ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಮೋತ್ಸವ’ ಭಕ್ತಿಯ ಗಂಗೆಯಲ್ಲಿ ಮಿಂದೇಳಿ: ರಾಜೇಶ್ವರ ಶಿವಾಚಾರ್ಯರು

Published 18 ಜನವರಿ 2024, 7:20 IST
Last Updated 18 ಜನವರಿ 2024, 7:20 IST
ಅಕ್ಷರ ಗಾತ್ರ

ಬೀದರ್‌: ‘ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಜ.21,22ರಂದು ನಗರದ ಸಾಯಿ ಆದರ್ಶ ಶಾಲೆ ಮೈದಾನದಲ್ಲಿ ‘ರಾಮೋತ್ಸವ’ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ರಾಮನ ಭಕ್ತಿಯ ಗಂಗೆಯಲ್ಲಿ ಮಿಂದೇಳಬೇಕು’ ಎಂದು ಜಿಲ್ಲಾ ಮಠಾಧೀಶರ ಒಕ್ಕೂಟದ ತಡೋಳಾ ರಾಜೇಶ್ವರ ಶಿವಾಚಾರ್ಯರು ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಮಠಾಧೀಶರ ಒಕ್ಕೂಟ ಹಾಗೂ ರಾಮಲೀಲಾ ಉತ್ಸವ ಸಮಿತಿ ಸಹಯೋಗದಲ್ಲಿ ಎರಡು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.

ಜ.21ರಂದು ಸಂಜೆ 5ಕ್ಕೆ ಸಂಗೀತ ದರ್ಬಾರ್‌ ನಡೆಯಲಿದೆ. ಬೆಂಗಳೂರಿನ ತಂಡ ಹಾಗೂ ಜಿಲ್ಲೆಯ ಸ್ಥಳೀಯ ಕಲಾವಿದರು ಕಾರ್ಯಕ್ರಮ ನಡೆಸಿಕೊಡುವರು. ರಾತ್ರಿಯಿಡೀ ಜಾಗರಣೆ ನಡೆಯಲಿದೆ. ಜ.22ರಂದು ಸಂಜೆ 5ಕ್ಕೆ ರಾಮನ ಮೂರ್ತಿಯ ಅಭಿಷೇಕ, ಸಾಮೂಹಿಕ ಅಭಿಷೇಕ, ಹನುಮಾನ್‌ ಚಾಲೀಸಾ ಪಠಣ ನಡೆಯಲಿದೆ. 498 ವರ್ಷಗಳ ನಂತರ ಭವ್ಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದ್ದು, ಸಾಂಕೇತಿಕವಾಗಿ 498 ಸ್ತಬ್ಧಚಿತ್ರಗಳು, 498 ಮಕ್ಕಳು ಶ್ರೀರಾಮನ ವೇಷ ಧರಿಸುವರು. ಸಾಕ್ಷಾತ್‌ ರಾಮನೇ ಬಂದ ಎಂಬಂತೆ 16 ನಿಮಿಷಗಳ ‘ರಾಮಕಥಾ’ ಕಾರ್ಯಕ್ರಮವೂ ಜರುಗಲಿದೆ ಎಂದು ವಿವಿರಿಸಿದರು.

ಜೋಪಡಿಗಳಿಂದ ಮಹಲ್‌ವರೆಗೆ ಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆಯುತ್ತಿವೆ. ಎಲ್ಲೆಡೆ ರಾಮನ ಭಕ್ತಿ ತುಂಬಿದೆ. ಜಾತಿ, ಮತ, ಪಂಥ ಎಂಬ ಭೇದವಿಲ್ಲದೆ ರಾಷ್ಟ್ರ ನಿರ್ಮಾಣ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿದ್ದಾರೆ. ಜಗತ್ತು ರಾಮನನ್ನು ಸ್ವೀಕರಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಎರಡೂ ದಿನ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು’ ಎಂದು ಅವರು ಮನವಿ ಮಾಡಿದರು.

1992ರ ಘಟನೆ ನಂತರ ರಾಮನ ಹೆಸರು ಹೇಳುವುದು ಬಹಳ ಕಷ್ಟವಾಗಿತ್ತು. ಭಯದ ವಾತಾವರಣ ನಿರ್ಮಾಣವಾಗಿತ್ತು. ಆಗ ಸೌಹಾರ್ದ ಸಭೆಗಳನ್ನು ನಡೆಸಿದ್ದೆವು. ಈಗ ಫಲ ಸಿಗುತ್ತಿದೆ ಎಂದರು.

ಮಠಾಧೀಶರ ಒಕ್ಕೂಟದ ಶಂಭುಲಿಂಗ ಶಿವಾಚಾರ್ಯ, ಶಾಂತಲಿಂಗ ಶಿವಾಚಾರ್ಯ, ಸಿದ್ದೇಶ್ವರ ಸ್ವಾಮೀಜಿ, ಹಾವಗಿ ಶಿವಾಚಾರ್ಯ, ರಾಮಲೀಲಾ ಉತ್ಸವ ಸಮಿತಿಯ ಪ್ರಮುಖರಾದ ಗುರುನಾಥ ಕೊಳ್ಳೂರ, ಬಾಬುವಾಲಿ, ನಾಗರಾಜ ಕರ್ಪೂರ, ಈಶ್ವರ ಸಿಂಗ್‌ ಠಾಕೂರ್‌, ಮಹೇಶ್ವರ ಸ್ವಾಮಿ, ಚಂದ್ರಶೇಖರ ಗಾದಾ, ಸುಭಾಷ ಕಲ್ಲೂರ, ರಾಮಕೃಷ್ಣನನ್‌ ಸಾಳೆ, ಗಿರಿರಾಜ ಹಾಜರಿದ್ದರು.

50 ಅಡಿ ಎತ್ತರದ ರಾಮನ ಕಟೌಟ್‌
ಕಾರ್ಯಕ್ರಮ ನಡೆಯಲಿರುವ ಸಾಯಿ ಆದರ್ಶ ಶಾಲೆಯ ಮೈದಾನದಲ್ಲಿ 50 ಅಡಿ ಎತ್ತರದ ರಾಮನ ಕಟೌಟ್‌ ನಿರ್ಮಿಸಲಾಗುವುದು. ಜಿಲ್ಲೆಯ ಕಲಾವಿದರೇ ಅದನ್ನು ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ರಾಮಮಂದಿರ ನಿರ್ಮಾಣದ ಕರ ಸೇವೆ ಮಾಡಿದವರನ್ನು ಕರೆಸಿ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು. ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಜನ ಕರ ಸೇವೆ ಮಾಡಿದವರು ಇದ್ದಾರೆ. ಇದರಲ್ಲಿ ಕೆಲವರು ನಿಧನರಾಗಿದ್ದಾರೆ ಎಂದು ತಡೋಳಾ ರಾಜೇಶ್ವರ ಶಿವಾಚಾರ್ಯರು ವಿವರಿಸಿದರು.
ಮನೆಗಳಲ್ಲಿ ದೀಪ ಬೆಳಗಿ
ಭಗವಾ ಧ್ವಜ ಹಾರಿಸಿ ‘ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ದೀಪಾವಳಿ ಹಬ್ಬದ ತರಹ ಆಚರಿಸಬೇಕು. ಪ್ರತಿಯೊಂದು ಮನೆಗಳಲ್ಲಿ ಜ. 21ರಿಂದ 23ರ ವರೆಗೆ ದೀಪ ಬೆಳಗಿಸಬೇಕು. ಮನೆಗಳ ಮೇಲೆ ಎಲ್ಲರೂ ಭಗವಾ ಧ್ವಜ ಹಾರಿಸಬೇಕು. ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಎಲ್ಲರನ್ನೂ ಮಾಧ್ಯಮಗಳ ಮೂಲಕ ಆಹ್ವಾನಿಸುತ್ತಿದ್ದೇವೆ. ವೈಯಕ್ತಿಕವಾಗಿ ಯಾರನ್ನೂ ಆಹ್ವಾನಿಸಲ್ಲ’ ಎಂದು ತಡೋಳಾ ರಾಜೇಶ್ವರ ಶಿವಾಚಾರ್ಯರು ಹೇಳಿದರು.
ಹಿಂದೆ 14 ವರ್ಷ ಈಗ 498 ವರ್ಷ ವನವಾಸ
‘ಹಿಂದೆ ರಾಮ 14 ವರ್ಷ ವನವಾಸ ಅನುಭವಿಸಿದ್ದ. ಈಗ 498 ವರ್ಷ ವನವಾಸ ಆಗಿದೆ. ನಮ್ಮ ದೇಶದಲ್ಲಿ ದೇವಸ್ಥಾನಕ್ಕಾಗಿ ದೊಡ್ಡ ಹೋರಾಟ ನಡೆಯಿತು. ಈಗ ರಾಮಮಂದಿರ ನಿರ್ಮಾಣವಾಗಿದೆ. ಇದಕ್ಕಿಂತ ದೊಡ್ಡ ಪುಣ್ಯ ಬೇರೇನೂ ಇಲ್ಲ’ ಎಂದು ರಾಮಲೀಲಾ ಉತ್ಸವ ಸಮಿತಿ ಮುಖಂಡ ಈಶ್ವರ ಸಿಂಗ್‌ ಠಾಕೂರ್‌ ಹೇಳಿದರು. 498 ವರ್ಷಗಳ ಸುದೀರ್ಘ ಹೋರಾಟ ಮುಗಿದಿದೆ. 1992ರಲ್ಲಿ ಕಳಂಕಿತ ಗುಂಬಜ್‌ ಕೆಡವಿ ಮೂರುವರೆ ಲಕ್ಷ ಕರ ಸೇವಕರು ಪ್ರಾಣ ಕಳೆದುಕೊಂಡಿದ್ದಾರೆ. ರಾಮಮಂದಿರಕ್ಕಾಗಿ ಹಿಂದೆ ದೇಶದಲ್ಲಿ ಲಾಲ್‌ಕೃಷ್ಣ ಅಡ್ವಾಣಿ ಮುರಳಿ ಮನೋಹರ್‌ ಜೋಶಿ ಅಶೋಕ್‌ ಸಿಂಘಾಲ್‌ ಸೇರಿದಂತೆ ಹಲವರು ರಥಯಾತ್ರೆ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಅದರ ಸಂಚಾಲಕರಾಗಿದ್ದರು ಎಂದು ನೆನಪಿಸಿದರು. ‘ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಅಡ್ವಾಣಿಯವರನ್ನು ಕಡೆಗಣಿಸಿದ್ದಾರಲ್ಲ’ ಎಂದು ಪತ್ರಕರ್ತರು ಪ್ರಶ್ನಿಸಿದರು. ಅದಕ್ಕವರು ‘ಈಗ ಆ ವಿಷಯ ಬೇಡ’ ಎಂದು ಜಾರಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT