ಗುರುವಾರ , ಸೆಪ್ಟೆಂಬರ್ 23, 2021
26 °C
ಬೀದರ್:ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ ಸೂಚನೆ

ಶಿಥಿಲ ಶಾಲಾ ಕೋಣೆ ದುರಸ್ತಿಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ಬೀದರ್: ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾದ ಶಿಥಿಲ ಶಾಲಾ ಕೋಣೆಗಳ ದುರಸ್ತಿಗೆ ಒತ್ತು ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಆಗಾಗ ಮಳೆ ಸುರಿಯುತ್ತಿರುವ ಕಾರಣ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ಕೋಣೆಗಳು ಭದ್ರವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 91 ಶಾಲಾ ಕಟ್ಟಡಗಳು ನಿರ್ಮಾಣ ಹಂತದಲ್ಲಿ ಇವೆ. 54 ಶಾಲಾ ಕೋಣೆಗಳು ಶಿಥಿಲಗೊಂಡಿವೆ ಎಂದು ಶಿಕ್ಷಣಾಧಿಕಾರಿ ತುಳಸಿರಾಮ ದೊಡ್ಡೆ ಮಾಹಿತಿ ನೀಡಿದರು.

₹ 1.24 ಕೋಟಿ ವೆಚ್ಚದ 36 ಕಾಮಗಾರಿಗಳನ್ನು ತಿಂಗಳೊಳಗೆ ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಮೆಟ್ರಿಕ್ ಪೂರ್ವ ವಸತಿ ನಿಲಯಗಳು ಈವರೆಗೆ ಆರಂಭವಾಗಿಲ್ಲ. ಜಿಲ್ಲೆಯ 37 ಮೆಟ್ರಿಕ್ ನಂತರದ ವಸತಿ ನಿಲಯಗಳ ಪೈಕಿ 27 ಮಾತ್ರ ತೆರೆದಿವೆ. 1,004 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಬಿಸಿಎಂ ಅಧಿಕಾರಿ ತಿಳಿಸಿದರು.

ಪಾಲಕರ ಮನವೊಲಿಸಿ ವಿದ್ಯಾರ್ಥಿಗಳು ಹಾಸ್ಟೆಲ್‍ಗೆ ಬರುವಂತೆ ನೋಡಿಕೊಳ್ಳಬೇಕು ಎಂದು ರಾಮಚಂದ್ರನ್ ಆರ್. ಸೂಚಿಸಿದರು.

ಸಭೆಯ ಬುಕ್‍ಲೆಟ್‌ನ್ನು ಸಿದ್ಧ ಮಾದರಿಯಲ್ಲಿ ಅಚ್ಚುಕಟ್ಟಾಗಿ ತಯಾರಿಸಲು ಅಧಿಕಾರಿಗಳು ಸಹಕರಿಸಬೇಕು. ಆಯಾ ಇಲಾಖೆಗಳ ಅಧಿಕಾರಿಗಳು ಸಭೆಗೆ ಮುನ್ನವೇ ಕಡ್ಡಾಯವಾಗಿ ಸಹಿ ಮಾಡಿದ ಕಾಪಿಯನ್ನು ತಲುಪಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯ ವಾಡಿಕೆ ಮಳೆ 380 ಮಿ.ಮೀ ಆಗಿದೆ. ಈ ಬಾರಿ 445 ಮಿ.ಮೀ ಅಂದರೆ ಶೇ 17 ರಷ್ಟು ಅಧಿಕ ಮಳೆಯಾಗಿದೆ. ಬೆಳೆಗಳು ಉತ್ತಮವಾಗಿವೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್ ತಿಳಿಸಿದರು.

ಸೋಯಾಬೀನ್ 2,02,000 ಹೆಕ್ಟೇರ್, ತೊಗರಿ 90,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈವರೆಗೆ 24,000 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಲಾಗಿದೆ. 16,000 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಹೇಳಿದರು.

2020-21ನೇ ಸಾಲಿನಲ್ಲಿ ಒಟ್ಟು 56 ರೈತರ ಆತ್ಮಹತ್ಯೆ ಪ್ರಕರಣಗಳ ಪೈಕಿ 37 ರೈತ ಕುಟುಂಬಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

21 ಬಾಲ್ಯ ವಿವಾಹ ತಡೆ: ಜಿಲ್ಲೆಯಲ್ಲಿ 21 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಇಂತಹ ಕೃತ್ಯಕ್ಕೆ ಯಾರಾದರೂ ಕುಮ್ಮಕ್ಕು ನೀಡಿದರೆ ಗಂಭೀರವಾಗಿ ಪರಿಗಣಿಸಿ, ತಮಗೆ ಮಾಹಿತಿ ನೀಡಬೇಕು ರಾಮಚಂದ್ರನ್ ಸೂಚನೆ ನೀಡಿದರು.

ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಕ್ಷರ ದಾಸೋಹ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಡಾ.ಭುವನೇಶ ಪಾಟೀಲ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೂರ್ಯಕಾಂತ ಎಸ್, ಮುಖ್ಯ ಯೋಜನಾಧಿಕಾರಿ ಎಸ್.ಎಸ್. ಮಠಪತಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.