ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ | ರಸ್ತೆ ಅತಿಕ್ರಮಣ ತೆರವು: ಸಂಚಾರ ಸುಗಮ

Published 9 ಮಾರ್ಚ್ 2024, 14:02 IST
Last Updated 9 ಮಾರ್ಚ್ 2024, 14:02 IST
ಅಕ್ಷರ ಗಾತ್ರ

ಚಿಟಗುಪ್ಪ: ‘ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಿಂದ ರಸ್ತೆ ಅತಿಕ್ರಮಣ ತೆರವುಗೊಳಿಸಲಾಯಿತು. ಪಂಚಾಯಿತಿ ಸದಸ್ಯರ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡು ಪಿಡಿಒ ಭಾಗ್ಯಜ್ಯೋತಿ ನೇತೃತ್ವದಲ್ಲಿ ಜೆಸಿಬಿ ಯಂತ್ರದ ಸಹಾಯದಿಂದ ಅಂಗಡಿಗಳ ಮುಂಗಟ್ಟುಗಳ ತೆರವು ಕಾರ್ಯಾಚರಣೆ ನಡೆಯಿತು.

ಗ್ರಾಮದ ನಿಡವಂಚಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಂಬೇಡ್ಕರ್‌ ವೃತ್ತದಿಂದ ಹಾದುಹೋಗುವ ರಸ್ತೆಯ ಎರಡು ಬದಿಗಳಲ್ಲಿ ವಾಣಿಜ್ಯ ಮಳಿಗೆಗಳ ಮಾಲೀಕರು ಅತಿಕ್ರಮಣಗೊಳಿಸಿಕೊಂಡು, ಶೆಡ್‌ ನಿರ್ಮಿಸಿದ್ದರು. ಇದರಿಂದ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ರಸ್ತೆ ಮೇಲೆ ಎಲ್ಲೆಂದರಲ್ಲಿ ತಳ್ಳುಗಾಡಿಗಳನ್ನು ನಿಲ್ಲಿಸಿ, ಮಾರಾಟ ಮಾಡುವ ವ್ಯಾಪಾರಿಗಳಿಗೂ ಸೂಕ್ತ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ನಿಗದಿ ಪಡಿಸಿದ ಸ್ಥಳಗಳಲ್ಲಿ ತಳ್ಳುಗಾಡಿ ನಿಲ್ಲಿಸಿಕೊಂಡು ವ್ಯಾಪಾರ ಮಾಡಬೇಕು ಎಂದು ಸೂಚಿಸಲಾಗಿದೆ.

ರಸ್ತೆ ಅತಿಕ್ರಮಣ ತೆರವಿನ ನಂತರ ವಿಶಾಲವಾದ ರಸ್ತೆ ಜನ ಸಂಚಾರಕ್ಕೆ ಲಭ್ಯವಾಗಿದೆ. ಇದರಿಂದ ನಾಗರಿಕರು, ವಾಹನ ಸವಾರರು, ದ್ವಿಚಕ್ರ ಸವಾರರು ಖುಷಿ ಪಡುತ್ತಿದ್ದಾರೆ. ಹಲವು ಅಂಗಡಿ ಮಾಲೀಕರು ಸ್ವಾಗತಿಸಿದ್ದಾರೆ. ಮೊದಲು ಅಂಗಡಿಯಲ್ಲಿ ಕುಳಿತುಕೊಳ್ಳುವುದಕ್ಕೂ ಆಗುತ್ತಿರಲಿಲ್ಲ. ಅಂಗಡಿ ಒಳಗಡೆ ಎಲ್ಲೆಂದರಲ್ಲಿ ರಸ್ತೆ ಮೇಲಿನ ಕೆಂಪು ಧೂಳು ತುಂಬಿಕೊಳ್ಳುತ್ತಿತ್ತು. ಈಗ ರಸ್ತೆ ಅಗಲವಾಗಿದ್ದರಿಂದ ವಾಹನ ಸಂಚರಿಸಿದರೂ ಧೂಳು ಬರುತ್ತಿಲ್ಲ. ಸ್ವಚ್ಛವಾದ ವಾತಾವರಣ ನಿರ್ಮಾಣವಾಗಿದೆ ಎಂದು ಬಟ್ಟೆ ವ್ಯಾಪಾರಿ ಪ್ರಭು ನುಡಿಯುತ್ತಾರೆ.

ತಳ್ಳುಗಾಡಿಗಳು ರಸ್ತೆಯ ಒಂದು ಬದಿಗೆ ನಿಲ್ಲಿಸಿ, ವ್ಯಾಪಾರ ಮಾಡುತ್ತಿರುವುದರಿಂದ ರಸ್ತೆ ಮೇಲೆ ವಾಹನ ಸಂಚರಿಸಲು, ಪಾದಚಾರಿಗಳು ನಡೆದುಕೊಂಡು ಹೋಗಲು ಸಮಸ್ಯೆ ಆಗುತ್ತಿಲ್ಲ ಎಂದು ಗ್ರಾಮದ ನಿವಾಸಿ ಶಿವಕುಮಾರ ತಿಳಿಸಿದ್ದಾರೆ.

ಸ್ಥಳೀಯರ ಸಹಕಾರ ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರ ಸಹಕಾರ ಹಾಗೂ ಪ್ರೋತ್ಸಾಹದಿಂದ ರಸ್ತೆ ಅತಿಕ್ರಮಣ ತೆರವು ಕಾರ್ಯ ಸರಳವಾಗಿ ನಡೆಯಿತು. ವ್ಯಾಪಾರಿಗಳೂ ಕಾರ್ಯಾಚರಣೆಗೆ ಸಹಕರಿಸಿದ್ದಾರೆ
ಭಾಗ್ಯಜ್ಯೋತಿ ಪಿಡಿಒ ಮನ್ನಾಎಖ್ಖೇಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT