ಮಂಗಳವಾರ, ಅಕ್ಟೋಬರ್ 20, 2020
22 °C
ಎನ್‌ಇಕೆಆರ್‌ಟಿಸಿ ನೌಕರರ ಕ್ಷೇಮಾಭಿವೃದ್ಧಿ ಸಂಘ

ಲಾಕ್‌ಡೌನ್‌ ಅವಧಿಯ ವೇತನ ಬಿಡುಗಡೆ ಮಾಡಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಲಾಕ್‌ಡೌನ್‌ ಅವಧಿಯ ವೇತನ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಬೀದರ್‌ ವಿಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.

ಬೀದರ್‌ಗೆ ಭೇಟಿ ನೀಡಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮಾ ರಾವ್‌ ಅವರಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಹುಲ್‌ ಕಂಟೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಟೈಗರ್ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿಪತ್ರ ಸಲ್ಲಿಸಿದರು.

ಲಾಕ್‌ಡೌನ್ ಅವಧಿಯಲ್ಲಿ ಸೆಪ್ಟೆಂಬರ್ 20ರ ವರೆಗೆ ಸರ್ಕಾರ ವೇತನ ಬಿಡುಗಡೆ ಮಾಡಿದರೂ ಅನೇಕ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ. ವರ್ಗಾವಣೆಯಾಗಿ ಬಂದಿರುವ ಸಿಬ್ಬಂದಿಯ ಭವಿಷ್ಯ ನಿಧಿ ಹಣ ವರ್ಗಾವಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಬೀದರ್ ವಿಭಾಗದಲ್ಲಿ ಕಾರ್ಮಿಕರ ಕಲ್ಯಾಣಾಧಿಕಾರಿ ಹುದ್ದೆಯಲ್ಲಿ ಪ್ರಭಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಪೂರ್ಣಾವಧಿಯ ಅಧಿಕಾರಿಯನ್ನು ನಿಯೋಜಿಸಬೇಕು. ಮೃತ ನೌಕರರ ಅವಲಂಬಿತರನ್ನು ಅನುಕಂಪದ ಆಧಾರದ ಮೇಲೆ ‘ಡಿ’ ದರ್ಜೆ ನೌಕರರನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಾರಿಗೆ ಸಂಸ್ಥೆಯ ಸಿಬ್ಬಂದಿ ವಸತಿಗೃಹಗಳನ್ನು ನಿರ್ಮಿಸಿಕೊಡಬೇಕು. ಸಿಬ್ಬಂದಿಯ ವೈದ್ಯಕೀಯ ಬಿಲ್‌ಗಳ ಮರುಪಾವತಿ ಮಾಡಬೇಕು. ಬೀದರ್‌ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಲಾಕ್‌ಡೌನ್‌ ಅವಧಿಯನ್ನು ಕಾರ್ಮಿಕರ ಖಾತೆಯಲ್ಲಿನ ರಜೆಗಳನ್ನು ಸರಿದೂಗಿಸಿ ಕಡಿತಗೊಳಿಸಲಾಗಿದೆ. ಅದನ್ನು ವಿಶೇಷ ರಜೆಯನ್ನಾಗಿ ಪರಿಗಣಿಸಬೇಕು. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ಬೀದರ್ ಘಟಕ-1ರಲ್ಲಿ ನಡೆದ ಹಗರಣ ಮತ್ತು ಭಾಲ್ಕಿ ಘಟಕದಲ್ಲಿ ನಡೆದ ಇಂಧನ ಕಾಣೆ ಪ್ರಕರಣದ ವಿಚಾರಣೆಯನ್ನು ಬೇಗ ಪೂರ್ಣಗೊಳಿಸಬೇಕು. ಅಂತರ ನಿಗಮಗಳ ವರ್ಗಾವಣೆಗೆ ಅನುಮತಿ ಕೊಡಬೇಕು. ವಾಹನಗಳ ಬಿಡಿಭಾಗಗಳ ಗುಣಮಟ್ಟದ ಸಾಮಗ್ರಿ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ವಿಜಯಪ್ರಕಾಶ, ಉಪಾಧ್ಯಕ್ಷ ತುಕಾರಾಮ ಕೊಪ್ಪೆ, ಖಜಾಂಚಿ ಜೈಭೀಮ, ಜಿಲ್ಲೆಯ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಪರಮೇಶ್ವರ ವಾಘಮಾರೆ, ಸತೀಶ ಅಪ್ಪೆ, ಗೌತಮ ಉರ್ಕೆ, ಬಸವರಾಜ ದೊಡ್ಡಿ ಹಾಗೂ ಅನಿಲ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು