ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಮುಂಗಾರು ಆರಂಭದಲ್ಲೇ ಧಾರಾಕಾರ ಮಳೆ

ಮಾಣಿಕ ಭುರೆ
Published 10 ಜೂನ್ 2024, 6:27 IST
Last Updated 10 ಜೂನ್ 2024, 6:27 IST
ಅಕ್ಷರ ಗಾತ್ರ

ಬಸವಕಲ್ಯಾಣ: ಮೃಗಶಿರಾ ಮಳೆಯ ಆರಂಭದಲ್ಲೇ ತಾಲ್ಲೂಕಿನ ವಿವಿಧೆಡೆ ವಾಡಿಕೆಗಿಂತ ಅಧಿಕ ಮಳೆ ಸುರಿದಿದ್ದು ಹೊಲಗಳಲ್ಲಿ ನೀರು ಸಂಗ್ರಹಗೊಂಡಿದೆ. ಕೆಲವೆಡೆಯ ರಸ್ತೆ ಮತ್ತು ಸೇತುವೆಗಳಿಗೆ ಹಾನಿಯಾಗಿ ತೊಂದರೆ ಅನುಭವಿಸಬೇಕಾಗಿದೆ.

ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲೂ ಸಮರ್ಪಕ ಮಳೆ ಆಗಿದೆ. ಬಸವಕಲ್ಯಾಣ ಹೋಬಳಿಯಲ್ಲಿ 99.5 ಮೀ.ಮೀ, ಕೊಹಿನೂರ 88 ಮೀ.ಮೀ, ಮಂಠಾಳ 71 ಮೀ.ಮೀ, ಮುಡಬಿ 63 ಮೀ.ಮೀ, ರಾಜೇಶ್ವರ 52.7 ಮಳೆ ಸುರಿದಿದೆ. ಹೀಗಾಗಿ ಜಮೀನುಗಳಲ್ಲಿ ಸಾಕಷ್ಟು ಹಸಿ ಆಗಿದ್ದರಿಂದ ಬಹಳಷ್ಟು ಕಡೆ ಬಿತ್ತನೆ ಆರಂಭ ಆಗಿದೆ.

‘ಸಾಕಾಗುವಷ್ಟು ಮಳೆ ಸುರಿದಿದ್ದರಿಂದ ಎರಡು ದಿನದಿಂದ ಬಿತ್ತನೆ ಕೈಗೊಂಡಿದ್ದೇವೆ. ಭಾನುವಾರ ಮಧ್ಯಾಹ್ನ ಮತ್ತೆ ಮಳೆ ಬಂದಿದ್ದರಿಂದ ಬಿತ್ತನೆ ನಿಲ್ಲಿಸಬೇಕಾಯಿತು’ ಎಂದು ಕೊಹಿನೂರನ ರೈತ ಪ್ರಶಾಂತ ಲಕಮಾಜಿ ತಿಳಿಸಿದ್ದಾರೆ.

‘ತಾಲ್ಲೂಕಿನಲ್ಲಿ ಸರಾಸರಿ 18 ಮೀ.ಮೀ ಮಳೆ ಸುರಿಯಬೇಕಾಗಿದ್ದು ಈಗಾಗಲೇ ಮುಂಗಾರಿನ ಆರಂಭದಲ್ಲೇ 35 ಮೀ.ಮೀ ಮಳೆ ಆಗಿದೆ. ಇನ್ನೂ ಮೂರು ದಿನಗಳಲ್ಲಿ 100 ಮೀ.ಮೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯವರು ಅಂದಾಜು ಮಾಡಿದ್ದಾರೆ’ ಎಂದು ಕೃಷಿ ಸಹಾಯಕ ನಿರ್ದೇಶಕ ಮಾರ್ತಂಡ ಮಚಕೂರಿ ತಿಳಿಸಿದ್ದಾರೆ.

ಹಾನಿ: ಭಾರೀ ಮಳೆಯ ಕಾರಣ ಕೆಲ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದ ತಾಲ್ಲೂಕಿನ ಲಾಡವಂತಿ ಮತ್ತು ಬಟಗೇರಾವಾಡಿ ಗ್ರಾಮಗಳ ರಸ್ತೆ ಮತ್ತು ಸೇತುವೆಗಳ ಮಣ್ಣು ಕೊಚ್ಚಿಕೊಂಡು ಹೋಗಿದ್ದರಿಂದ ಬಸ್ ಹಾಗೂ ಇತರೆ ವಾಹನಗಳ ಸಂಚಾರ ಸಂಪೂರ್ಣವಾಗಿ ನಿಂತುಹೋಗಿದೆ.

‘ರಸ್ತೆ ದುರುಸ್ತಿ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯ ಎಇಇ ಅವರಿಗೆ ವಿನಂತಿಸಿದ್ದರೂ ಕೆಲಸ ಆಗಿಲ್ಲ. ಜಮೀನುಗಳಿಗೆ ಹೋಗುವವರಿಗೆ ತೊಂದರೆ ಆಗಿದೆ. ಬಸ್ ಸಂಚಾರ ನಿಂತಿದ್ದರಿಂದ ಶಾಲಾ ಮಕ್ಕಳಿಗೆ ನಡೆದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ’ ಎಂದು ಲಾಡವಂತಿಯ ವಿಲಾಸ ತರಮೂಡೆ ಹೇಳಿದ್ದಾರೆ.

‘ಕೆಲ ದಿನಗಳ ಹಿಂದೆ ಸೇತುವೆಗೆ ಹಾನಿ ಆಗಿತ್ತು. ಆಗ ಗ್ರಾಮ ಪಂಚಾಯಿತಿಯಿಂದ ಮಣ್ಣು ಹರಡಿ ವಾಹನ ಸಂಚಾರಕ್ಕೆ ಅನುಕೂಲತೆ ಒದಗಿಸಲಾಗಿತ್ತು. ಆದರೆ ಈಗ ಹೆಚ್ಚಿನ ಹಾನಿ ಆಗಿದ್ದರಿಂದ ಸಂಬಂಧಿತ ಇಲಾಖೆಯವರು ಇದರ ಸುಧಾರಣೆ ಕೈಗೊಳ್ಳಬೇಕಾಗುತ್ತದೆ’ ಎಂದು ಪಿಡಿಒ ರಮೇಶ ರಾಠೋಡ ಹೇಳಿದ್ದಾರೆ.

‘ಬಟಗೇರಾದಿಂದ ಬಟಗೇರಾವಾಡಿಗೆ ಹೋಗುವ ರಸ್ತೆಯಲ್ಲಿನ ರಸ್ತೆ ಮತ್ತು ಸೇತುವೆ ಹಾಳಾಗಿದ್ದರಿಂದ ಗ್ರಾಮಸ್ಥರಿಗೆ ತೊಂದರೆ ಆಗಿದೆ. ಸಂಬಂಧಿತರು ಶೀಘ್ರದಲ್ಲಿ ಸುಧಾರಣಾ ಕಾರ್ಯ ಕೈಗೊಳ್ಳಬೇಕು’ ಎಂದು ಪ್ರಮುಖರಾದ ದಶರಥ ಜಮಾದಾರ ಆಗ್ರಹಿಸಿದ್ದಾರೆ.

ವಿಲಾಸ ತರಮೂಡೆ
ವಿಲಾಸ ತರಮೂಡೆ
ಲಾಡವಂತಿ ಸೇತುವೆ ಹಾಳಾಗಿದ್ದರಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಹೊಲಗಳಿಗೆ ಹೋಗಲು ದಾರಿ ಇಲ್ಲದಂತಾಗಿದ್ದು ತಕ್ಷಣ ದುರುಸ್ತಿ ಕೈಗೊಳ್ಳಬೇಕು
ವಿಲಾಸ ತರಮೂಡೆ ಮುಖಂಡ ಲಾಡವಂತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT