ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್ನಾಎಖ್ಖೇಳಿಯಲ್ಲಿ ವಾಹನ ಸವಾರರಿಗೆ ದೂಳಿನ ಮಜ್ಜನ: ಬೇಸತ್ತ ಜನ

ಮಂದಗತಿ ಕಾಮಗಾರಿ: ಜನರಿಗೆ ಕಿರಿಕಿರಿ
Last Updated 9 ಡಿಸೆಂಬರ್ 2022, 22:00 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿ ಎಂಟು ತಿಂಗಳಿಂದ ರಸ್ತೆ ವಿಸ್ತರಣೆ, ಚರಂಡಿ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದ ಕಾರಣ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ಮುಖ್ಯ ರಸ್ತೆಯ ಬಾಲಮ್ಮ ಮಂದಿರದಿಂದ ಪ್ರವಾಸಿ ಮಂದಿರದವರೆಗೆ ₹5 ಕೋಟಿ ಮೊತ್ತದ ಅನುದಾನದಲ್ಲಿ ರಸ್ತೆ ವಿಸ್ತರಣೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ರಸ್ತೆಯ ಎರಡೂ ಬದಿ ಎಲ್ಲೆಂದರಲ್ಲಿ ಮಣ್ಣಿನ ರಾಶಿಗಳನ್ನು ಹಾಕಲಾಗಿದೆ. ಆ ರಾಶಿಗಳ ಮುಂದೆ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿರುವುದರಿಂದ ಬಸ್‌, ಆಟೊ, ಬೈಕ್‌, ಕಾರು ಚಾಲಕರು ಹಾಗೂ ಪಾದಚಾರಿಗಳಿಗೆ ಸಂಚರಿಸಲು ಕಷ್ಟವಾಗುತ್ತಿದೆ. ಎಲ್ಲೆಂದರಲ್ಲಿ ದೂಳು ಆವರಿಸುತ್ತಿದೆ. ಅಂಗಡಿ ಮಾಲೀಕರು ಅಧಿಕಾರಿಗಳ ವಿರುದ್ಧ ಶಾಪ ಹಾಕುತ್ತಿದ್ದಾರೆ.

ಬಸ್‌ ನಿಲ್ದಾಣದ ಒಳಗೆ-ಹೊರಗೆ ಹೋಗಲು ಬಸ್‌ಗಳಿಗೂ ಸ್ಥಳವಿಲ್ಲದಂತಾಗಿದೆ. ನಿಲ್ದಾಣದ ಒಳಗಡೆ ಪ್ರಯಾಣಿಕರಿಗೂ ಇಕ್ಕಟ್ಟಿನ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಕೆಲ ಸ್ಥಳಗಳಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ನಾಗರಿಕರು ಸಾಂಕ್ರಾಮಿಕ ರೋಗ ಭೀತಿಯಲ್ಲಿದ್ದಾರೆ.

‘ಪಂಚಾಯಿತಿ ಇದ್ದೂ ಇಲ್ಲದಂತಾಗಿದೆ. ಹೇಳಿದರೂ ಕೇಳುವುದಿಲ್ಲ. ವ್ಯವಸ್ಥೆ ಹಾಳಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಫಾರೂಕ್‌ ಜಮಾದಾರ ಆರೋಪಿಸಿದರು.

‘ಪರವಾನಿಗೆ ಇಲ್ಲದೆ, ಬೀದಿಬದಿ ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ನಾಗರಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪೊಲೀಸ್‌ ಠಾಣೆಗೆ ಅರ್ಜಿ ಸಲ್ಲಿಸಲಾಗಿದೆ. ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಗ್ಯ ಜ್ಯೋತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT