ಶನಿವಾರ, ಸೆಪ್ಟೆಂಬರ್ 18, 2021
26 °C
ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಜಾನುವಾರು

ಖಟಕಚಿಂಚೋಳಿ: ಪಶುವೈದ್ಯರ ನೇಮಕಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಇಲ್ಲಿಯ ಪಶು ವೈದ್ಯಕೀಯ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರು ಇಲ್ಲದಿರುವುದರಿಂದ ರಾಸುಗಳು ಕಾಲುಬಾಯಿ ರೋಗ ಸೇರಿದಂತೆ ವಿವಿಧ ರೋಗಗದಿಂದ ಬಳಲುತ್ತಿದ್ದರೂ ಚಿಕಿತ್ಸೆ ಕೊಡಿಸಲಾಗದೇ ರೈತರು ಪರದಾಡುವಂತಾಗಿದೆ.

ಖಟಕಚಿಂಚೋಳಿ ಗ್ರಾಮವು ಪಂಚಾಯಿತಿ ಕೇಂದ್ರ ಸ್ಥಾನವಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 15 ಹಳ್ಳಿಗಳನ್ನೊಳಗೊಂಡು ಇಲ್ಲಿ ಪಶು ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆದರೆ ಇಲ್ಲಿ ಕಾಯಂ ಪಶು ವೈದ್ಯರನ್ನು ನೇಮಿಸದಿರುವುದರಿಂದ ಇಲ್ಲಿನ ರೈತರಿಗೆ ಸಮಸ್ಯೆಯಾಗುತ್ತಿದೆ.

‘ಇಲ್ಲಿಯ ಪಶು ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆ ಖಾಲಿಯಿದೆ. 15 ಕಿ.ಮೀ. ದೂರದಲ್ಲಿರುವ ದಾಡಗಿ ಗ್ರಾಮದ ಪಶು ಆಸ್ಪತ್ರೆ ವೈದ್ಯರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ ಅವರು ವಾರದಲ್ಲಿ ಮೂರು ದಿನ ಅಲ್ಲಿ ಮೂರು ದಿನ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸ್ವಲ್ಪ ತೊಂದರೆ ಆಗುತ್ತಿದೆ’ ಎಂದು ಪಶು ಆಸ್ಪತ್ರೆ ಗುಮಾಸ್ತ ಧನರಾಜ ತಿಳಿಸುತ್ತಾರೆ.

‘ಜಾನುವಾರುಗಳಿಗೆ ಕಾಯಿಲೆ ಬಂದರೆ ಅವರು ಸರಿಯಾದ ಸಮಯಕ್ಕೆ ಬಂದು ಚಿಕಿತ್ಸೆ ಕೊಡುವುದಿಲ್ಲ. ಹೀಗಾಗಿ ಕೆಲ ತಿಂಗಳಿಂದ ಜಾನುವಾರುಗಳು ಮೃತಪಟ್ಟಿವೆ. ಇದಕ್ಕೆ ಹೊಣೆಗಾರರು ಯಾರು?’ ಎಂದು ರೈತ ಅರವಿಂದ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಈ ಗ್ರಾಮದಲ್ಲೇ ಸಾವಿರಕ್ಕೂ ಹೆಚ್ಚು ಹೈನುಗಾರಿಕೆ ಹಸುಗಳಿವೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಐದು ಸಾವಿರ ಜಾನುವಾರು ಗಳಿವೆ. ಇಲ್ಲಿಗೆ ಕಾಯಂ ಆಗಿ ವೈದ್ಯರನ್ನು ಇಲಾಖೆಯು ನಿಯೋಜಿಸಬೇಕು’ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

‘ಕೋವಿಡ್ ಹರಡುವಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಹೈನುಗಾರಿಕೆ ಒಂದೇ ಆದಾಯದ ಮೂಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇರುವ ರಾಸುಗಳಿಗೆ ರೋಗ ತಗುಲಿ ಅವು ಸಾವನಪ್ಪಿದರೆ ರೈತರು ಸಂಪೂರ್ಣವಾಗಿ ಬೀದಿಗೆ ಬರುತ್ತಾರೆ. ಆದ್ದರಿಂದ ಪಶುಪಾಲನಾ ಇಲಾಖೆಯು ಶೀಘ್ರ ಎಚ್ಚೆತ್ತುಕೊಂಡು ವೈದ್ಯರನ್ನು ನೇಮಿಸಬೇಕು’ ಎಂದು ಗ್ರಾಮಸ್ಥರು ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌ ಅವರ‌ನ್ನು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.