ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಅಪರಾಧ

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರೆಡ್ಡಿ ಹೇಳಿಕೆ
Last Updated 24 ನವೆಂಬರ್ 2021, 12:56 IST
ಅಕ್ಷರ ಗಾತ್ರ

ಬೀದರ್: ‘ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧ. ಕಾಯ್ದೆ ಉಲ್ಲಂಘಿಸುವವರಿಗೆ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ ಹೇಳಿದರು.

ಇಲ್ಲಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಡೆ ಕಾಯ್ದೆ ಅಡಿ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.

‘ಭ್ರೂಣ ಹತ್ಯೆ ಮಾಡುವವರ ಹಾಗೂ ಈ ಕೆಲಸಕ್ಕೆ ಸಹಾಯ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆಗೆ ಸಂಬಂಧಿಸಿದಂತೆ ತಂತ್ರಜ್ಞಾನದ ಬಳಕೆ ನಿಯಂತ್ರಿಸಲು ಹಾಗೂ ದುರ್ಬಳಕೆಯನ್ನು ಹತ್ತಿಕ್ಕಲು ತಿದ್ದುಪಡಿ ಕಾಯ್ದೆ ಜಾರಿಗೊಳಿಸಲಾಗಿದೆ. ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ವರ್ಗೀಕರಣ ತಂತ್ರ (ಪಿಸಿ ಮತ್ತು ಪಿಎನ್ ಡಿಟಿ) ನಿಯಂತ್ರಿಸಲಾಗಿದೆ’ ಎಂದು ಹೇಳಿದರು.

‘ಲಿಂಗದ ಆಯ್ಕೆ ನಿಷೇಧಕ್ಕೆ ಸಾಂಸ್ಥಿಕ ತಾಂತ್ರಿಕತೆಗಳನ್ನು ರೂಪಿಸಲು ಹಾಗೂ ವರ್ಗೀಕರಣ ತಂತ್ರಗಳ ಬಳಕೆಯನ್ನು ನಿಯಂತ್ರಿಸಲು ಸಮಿತಿಗಳನ್ನು ರಚಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಶಂಕರ ಬಿ. ಮಾತನಾಡಿ, ‘ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣುಭ್ರೂಣ ಹತ್ಯೆ ತಡೆಯಲು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಬಸ್ ನಿಲ್ದಾಣಗಳಲ್ಲಿ ಒಂದು ತಿಂಗಳಿನಿಂದ ಧ್ವನಿಮುದ್ರಿತ ಸಂದೇಶ ಪ್ರಸಾರ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಭ್ರೂಣಲಿಂಗ ಪತ್ತೆ ಹಚ್ಚುವವರ ಮಾಹಿತಿ ನೀಡಿದವರಿಗೆ ₹ 5 ಸಾವಿರ ಹಾಗೂ ಪ್ರಕರಣ ದಾಖಲಿಸಲು ಸಹಕರಿಸಿದವರಿಗೆ ₹ 50 ಸಾವಿರ ಬಹುಮಾನ ನೀಡಲಾಗುವುದು’ ಎಂದು ಹೇಳಿದರು.

‘ಹೆರಿಗೆ ಪೂರ್ವ ಭ್ರೂಣ ಲಿಂಗಪತ್ತೆ ಕಾಯ್ದೆ ಪ್ರಕಾರ ಮೊದಲ ಅಪರಾಧಕ್ಕೆ 3 ವರ್ಷ ಜೈಲುಶಿಕ್ಷೆ ಜತೆಗೆ ₹ 50 ಸಾವಿರ ದಂಡ, ಎರಡನೇ ಅಪರಾಧಕ್ಕೆ 5 ವರ್ಷ ಜೈಲು ಶಿಕ್ಷೆ, ₹ 1 ಲಕ್ಷ ದಂಡ ಹಾಗೂ ವೈದ್ಯಕೀಯ ವೃತ್ತಿಯಿಂದ ಅಮಾನತುಗೊಳಿಸಲು ಅವಕಾಶ ಇದೆ. ಶಿಕ್ಷೆ ವೈದ್ಯರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯ ಗಂಡ, ಅತ್ತೆ, ಮಾವ ಹಾಗೂ ಇವರ ಸಂಬಂಧಿಕರೂ ಭ್ರೂಣ ಲಿಂಗಪತ್ತೆ ಕ್ರಿಯೆಗೆ ಪ್ರೋತ್ಸಾಹಿಸಿದರೆ ಅಂತಹವರೂ ಶಿಕ್ಷೆಗೆ ಒಳಗಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್‌ ಸೌಲಭ್ಯ ಹೊಂದಿರುವ ಆಸ್ಪತ್ರೆಗಳು, ಜೆನೆಟಿಕ್ ಕ್ಲಿನಿಕ್‌ಗಳು ಹಾಗೂ ಪ್ರಯೋಗಾಲಯಗಳು ಸಂಬಂಧಪಟ್ಟ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ’ ಎಂದು ಹೇಳಿದರು.

ಸಮಿತಿಯ ಸದಸ್ಯರಾದ ಗವಿಸಿದ್ದಪ್ಪ ಹೊಸಮನಿ, ಕೃಷ್ಣಮೂರ್ತಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಆರತಿ ಕೃಷ್ಣಮೂರ್ತಿ, ಡಾ.ಅಮಿತ್ ಶಹಾ, ವಕೀಲ ಉಮೇಶ ಪಾಂಡ್ರೆ, ಭಾರತೀಯ ವೈದ್ಯಕಿಯ ಸಂಘದ ಬೀದರ್‌ ಶಾಖೆಯ ಅಧ್ಯಕ್ಷ ಡಾ.ವಿನೋದ ಸಾವಳಗಿ, ಸ್ತ್ರೀರೋಗ ತಜ್ಞರ ಸಂಘದ ಡಾ.ವಿಜಯಶ್ರೀ ಬಶೆಟ್ಟಿ ಮಾತನಾಡಿದರು. ಮಹೇಶ ರೆಡ್ಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT