ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೃದಯ ರೋಗಿಗಳಿಗೆ ಉಚಿತ ಇಂಜೆಕ್ಷನ್‌

ಸರ್ಕಾರಿ ಆಸ್ಪತ್ರೆಗಳಲ್ಲಿ ಹೃದಯ ರೋಗಕ್ಕೆ ಉತ್ತಮ ಚಿಕಿತ್ಸೆ, ಜಯದೇವ ಮಾರ್ಗದರ್ಶನ
Published : 29 ಆಗಸ್ಟ್ 2024, 14:50 IST
Last Updated : 29 ಆಗಸ್ಟ್ 2024, 14:50 IST
ಫಾಲೋ ಮಾಡಿ
Comments

ನಿರ್ವಹಣೆ: ಶಶಿಕಾಂತ ಎಸ್‌. ಶೆಂಬೆಳ್ಳಿ

ಬೀದರ್‌: ‘ಹೃದಯ ಸಂಬಂಧಿ ರೋಗಿಗಳಿಗೆ ಎದೆ ನೋವು ಕಾಣಿಸಿಕೊಂಡಾಗ ತುರ್ತಾಗಿ ನೀಡುವ ಇಂಜೆಕ್ಷನ್‌ ಅನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊಡಲಾಗುತ್ತದೆ. ರೋಗಿಗಳು ಇದರ ಪ್ರಯೋಜನ ಪಡೆಯಬೇಕು...’

‘ಪ್ರಜಾವಾಣಿ’ಯಿಂದ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಶಿವಶಂಕರ್‌ ಬಿ., ಡಿಎಂಒ ಡಾ. ರಾಜಶೇಖರ ಪಾಟೀಲ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕರಪ್ಪ ಬೊಮ್ಮಾ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುತ್ತ ಈ ಸಲಹೆ ನೀಡಿದರು.

ಎದೆನೋವು ಕಾಣಿಸಿಕೊಂಡಾಗ ಕೊಡಲಾಗುವ ಇಂಜೆಕ್ಷನ್‌ಗೆ ಖಾಸಗಿ ಆಸ್ಪತ್ರೆಗಳಲ್ಲಿ ₹28 ಸಾವಿರದಿಂದ ₹31 ಸಾವಿರದವರೆಗೆ ಬೆಲೆ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿ ಕೊಡಲಾಗುತ್ತದೆ. ಜಿಲ್ಲೆಯಲ್ಲಿ ಬೀದರ್‌ ನಗರದ ಬ್ರಿಮ್ಸ್‌, ಹುಮನಾಬಾದ್‌, ಭಾಲ್ಕಿ ಹಾಗೂ ಬಸವಕಲ್ಯಾಣ ತಾಲ್ಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗಳಲ್ಲೂ ಈ ಸೌಲಭ್ಯ ಇದೆ. ಅದೇ ರೀತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಇಸಿಜಿ ಮಾಡಿದರೆ ಅದರ ವರದಿ ಕಲಬುರಗಿಯ ಜಯದೇವ ಹೃದ್ರೋಗ ಸಂಸ್ಥೆಗೆ ಹೋಗುತ್ತದೆ. ಅದನ್ನು ಗಮನಿಸಿ ಅಲ್ಲಿನ ವೈದ್ಯರು ಏನೆಲ್ಲ ಚಿಕಿತ್ಸೆ ಕೊಡಬೇಕು ಎಂಬುದರ ಬಗ್ಗೆ ಸಲಹೆ ಕೊಡುತ್ತಾರೆ. ಇದರಿಂದ ಹೃದ್ರೋಗಿಗಳಿಗೆ ತುರ್ತಾಗಿ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಆಯ್ದ ಪ್ರಶ್ನೋತ್ತರಗಳ ವಿವರ ಇಂತಿವೆ:

ಬಸವರಾಜ; ಔರಾದ್‌–ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಪೂರೈಸಲು ಏನು ಮಾಡುತ್ತಿದ್ದೀರಿ?

ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಗ್ರಾಮ ಪಂಚಾಯಿತಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್‌ಫೋರ್ಸ್‌ ರಚಿಸಿಕೊಂಡು ಸ್ವಚ್ಛತೆ, ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದಾರೆ. ಸ್ವಚ್ಛತೆ, ಕುಡಿಯುವ ನೀರು ಕೊಡುವುದು ಪಂಚಾಯಿತಿ ಜವಾಬ್ದಾರಿ. ಆರೋಗ್ಯ ಇಲಾಖೆಯಿಂದ ಅವರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಉದಾಹರಣೆಗೆ ಎಷ್ಟು ಬ್ಲೀಚಿಂಗ್‌ ಪೌಡರ್‌ ಬಳಸಬೇಕು, ಸ್ವಚ್ಛತೆ ಹೇಗೆ ಕಾಪಾಡಿಕೊಳ್ಳಬೇಕು. ಜಾಗೃತಿ ಮೂಡಿಸಿರುವುದರ ಪರಿಣಾಮ ಅಸ್ವಚ್ಛತೆಯಿಂದ ಬರುತ್ತಿದ್ದ ಒಟ್ಟು ರೋಗಗಳಲ್ಲಿ ಈ ವರ್ಷ ಶೇ 50ರಷ್ಟು ತಗ್ಗಿದೆ. ಒಂದುವೇಳೆ ಎಲ್ಲಾದರೂ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಕೊಡದಿದ್ದರೆ ಅದನ್ನು ತಿಳಿಸಿದರೆ ಸಂಬಂಧಿತ ಇಲಾಖೆಯವರ ಗಮನಕ್ಕೆ ತರಲಾಗುವುದು.

ಗುರುನಾಥ ವಡ್ಡೆ; ಭವಾನಿ ಬಿಜಲಗಾಂವ್‌–ಕಮಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳಾ ವೈದ್ಯರೇ ಇಲ್ಲ. ಔರಾದ್‌ ತಾಲ್ಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಯಂತ್ರಗಳು ಹಾಳಾಗಿರುವುದು ಗಮನಕ್ಕೆ ಇದೆಯೇ?

ಕಮಲನಗರ ಆರೋಗ್ಯ ಕೇಂದ್ರಕ್ಕೆ ಮಹಿಳಾ ವೈದ್ಯರ ನೇಮಕಾತಿ ಸಂಬಂಧ ಹಲವು ಸಲ ಜಾಹೀರಾತು ಕೊಡಲಾಗಿದೆ. ಆದರೆ, ಯಾರೂ ಅರ್ಜಿ ಸಲ್ಲಿಸಲು ಆಸಕ್ತಿ ತೋರಿಸುತ್ತಿಲ್ಲ. ಆರೋಗ್ಯ ಕೇಂದ್ರ ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೆ ಹೆಚ್ಚಿನ ಸೌಕರ್ಯಗಳು ಸಿಗುತ್ತವೆ. ಇನ್ನು, ಔರಾದ್‌ ತಾಲ್ಲೂಕು ಆಸ್ಪತ್ರೆಯ ಒಂದು ಡಯಾಲಿಸಿಸ್‌ ಯಂತ್ರ ಕೆಟ್ಟು ಹೋಗಿತ್ತು. ಅದನ್ನು ಈಗಾಗಲೇ ಸರಿಪಡಿಸಲಾಗಿದೆ. ಒಟ್ಟು 10 ಜನ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಾರೆ. ಯಾರಿಗೂ ತೊಂದರೆ ಆಗದಂತೆ ಚಿಕಿತ್ಸೆ ಕೊಡಲಾಗುತ್ತಿದೆ.

ವಿಜಯಕುಮಾರ ಸೋನಾರೆ; ಬೀದರ್‌–ಖಾಸಗಿ ಆಸ್ಪತ್ರೆಗಳಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಏಕೆ ಇರುವುದಿಲ್ಲ? ಸುರಕ್ಷತೆಯೂ ಅಷ್ಟಕಷ್ಟೇ ಇದೆ. ಇದಕ್ಕೇನು ಕಾರಣ?

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಉತ್ತಮ ಚಿಕಿತ್ಸೆಯನ್ನು ಜನರಿಗೆ ಕೊಡಲು ಮೇಲಿಂದ ಮೇಲೆ ಸಭೆಗಳನ್ನು ನಡೆಸಿ ಸೂಚನೆ ಕೊಡಲಾಗುತ್ತಿದೆ. ಎಲ್ಲಾದರೂ ವ್ಯತ್ಯಾಸವಿದ್ದರೆ ಸರಿಪಡಿಸಲಾಗುವುದು. ವೈದ್ಯರು, ಸಿಬ್ಬಂದಿ ರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಪ್ರಸ್ತಾವ ಸಿದ್ಧವಾಗಿದ್ದು, ಶೀಘ್ರದಲ್ಲೇ ಆದೇಶ ಹೊರಬೀಳಬಹುದು.

ಸತೀಶ ಮಡಿವಾಳ; ಹಲಬರ್ಗಾ–ಸೊಳ್ಳೆಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಆರೋಗ್ಯ ಕೇಂದ್ರದ ಸುತ್ತಮುತ್ತ ಅಸ್ವಚ್ಛತೆ ಇದೆ. ಇದನ್ನು ಸರಿಪಡಿಸುತ್ತಿಲ್ಲವೇಕೆ?

ಈ ಸಂಬಂಧ ಈಗಾಗಲೇ ಪಿಡಿಒಗಳಿಗೆ ತರಬೇತಿ ಕೊಡಲಾಗಿದೆ. ಬ್ಲೀಚಿಂಗ್‌ ಪೌಡರ್‌ ಖರೀದಿಸಿ, ಸಿಂಪಡಿಸಲು ಗ್ರಾಮ ಪಂಚಾಯಿತಿಗಳಿಗೆ ವಿಶೇಷ ಅನುದಾನ ಕೊಡಲಾಗಿದೆ. ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗೆ ಸತತ ಶ್ರಮಿಸಲಾಗುತ್ತಿದೆ. ಆರೋಗ್ಯ ಕೇಂದ್ರದ ಅಸ್ವಚ್ಛತೆಯ ವಿಷಯವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

ಗುರುಪ್ರಸಾದ್‌; ಮೆಹಕರ್‌–ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿಯೇ ಇರುವುದಿಲ್ಲ. ತುರ್ತು ಚಿಕಿತ್ಸೆಗೆ ಸಾರ್ವಜನಿಕರು ಏನು ಮಾಡಬೇಕು?

ಸಿಬ್ಬಂದಿ ನೇಮಕ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ. ಆರು ಜನ ವೈದ್ಯರು, ಸಿಬ್ಬಂದಿ ಬರಬೇಕು. ಅದರ ಬಗ್ಗೆ ಇಲಾಖೆಯಿಂದ ಫಾಲೋ ಅಪ್‌ ಮಾಡಲಾಗುತ್ತಿದೆ. ಸಿಬ್ಬಂದಿ ನೇಮಕಗೊಂಡ ನಂತರ ಹಗಲು ರಾತ್ರಿ ಚಿಕಿತ್ಸಾ ಸೌಲಭ್ಯ ಸಿಗಲಿದೆ. ಆರರಿಂದ ಎಂಟು ತಿಂಗಳಲ್ಲಿ ಬರಬಹುದು.

ದತ್ತಾತ್ರೆ ಸ್ವಾಮಿ, ಅಳವಾಯಿ–ಆರೋಗ್ಯ ಕೇಂದ್ರಕ್ಕೆ ಎರಡೇ ದಿನ ವೈದ್ಯರು ಬಂದು ಹೋಗುತ್ತಾರೆ. ಇದಕ್ಕೆ ಕಾರಣವೇನು?

–ನಿಮ್ಮ ಭಾಗದಲ್ಲಿರುವುದು ಆರೋಗ್ಯ ಉಪಕೇಂದ್ರ. ಅಲ್ಲಿ ವೈದ್ಯರ ಹುದ್ದೆ ಇಲ್ಲ.

ಬಿ12 ಥೈರಾಯ್ಡ್‌ ಉಚಿತ ಪರೀಕ್ಷೆ

‘ಗರ್ಭಿಣಿಯರಿಗೆ ಬಿ12 ಥೈರಾಯ್ಡ್‌ ಪರೀಕ್ಷೆ ಸೌಕರ್ಯ ಶೀಘ್ರದಲ್ಲೇ ಉಚಿತವಾಗಿ ಲಭಿಸಲಿದೆ. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಈ ಸೇವೆ ಸಿಗಲಿದೆ. ಇನ್ನೊಂದು ವಾರದಲ್ಲಿ ಈ ಸಂಬಂಧ ಆದೇಶ ಹೊರಬೀಳಲಿದೆ. ಖಾಸಗಿಯಲ್ಲಿ ಈ ಎರಡೂ ಪರೀಕ್ಷೆಗೆ ₹600ರಿಂದ ₹700 ಶುಲ್ಕ ವಿಧಿಸಲಾಗುತ್ತದೆ. ಉಚಿತ ಸೇವೆ ಆರಂಭಗೊಂಡ ನಂತರ ಜನರಿಗೆ ಅನುಕೂಲವಾಗಲಿದೆ’ ಎಂದು ಆರ್‌ಸಿಎಚ್‌ ಶಿವಶಂಕರ್‌ ಬಿ. ತಿಳಿಸಿದರು.

- ಶಾಲೆಗಳಲ್ಲಿ ಅನಿಮೀಯಾ ಪರೀಕ್ಷೆ

‘ಜಿಲ್ಲೆಯ ಎಲ್ಲ ಪಿಯು ಕಾಲೇಜುಗಳಲ್ಲಿ ಈಗಾಗಲೇ ಅನಿಮೀಯಾ ಪರೀಕ್ಷೆ ನಡೆಸಲಾಗಿದೆ. ಶೀಘ್ರದಲ್ಲೇ 7ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ನಡೆಸಲಾಗುವುದು. ಆ ಶಾಲೆಗಳಿಗೆ ಆರೋಗ್ಯ ಕಾರ್ಯಕರ್ತೆಯರು ತೆರಳಿ ಪರೀಕ್ಷೆ ನಡೆಸುವರು. ಮಕ್ಕಳ ಬೆಳವಣಿಗೆಯಲ್ಲಿ ಇದು ಮಹತ್ವದ ಪಾತ್ರ ವಹಿಸುವುದರಿಂದ ಇದರ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕರಪ್ಪ ಬೊಮ್ಮಾ ತಿಳಿಸಿದರು.

‘ಮುಟ್ಟಿನ ಕಪ್‌’

‘ಮೊದಲ ಹಂತದಲ್ಲಿ ರಾಜ್ಯದ ಕೆಲ ಆಯ್ದ ಜಿಲ್ಲೆಗಳಲ್ಲಿ ಸಿಲಿಕಾನ್‌ನಿಂದ ತಯಾರಿಸಿದ ‘ಮುಟ್ಟಿನ ಕಪ್‌’ ನೀಡಲಾಗುತ್ತಿದೆ. ಇದರ ಬೆಲೆ ₹300 ಇದೆ. ಒಂದು ಕಪ್‌ ಹತ್ತು ವರ್ಷಗಳವರೆಗೆ ಬಳಸಬಹುದು. ರೆಗ್ಯುಲರ್‌ ಪ್ಯಾಡ್‌ ಬಳಸುವುದರಿಂದ ಸ್ಕ್ರ್ಯಾಚೆಸ್‌ ತುರಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮುಟ್ಟಿನ ಕಪ್‌ ಬಳಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಎರಡನೇ ಹಂತದಲ್ಲಿ ಬೀದರ್‌ನಲ್ಲಿ ಆರಂಭವಾಗಲಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕರಪ್ಪ ಬೊಮ್ಮಾ ತಿಳಿಸಿದರು.

ಡೆಂಗಿ ಪ್ರಕರಣ ಇಳಿಮುಖ

‘ಜುಲೈನಲ್ಲಿ ಏಕಾಏಕಿ ಏರಿಕೆ ಕಂಡಿದ್ದ ಡೆಂಗಿ ಪ್ರಕರಣಗಳ ಸಂಖ್ಯೆ ಆಗಸ್ಟ್‌ ತಿಂಗಳಲ್ಲಿ ಇಳಿಮುಖವಾಗಿದೆ. ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ 325 ಡೆಂಗಿ ಪ್ರಕರಣಗಳು ವರದಿಯಾಗಿವೆ. ಜೂನ್‌ನಲ್ಲಿ 13 ಜುಲೈನಲ್ಲಿ 163 ಆಗಸ್ಟ್‌ನಲ್ಲಿ 118 ಪ್ರಕರಣಗಳು ವರದಿಯಾಗಿವೆ. ಇದುವರೆಗೆ ಯಾರೂ ಸಾವನ್ನಪ್ಪಿಲ್ಲ’ ಎಂದು ಆರ್‌ಸಿಎಚ್‌ ಅಧಿಕಾರಿ ಡಾ. ಶಿವಶಂಕರ್‌ ಬಿ. ತಿಳಿಸಿದರು. ಜುಲೈನಲ್ಲಿ ಸತತ ಮಳೆಯಾದ ಕಾರಣ ಪ್ರಕರಣಗಳು ಹೆಚ್ಚು ವರದಿಯಾಗಿದ್ದವು. ಸೊಳ್ಳೆ ಉತ್ಪತ್ತಿ ತಾಣಗಳ ನಾಶ ಲಾರ್ವಾ ಸರ್ವೇ ನಡೆಸಿ ನಿರ್ಮೂಲನೆ ಮಾಡಿರುವುದು ಜನಜಾಗೃತಿ ಮೂಡಿಸಿರುವುದರಿಂದ ಆಗಸ್ಟ್‌ನಲ್ಲಿ ಪ್ರಕರಣಗಳು ಕಡಿಮೆಯಾಗಿವೆ. ಬರುವ ದಿನಗಳಲ್ಲಿ ಇನ್ನಷ್ಟು ತಗ್ಗಲಿವೆ. ಇನ್ನು ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ 121 ಚಿಕುನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ. ಮಲೇರಿಯಾದ ಯಾವುದೇ ಪ್ರಕರಣ ಪತ್ತೆ ಆಗಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT