ವ್ಯವಹಾರದಲ್ಲಿ ಜ್ಞಾನ ಇದೆ. ಅದನ್ನು ಹೇಗೆ ಗ್ರಹಿಸಿ ತಿಳಿದುಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ. ಅನೇಕರಿಗೆ ಏನು ಓದಬೇಕು, ಹೇಗೆ ಓದಬೇಕು ಎನ್ನುವುದು ಗೊತ್ತಿಲ್ಲ. ದಿಕ್ಕು ದಿಸೆಯಿಲ್ಲದೆ ಓದುವುದರಿಂದ ಯಾವುದೇ ಪ್ರಯೋಜನವಿಲ್ಲ. ಯಾವ ಹುದ್ದೆಗೆ ಪರೀಕ್ಷೆ ಬರೆಯುತ್ತೇವೆ ಅದಕ್ಕೆ ತಕ್ಕಂತಹ ಅಧ್ಯಯನ ಸಾಮಗ್ರಿ ಸಂಗ್ರಹಿಸಿ ಓದುವುದು ಬಹಳ ಅಗತ್ಯ ಎಂದು ಹೇಳಿದರು.

ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ ಪ್ರತಿಯೊಂದು ವಿಷಯಗಳ ಬಗ್ಗೆ ಸೂಕ್ಷ್ಮವಾಗಿ, ಆಳವಾಗಿ ತಿಳಿದು ಅಧ್ಯಯನ ಮಾಡುವುದು ಬಹಳ ಅಗತ್ಯ.
–ಶಿಲ್ಪಾ ಶರ್ಮಾ, ಜಿಲ್ಲಾಧಿಕಾರಿ ಬೀದರ್‌
ಐಎಎಸ್‌, ಐಪಿಎಸ್‌ ಅಧಿಕಾರಿ ಆಗಬೇಕಾದರೆ ಬಹಳಷ್ಟು ತ್ಯಾಗ ಮಾಡಿ, ಕಠಿಣ ಅಭ್ಯಾಸ ಮಾಡಬೇಕಾಗುತ್ತದೆ. ಇದಕ್ಕೆ ಸಿದ್ಧರಿದ್ದರೆ ತಯಾರಿ ಮಾಡಬಹುದು.
–ಪ್ರದೀಪ್‌ ಗುಂಟಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT