ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮನೆ ಮನೆಗೆ ಶುದ್ಧ ನೀರಿನ ಕ್ಯಾನ್ ಪೂರೈಕೆ

ಶವವಿದ್ದ ನೀರು ಸೇವನೆ ಪ್ರಕರಣ: ಗ್ರಾಮಸ್ಥರ ಆರೋಗ್ಯ ವಿಚಾರಿಸಿದ ಸಚಿವ, ಶಾಸಕ
Published 30 ಮಾರ್ಚ್ 2024, 15:31 IST
Last Updated 30 ಮಾರ್ಚ್ 2024, 15:31 IST
ಅಕ್ಷರ ಗಾತ್ರ

ಆಣದೂರ(ಜನವಾಡ): ಶವವಿದ್ದ ಮೇಲ್ಮಟ್ಟದ ನೀರು ಸಂಗ್ರಹಾಗಾರದಲ್ಲಿನ(ಓವರ್ ಹೆಡ್ ಟ್ಯಾಂಕ್) ನೀರು ಸೇವನೆಯಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದ ಬೀದರ್ ತಾಲ್ಲೂಕಿನ ಆಣದೂರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಮನೆಮನೆಗೆ ಶುದ್ಧ ಕುಡಿಯುವ ನೀರಿನ ಕ್ಯಾನ್ ಪೂರೈಸುವ ವ್ಯವಸ್ಥೆ ಮಾಡಿದೆ.

ಓವರ್ ಹೆಡ್ ಟ್ಯಾಂಕ್‍ನ ನಲ್ಲಿ ಸಂಪರ್ಕ ಇರುವ ಪ್ರದೇಶದ ಮನೆಗಳಿಗೆ ಶನಿವಾರ ಕ್ಯಾನ್‍ಗಳಲ್ಲಿಯ ಶುದ್ಧ ಕುಡಿಯುವ ನೀರು ಪೂರೈಸಲಾಯಿತು. ಮನೆ ಬಳಕೆಗಾಗಿ ಟ್ಯಾಂಕರ್ ನೀರು ಸರಬರಾಜು ಮಾಡಲಾಯಿತು.

ಗ್ರಾಮದಲ್ಲಿ 1,500 ಮನೆಗಳು ಇದ್ದು, ಯುವಕನ ಶವ ಪತ್ತೆಯಾದ ಓವರ್ ಹೆಡ್ ಟ್ಯಾಂಕ್‍ನಿಂದ 215ರಿಂದ 220 ಮನೆಗಳಿಗೆ ಮಾತ್ರ ನೀರು ಪೂರೈಕೆ ಆಗುತ್ತಿತ್ತು. ತಾ.ಪಂ ಇಒ ಸೂಚನೆ ಮೇರೆಗೆ ಆ ಮನೆಗಳಿಗೆ ಪ್ರತಿ ದಿನ ತಲಾ 20 ಲೀಟರ್‌ನ ಎರಡು ಕ್ಯಾನ್‍ಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ಮನೆ ಬಳಕೆಗಾಗಿ ಟ್ಯಾಂಕರ್‌ನಿಂದ ಬೆಳಿಗ್ಗೆ ಹಾಗೂ ಸಂಜೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪಿಡಿಒ ಮಲ್ಲಿಕಾರ್ಜುನ ಡೋಣೆ ತಿಳಿಸಿದ್ದಾರೆ.

15 ದಿನಗಳವರೆಗೆ ಟ್ಯಾಂಕರ್ ನೀರು ಹಾಗೂ ಕ್ಯಾನ್‍ಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಓವರ್ ಹೆಡ್ ಟ್ಯಾಂಕ್ ಶುಚಿಗೊಳಿಸಿದ ನಂತರ ಅದರಿಂದ ಮತ್ತೆ ನೀರು ಸರಬರಾಜು ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.

ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಯುವಕ ಆತ್ಮಹತ್ಯೆ ಮಾಡಿಕೊಂಡ ಓವರ್ ಹೆಡ್ ಟ್ಯಾಂಕ್, ತಾತ್ಕಾಲಿಕ ಚಿಕಿತ್ಸಾ ಶಿಬಿರ ಹಾಗೂ ಟ್ಯಾಂಕ್‍ನಿಂದ ನೀರು ಪೂರೈಕೆಯಾದ ಮನೆಗಳಿಗೆ ಭೇಟಿ ಕೊಟ್ಟು ಜನರ ಆರೋಗ್ಯ ವಿಚಾರಿಸಿದರು.

ಪತ್ನಿ ತವರು ಮನೆಯಿಂದ ಮರಳದ್ದಕ್ಕೆ ರಾಜು ಶೈಲೇಶ್ ಎನ್ನುವ ಯುವಕ ಬುಧವಾರ ಓವರ್ ಹೆಡ್ ಟ್ಯಾಂಕ್‍ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಶುಕ್ರವಾರ ಶವ ಪತ್ತೆಯಾಗಿತ್ತು.

ಬೀದರ್ ತಾಲ್ಲೂಕಿನ ಆಣದೂರ ಗ್ರಾಮದಲ್ಲಿ ಶನಿವಾರ ಗ್ರಾಮಸ್ಥರಿಗೆ ಟ್ಯಾಂಕರ್ ನೀರು ಪೂರೈಸಲಾಯಿತು
ಬೀದರ್ ತಾಲ್ಲೂಕಿನ ಆಣದೂರ ಗ್ರಾಮದಲ್ಲಿ ಶನಿವಾರ ಗ್ರಾಮಸ್ಥರಿಗೆ ಟ್ಯಾಂಕರ್ ನೀರು ಪೂರೈಸಲಾಯಿತು
ಬೀದರ್ ತಾಲ್ಲೂಕಿನ ಆಣದೂರ ಗ್ರಾಮದಲ್ಲಿ ಶನಿವಾರ ಜನರಿಗೆ ಕುಡಿಯಲು ಕ್ಯಾನ್‍ಗಳಲ್ಲಿಯ ಶುದ್ಧ ನೀರು ಕೊಡಲಾಯಿತು
ಬೀದರ್ ತಾಲ್ಲೂಕಿನ ಆಣದೂರ ಗ್ರಾಮದಲ್ಲಿ ಶನಿವಾರ ಜನರಿಗೆ ಕುಡಿಯಲು ಕ್ಯಾನ್‍ಗಳಲ್ಲಿಯ ಶುದ್ಧ ನೀರು ಕೊಡಲಾಯಿತು
ಡಾ. ಶೈಲೇಂದ್ರ ಬೆಲ್ದಾಳೆ
ಡಾ. ಶೈಲೇಂದ್ರ ಬೆಲ್ದಾಳೆ

‘ನೀರು ಸೇವನೆಯಿಂದ ಆರೋಗ್ಯ ಸಮಸ್ಯೆಯಾಗಿಲ್ಲ’

ಶವವಿದ್ದ ಓವರ್ ಹೆಡ್ ಟ್ಯಾಂಕ್ ನೀರು ಸೇವನೆಯಿಂದ ಗ್ರಾಮದಲ್ಲಿ ಯಾರಿಗೂ ಆರೋಗ್ಯ ಸಮಸ್ಯೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನಿರಗುಡೆ ತಿಳಿಸಿದ್ದಾರೆ. ನೀರು ಸೇವನೆ ಮಾಡಿದ ಅನೇಕರು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡಿದ್ದಾರೆ. ಜನರಲ್ಲಿ ಧೈರ್ಯ ತುಂಬುವ ದಿಸೆಯಲ್ಲಿ ಗ್ರಾಮದ ಪಂಚಾಯಿತಿ ಕಚೇರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರಂಭಿಸಲಾದ ತಾತ್ಕಾಲಿಕ ಚಿಕಿತ್ಸಾ ಶಿಬಿರಗಳನ್ನು ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ. ‘ಆತಂಕ ಪಡುವ ಅಗತ್ಯ ಇಲ್ಲ’ ಓವರ್‌ಹೆಡ್ ಟ್ಯಾಂಕ್‍ನಲ್ಲಿದ್ದ ಶವ ಪೂರ್ಣ ಕೊಳೆತು ಒಡೆದಿಲ್ಲ. ಹೀಗಾಗಿ ನೀರು ಸೇವಿಸಿದ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು. ಎಂಟು ದಿನಗಳವರೆಗೆ ಓವರ್‌ಹೆಡ್ ಟ್ಯಾಂಕ್ ಬಳಸದಂತೆ ಹಾಗೂ ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ಕ್ಯಾನ್‍ಗಳನ್ನು ಪೂರೈಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆಗಾಗಿ ತಕ್ಷಣ ಕೊಳವೆಬಾವಿ ಕೊರೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದು ವಾರ ಗ್ರಾಮದಲ್ಲಿ ಉಳಿದು ಜನರ ಆರೋಗ್ಯದ ಮೇಲೆ ನಿಗಾ ಇರಿಸಲು ವೈದ್ಯರ ತಂಡಕ್ಕೆ ನಿರ್ದೇಶನ ಕೊಡಲಾಗಿದೆ ಎಂದು ಹೇಳಿದರು. ‘ನೀರಿನ ಟ್ಯಾಂಕ್ ಶುಚಿಗೊಳಿಸಿ’ ಯುವಕನ ಶವವಿದ್ದ ನೀರಿನ ಟ್ಯಾಂಕ್ ಅನ್ನು ವೈಜ್ಞಾನಿಕ ವಿಧಾನದಲ್ಲಿ ಶುಚಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು. ಟ್ಯಾಂಕ್ ಸುತ್ತ ತಂತಿ ಬೇಲಿ ಹಾಕಬೇಕು. ಚಾವಣಿ ಮೇಲೆ ಗೇಟ್ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು. ಈಗಾಗಲೇ ಟ್ಯಾಂಕ್‍ನಿಂದ ನೀರು ಪೂರೈಕೆ ಸ್ಥಗಿತಗೊಳಿಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ನೀರು ಪೂರೈಕೆಯಲ್ಲಿ ಲೋಪ ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT