ಗುರುವಾರ , ಅಕ್ಟೋಬರ್ 21, 2021
24 °C
ಜಿಲ್ಲಾಧಿಕಾರಿ ರಾಮಚಂದ್ರನ್‌ ಅಧಿಕಾರಿಗಳಿಗೆ ಸೂಚನೆ

ಬಾಲ ಕಾರ್ಮಿಕ ಮಕ್ಕಳಿಗೆ ಪುನರ್ವಸತಿ ಕಲ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಜಿಲ್ಲೆಯಲ್ಲಿ ಸಮೀಕ್ಷೆಯ ಸಂದರ್ಭದಲ್ಲಿ ಪತ್ತೆಯಾದ 67 ಬಾಲ ಕಾರ್ಮಿಕ ಮಕ್ಕಳಿಗೆ ತಕ್ಷಣ ಪುನರ್ವಸತಿ ಕಲ್ಪಿಸಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ವಿಡಿಯೊ ಸಭಾಂಗಣದಲ್ಲಿ ಮಂಗಳವಾರ ನಡೆದ ಬಾಲ ಕಾರ್ಮಿಕ ಯೋಜನೆಯ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸರಿಯಾದ ಮಾಹಿತಿ ನೀಡಬೇಕು. ಮಾಹಿತಿ ಸಂಗ್ರಹ ಹಾಗೂ ಹಂಚಿಕೆ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಜನಜಾಗೃತಿ, ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಬೇಕು. ಇದೇ ಅವಧಿಯಲ್ಲಿ ಕಾರ್ಯಾಚರಣೆಗಳನ್ನೂ ನಡೆಸಬೇಕು’ ಎಂದು ಹೇಳಿದರು.
.
‘ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ಸಮೀಕ್ಷೆ ನಡೆಯುತ್ತಿದೆ. ಡಾನ್‌ಬಾಸ್ಕೊ ಸಮಾಜ ಸೇವಾ ಸಂಸ್ಥೆ ಬೀದರ್ ತಾಲ್ಲೂಕಿನಲ್ಲಿ 12 ಬಾಲ ಕಾರ್ಮಿಕರನ್ನು, ಡಾ.ಬಿ.ಆರ್.ಅಂಬೇಡ್ಕರ್ ರೂರಲ್ ಆ್ಯಂಡ್ ಕಲ್ಚರಲ್ ಸೊಸೈಟಿ ಔರಾದ್ ತಾಲ್ಲೂಕಿನಲ್ಲಿ 18, ಆರ್ಬಿಟ್ ಸಂಸ್ಥೆ ಹುಮಾನಾಬಾದ್ ತಾಲ್ಲೂಕಿನಲ್ಲಿ 21, ಬಸವಕಲ್ಯಾಣದಲ್ಲಿ 8 ಹಾಗೂ ಸಹಯೋಗ ಸಂಸ್ಥೆ ಭಾಲ್ಕಿ ತಾಲ್ಲೂಕಿನಲ್ಲಿ 8 ಬಾಲಕಾರ್ಮಿಕರನ್ನು ಪತ್ತೆ ಮಾಡಿದೆ’ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀಹರಿ ಸಭೆಗೆ ತಿಳಿಸಿದರು.

‘ಅಧಿಕಾರಿಗಳು ಮಕ್ಕಳ ಪಾಲಕರ ಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಮಾಡಬೇಕು’ ಎಂದು ಹೇಳಿದರು.

‘ಮಾನಸಿಕ ಅಸ್ವಸ್ಥರು, ನಿರ್ಗತಿಕರು, ಚಿಂದಿ ಆಯುವ ಮಕ್ಕಳು ಕಂಡು ಬಂದರೆ ಅವರ ಕ್ಷೇಮ ವಿಚಾರಿಸಿ ಅವರ ಸಮಸ್ಯೆ ಬಗೆ ಹರಿಸಬಲು ಪ್ರಯತ್ನಿಸಬೇಕು’ ಎಂದರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್ ಮಾತನಾಡಿ, ‘ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯಿಂದ ಬೀದಿನಾಟಕ, ಜಾಥಾ, ಗೋಡೆ ಬರಹ, ಆಟೊ ಪ್ರಚಾರ, ತರಬೇತಿಯಂತಹ ಹಲವಾರು ಕಾರ್ಯಕ್ರಮಗಳನ್ನು ನಿರಂತರ ನಡೆಸಿ ಜನಜಾಗೃತಿ ಮೂಡಿಸಬೇಕು’ ಎಂದು ಸಲಹೆ ಮಾಡಿದರು.

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಬಾಲ ಕಾರ್ಮಿಕ ಮಕ್ಕಳ ಸಮೀಕ್ಷೆ, ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಳಕೆ, ಚೈಲ್ಡ್ ಲೈನ್ ಜತೆಗೆ ಸಹಭಾಗಿತ್ವ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಿತು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್, ಬೀದರ್‌ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಂಭುಲಿಂಗ ಹಿರೇಮಠ, ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪೂರೆ, ಜಿಲ್ಲಾ ಅಲ್ಪ ಸಂಖ್ಯಾತರ ಅಧಿಕಾರಿ ಬಳಿರಾಮ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಮಕ್ಕಳ ಸಹಾಯವಾಣಿ ನಡೆಸುವ ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು