ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಜಿಲ್ಲಾಡಳಿತ ಕಚೇರಿ ಸ್ಥಳ ಬದಲಾವಣೆ: ಅಧಿಕಾರಕ್ಕೆ ಬಂದವರದ್ದೇ ಕಾರುಬಾರು

Last Updated 17 ಡಿಸೆಂಬರ್ 2019, 19:33 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಜನರಿಗೆ ಕಾಗದದ ವಿಮಾನ ತೋರಿಸಿ ಮಕ್ಕಳಾಟ ಮಾಡುತ್ತಿರುವ ರಾಜಕಾರಣಿಗಳು ಇದೀಗ ಜನಾಭಿಪ್ರಾಯ ಪಡೆಯದೇ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣಕ್ಕೆ ಜಾಗ ಅಂತಿಮಗೊಳಿಸಿ ಸಾರ್ವಜನಿಕರ ಟೀಕೆಗೆ ಒಳಗಾಗಿದ್ದಾರೆ.

2012 ರಿಂದ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣದ ಕಟ್ಟಡಕ್ಕೆ ಜಾಗ ಗುರುತಿಸುವ ವಿಚಾರ ವಿವಾದವಾಗಿ ಮುಂದುವರಿದಿದೆ. ಮೊದಲು ಕಾಂಗ್ರೆಸ್, ಜೆಡಿಎಸ್‌ ಹಾಗೂ ಇದೀಗ ಬಿಜೆಪಿ ನಾಯಕರು ವಿವಾದದ ಹುತ್ತಕ್ಕೆ ಕೈಹಾಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ಕಟ್ಟಡ ಜಿಲ್ಲೆಯ ಜನರ ಪಾಲಿಗೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಇದಕ್ಕೆ ರಾಜ್ಯ ಸರ್ಕಾರ ₹ 48 ಕೋಟಿ ಬಿಡುಗಡೆ ಮಾಡಿದರೂ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಒಮ್ಮತದ ನಿರ್ಧಾರಕ್ಕೆ ಬಾರದಿರುವ ಕಾರಣ ಅನುದಾನ ಸರ್ಕಾರಿ ಖಜಾನೆಯಲ್ಲೇ ಕೊಳೆಯುತ್ತಿದೆ.

2012ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಡಾ.ಪಿ.ಸಿ.ಜಾಫರ್‌ ಅವರು ಚಿಕ್ಕಪೇಟದಲ್ಲಿ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಅದಕ್ಕೆ 2013ರಲ್ಲಿ ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆಯನ್ನೂ ನೀಡಿತ್ತು.

ರಾಜಕೀಯ ಕಾರಣಗಳಿಂದ ವಿರೋಧ ವ್ಯಕ್ತವಾದ ಕಾರಣ ನಂತರ ಜಿಲ್ಲಾಧಿಕಾರಿಯಾಗಿ ಬಂದ ಅನುರಾಗ ತಿವಾರಿ ಅವರು ಹೊಸ ನೀಲನಕ್ಷೆ ಸಿದ್ಧಪಡಿಸಿ ಬೀದರ್‌ ತಾಲ್ಲೂಕಿನ ಮಾಮನಕೇರಿ ಗುಡ್ಡದ ಮೇಲೆ ಜಾಗ ಗುರುತಿಸಿದ್ದರು. ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳದಲ್ಲಿಯೇ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಬೇಕು ಎಂದು ಅಂದಿನ ಕಲಬುರ್ಗಿಯ ಪ್ರಾದೇಶಿಕ ಆಯುಕ್ತರು ಸ್ಪಷ್ಟವಾಗಿ ಉಲ್ಲೇಖಿಸಿ ಪ್ರಸ್ತಾವ ವಾಪಾಸ್‌ ಕಳಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಜಾಗ ಒದಗಿಸುವಂತೆ ಕೋರಿದ್ದರು. ಅಷ್ಟೇ ಅಲ್ಲ, ಜಿಲ್ಲಾ ಆಡಳಿತ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿ ಜಾಗ ನೀಡಲು ಮನವಿ ಮಾಡಿಕೊಂಡಿತ್ತು.

ಅರಣ್ಯ ಸಚಿವರಾಗಿದ್ದ ರಮಾನಾಥ ರೈ ಅವರು ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯ ಅಧಿಕಾರಿ ಎಂ.ಆರ್.ಜಿ.ರೆಡ್ಡಿ ಅವರಿಗೆ ಪತ್ರ ಬರೆದು ಕಡತ ವಿಲೇವಾರಿ ಮಾಡಿಕೊಡುವಂತೆ ಕೇಳಿಕೊಂಡಿದ್ದರು. ಮಾಮನಕೇರಿ ಗುಡ್ಡದ ಮೇಲೆ ಜಲ ಮೂಲಗಳಿಲ್ಲ. ಗುಡ್ಡದ ಮಣ್ಣು ಬಹುಮಹಡಿಯ ಕಟ್ಟಡ ಕಟ್ಟಲು ಸೂಕ್ತವಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರಿಂದ ಜಿಲ್ಲಾ ಆಡಳಿತ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಮಾಮನಕೇರಿಯಲ್ಲಿ ಕಟ್ಟಡ ನಿರ್ಮಿಸುವುದಕ್ಕೂ ಜನರ ವಿರೋಧವಿತ್ತು.

ಮಾಮನಕೇರಿಯಲ್ಲಿ ಕಟ್ಟಡ ನಿರ್ಮಾಣವಾಗಲಿರುವ ಸುದ್ದಿ ಹರಡುತ್ತಲೇ ರಿಯಲ್‌ ಎಸ್ಟೇಟ್‌ ದಂದೆ ಗರಿ ಬಿಚ್ಚಿಕೊಂಡಿತ್ತು. ಜಾಗ ಸ್ಥಳಾಂತರವಾದ ನಂತರ ವ್ಯವಹಾರ ಮಂದಗತಿಯಲ್ಲಿ ಸಾಗಿತು.

2019ರ ಜನವರಿ 26 ರಂದು ಈಗಿರುವ ಜಿಲ್ಲಾಧಿಕಾರಿ ಕಚೇರಿ ಸ್ಥಳದಲ್ಲೇ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಮಾಡಲಾಗುವುದು. ಇದಕ್ಕೂ ಮೊದಲು ಜಿಲ್ಲೆಯ ಸಚಿವರು ಹಾಗೂ ಶಾಸಕರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಂಡೆಪ್ಪ ಕಾಶೆಂಪೂರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಹೇಳಿದ್ದರು. ಆದರೆ, ಚುನಾಯಿತ ಪ್ರತಿನಿಧಿಗಳು ಒಮ್ಮತದ ತೀರ್ಮಾನಕ್ಕೆ ಬರಲೇ ಇಲ್ಲ.

ಇದಾದ ನಂತರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ತೋಟಗಾರಿಕೆ ಇಲಾಖೆಯ ನರ್ಸರಿ ಜಾಗವನ್ನು ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಯಿತು. ನಗರ ಪ್ರದೇಶದಲ್ಲಿ ಪರ್ಯಾಯ ಜಾಗ ಒದಗಿಸಿ ತನ್ನ ಜಾಗವನ್ನು ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆ ಷರತ್ತು ಹಾಕಿರುವುದರಿಂದ ಬೇರೆ ಬೇರೆ ಜಾಗವನ್ನು ತೋರಿಸಲಾಯಿತು.

ಮೋಹನ್‌ ಮಾರ್ಕೆಟ್‌ ಸಮೀಪದ ಎಲ್‌ಐಸಿ ಕಚೇರಿ ಮುಂದಿನ ಉದ್ಯಾನಕ್ಕೆ ಮೀಸಲಿಟ್ಟ ಜಾಗ ತೋರಿಸಿದರೂ ಅಲ್ಲಿ ಅತಿಕ್ರಮಣ ಮಾಡಿ ಎರಡು ದೇವಸ್ಥಾನಗಳನ್ನು ಕಟ್ಟಲಾಗಿದೆ. ಉದ್ಯಾನದಲ್ಲಿ ಒಂದು ಓವರ್‌ಹೆಡ್‌ ಟ್ಯಾಂಕ್‌ ಸಹ ಇದೆ. ಹೀಗಾಗಿ ತೋಟಗಾರಿಕೆ ಇಲಾಖೆ ಒಪ್ಪಿಗೆ ಸೂಚಿಸಲಿಲ್ಲ. ಜಿಲ್ಲಾ ಆಡಳಿತ ಅಲ್ಲಿನ ಅತಿಕ್ರಮಣ ತೆರವು ಮಾಡಲಿಲ್ಲ.

ಶಾಸಕ ರಹೀಂ ಖಾನ್ ಅವರು ಕಟ್ಟಡ ಎಲ್ಲಿ ನಿರ್ಮಾಣವಾಗಬೇಕು ಎನ್ನುವ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಲ್ಲಿದ್ದವರು ಒಮ್ಮೆಯೂ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಜಿಲ್ಲಾ ಪಂಚಾಯಿತಿ, ನಗರಸಭೆ ಸದಸ್ಯರು, ಸಂಘ ಸಂಸ್ಥೆಗಳ ಮುಖಂಡರ ಸಭೆ ಕರೆದು ಅಭಿಪ್ರಾಯ ಆಲಿಸಿಲ್ಲ. ಗೊಂದಲಕ್ಕೆ ಶಾಶ್ವತ ತೆರೆ ಎಳೆಯುವ ಪ್ರಯತ್ನವನ್ನೂ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT