ಬುಧವಾರ, ಜೂನ್ 16, 2021
28 °C
ಖಾಸಗಿ ಆಸ್ಪತ್ರೆ ಮುಖ್ಯಸ್ಥರ ವಿರುದ್ಧವೂ ಪ್ರಕರಣ ದಾಖಲು

ಕಾಳಸಂತೆಯಲ್ಲಿ ರೆಮ್‍ಡಿಸಿವಿರ್ ಮಾರಾಟ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ನಗರದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸುವ ರೆಮ್‍ಡಿಸಿವಿರ್ ಚುಚ್ಚುಮದ್ದುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಗುಂಪಾ ರಸ್ತೆಯಲ್ಲಿ ಇರುವ ವಿಜಯಾ ಆಸ್ಪತ್ರೆಯ ಮೆಡಿಕಲ್ ಉಸ್ತುವಾರಿ ಕುಂಬಾರವಾಡದ ಅಭಿಷೇಕ ಯಾದಯ್ಯ ಮಡಿವಾಳ ಮತ್ತು ಸುರಕ್ಷಾ ಆಸ್ಪತ್ರೆಯ ಅಕೌಂಟೆಂಟ್ ಆಗಿರುವ ಹಳ್ಳದಕೇರಿಯ ಆಸಿಫ್ ಅಹಮ್ಮದ್ ಅಜರ್ ಅಹಮ್ಮದ್ ಬಂಧಿತರು. ಇಬ್ಬರೂ 21 ವರ್ಷದವರಾಗಿದ್ದಾರೆ.

ಗುರುವಾರ ನಗರದ ಸರ್ಕಾರಿ ಆಸ್ಪತ್ರೆ ಬಳಿ ಕಾಳಸಂತೆಯಲ್ಲಿ ನಿಗದಿತ ದರಕ್ಕಿಂತ ದುಪ್ಪಟ್ಟು ದರಕ್ಕೆ ರೆಮ್‍ಡಿಸಿವಿರ್ ಇಂಜೆಕ್ಷನ್ ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡ ತಂಡವು, ದಾಳಿ ನಡೆಸಿ, ಎರಡು ರೆಮ್‍ಡಿಸಿವಿರ್ ಚುಚ್ಚುಮದ್ದುಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದೆ.

ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ‘ವಿಜಯಾ ಆಸ್ಪತ್ರೆಯಿಂದ ರೆಮ್‍ಡಿಸಿವಿರ್ ಇಂಜೆಕ್ಷನ್ ತಂದು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಆಸ್ಪತ್ರೆಯ ಮಾಲೀಕರಾದ ಡಾ.ವಿಜಯಾ ಹತ್ತಿ ಅವರೇ ಆಸ್ಪತ್ರೆಗೆ ನಿಗದಿಪಡಿಸಿದ ರೆಮ್‍ಡಿಸಿವಿರ್ ಇಂಜೆಕ್ಷನ್‍ಗಳನ್ನು ಕಾಳಸಂತೆಯಲ್ಲಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿಕೊಂಡು ಬಂದು ಲಾಭದ ಹಣ ನೀಡಲು ಸೂಚಿಸಿದ್ದಾರೆ’ ಎಂದು ಹೇಳಿದ್ದಾರೆ.

‌ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧವೂ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸಾವುಗಳೂ ಸಂಭವಿಸುತ್ತಿವೆ. ಸೋಂಕಿತರ ಜೀವ ಉಳಿಸಲು ನೆರವಾಗುವ ರೆಮ್‍ಡಿಸಿವಿರ್ ನಿಗದಿಗಿಂತ ಅಧಿಕ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು.

ಈ ಪ್ರಯುಕ್ತ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸಲು ಸಿಪಿಐ ಡಿ.ಜಿ. ರಾಜಣ್ಣ ಅವರ ನೇತೃತ್ವದಲ್ಲಿ ಪಿಎಸ್‍ಐಗಳಾದ ಸಂತೋಷ ಎಲ್.ಟಿ, ವೀರಣ್ಣ ಮಗಿ, ಕಾನ್‍ಸ್ಟೆಬಲ್‍ಗಳಾದ ಮೋಹನ್, ಪ್ರಕಾಶ, ವೀರಣ್ಣ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.

ಕಾಳಸಂತೆಯಲ್ಲಿ ರೆಮ್‍ಡಿಸಿವಿರ್ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದ ತಂಡದ ಕಾರ್ಯವನ್ನು ಶ್ಲಾಘಿಸಿರುವ ಡಿ.ಎಲ್. ನಾಗೇಶ, ಸೂಕ್ತ ಬಹುಮಾನ ಕೊಡಲಾಗುವುದು ಎಂದು ಪ್ರಕಟಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.