ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರ ನಾಲಾಯಕ್ ಎಂದ ಖೂಬಾ: ಸಚಿವ-ಸಂಸದರ ವಾಗ್ವಾದ

Last Updated 3 ಜೂನ್ 2019, 14:27 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಬರ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಹಾಗೂ ಸಂಸದ ಭಗವಂತ ಖೂಬಾ ನಡುವೆ ವಾಗ್ವಾದ ನಡೆಯಿತು.

‘ವಿದ್ಯುತ್ ಸಮಸ್ಯೆ ಹಾಗೂ ದಿನದ 24 ಗಂಟೆ ನೀರು ಪೂರೈಕೆ ಯೋಜನೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ನಗರದ ಕೆಲವೆಡೆ ನೀರಿನ ಸಮಸ್ಯೆ ಇದೆ’ ಎಂದು ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೊಯಿಸ್‌ ಹುಸೇನ್ ಹೇಳಿದಾಗ, ‘ಹಾಗಾದರೆ ಸರ್ಕಾರ ನಾಲಾಯಕ್ ಇದೆಯಾ’ ಎಂದು ಭಗವಂತ ಖೂಬಾ ಪ್ರಶ್ನಿಸಿದರು.

ಇದರಿಂದ ಕೆರಳಿದ ಕಾಶೆಂಪೂರ, ‘ನಾಲಾಯಕ್ ಎಂದರೆ ಏನರ್ಥ. ಮಾತಿನ ಮೇಲೆ ಹಿಡಿತವಿರಲಿ’ ಎಂದು ಸಂಸದರಿಗೆ ತಿರುಗೇಟು ನೀಡಿದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ನಡುವೆ ಖೂಬಾ ಅವರು ‘ನಾನು ಅಧಿಕಾರಿಗೆ ನಾಲಾಯಕ್ ಅಂದಿದ್ದೇನೆ’ ಎಂದು ಸಮಜಾಯಿಸಿ ನೀಡಿದರು.

‘ಸ್ಥಳೀಯ ಶಾಸಕರೂ ಆದ ಸಚಿವರು (ರಹೀಂಖಾನ್) ಜನರಿಗೆ ಉಚಿತ ನೀರು ಕೊಡುತ್ತಿರುವುದಾಗಿ ಹೇಳುತ್ತಿದ್ದಾರೆ. ಹಾಗಾದರೆ, ಸರ್ಕಾರ ಸಮರ್ಥವೋ, ಅಸಮರ್ಥವೋ’ ಎಂದು ಖೂಬಾ ಮತ್ತೆ ಅಧಿಕಾರಿಯನ್ನು ಕೇಳಿದರು.

‘ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸಿ ಜನರಿಗೆ ನೀರು ಕೊಡುತ್ತಿದೆ. ಕೆಲವರು ವೈಯಕ್ತಿಕವಾಗಿ ₹ 5 ಸಾವಿರ, ₹ 10 ಸಾವಿರ ಖರ್ಚು ಮಾಡಿ ಶ್ರೇಯಸ್ಸು ತೆಗೆದುಕೊಳ್ಳುತ್ತಿದ್ದಾರೆ. ಖಾಸಗಿ ವ್ಯಕ್ತಿಗಳು ಪೂರೈಸುವ ನೀರಿನ ಟ್ಯಾಂಕರ್ ಬಂದ್ ಮಾಡಿ ಸರ್ಕಾರದಿಂದಲೇ ನೀರು ಸರಬರಾಜು ಮಾಡಬೇಕು’ ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪೂರೆ, ‘ಖಾಸಗಿಯಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಿದಾಗ ಹೆಚ್ಚು-ಕಡಿಮೆಯಾದರೆ ಯಾರು ಹೊಣೆ?, ಸ್ಥಳೀಯ ಶಾಸಕರು ನೀರಿನ ಹೆಸರಲ್ಲಿ ಪುಕ್ಕಟ್ಟೆ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಹಿಂದೆ ವೈಯಕ್ತಿಕವಾಗಿ ನೀರು ಪೂರೈಕೆ ಮಾಡಿದ್ದಾಗಿ ಹೇಳಿ ಸರ್ಕಾರದಿಂದ ಬಿಲ್ ಎತ್ತಿದ್ದಾರೆ. ಈಗಲೂ ಅವರ ಹಾಗೂ ನಗರಸಭೆ ಮಧ್ಯೆ ಏನಿದೆ ಎನ್ನುವುದು ಗೊತ್ತಿಲ್ಲ’ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಶೆಂಪೂರ, ‘ಬೀದರ್‌ನಲ್ಲಿ ಯಾರಾದರೂ ಟ್ಯಾಂಕರ್ ಮೇಲೆ ಸ್ವಂತ ಫೋಟೋ ಹಾಕಿಕೊಂಡು ನೀರು ಪೂರೈಸಿ ಸರ್ಕಾರದಿಂದ ಬಿಲ್ ಪಡೆದಿದ್ದಾರೆಯೇ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಅವರನ್ನು ಪ್ರಶ್ನಿಸಿದರು. ಅವರು ‘ಇಲ್ಲ’ ಎಂದು ಉತ್ತರಿಸಿದರು.

‘ನಗರದಲ್ಲಿ ಜನರ ಅಗತ್ಯಕ್ಕೆ ತಕ್ಕಂತೆ ಟ್ಯಾಂಕರ್‌ಗಳನ್ನು ಬಳಸಿ ನೀರು ಸರಬರಾಜು ಮಾಡಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT