ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ‘ಬುಡಾ’ದಲ್ಲಿ ನಿಯಮ ಉಲ್ಲಂಘನೆ; ಸರ್ಕಾರಕ್ಕೆ ಆರ್ಥಿಕ ನಷ್ಟ

ಮೂವರು ಅಧಿಕಾರಿಗಳನ್ನು ಒಳಗೊಂಡ ಜಂಟಿ ಪರಿವೀಕ್ಷಣಾ ತಂಡದ ವರದಿಯಲ್ಲಿ ಪ್ರಸ್ತಾಪ
ಶಶಿಕಾಂತ ಎಸ್‌. ಶೆಂಬೆಳ್ಳಿ
Published 20 ಫೆಬ್ರುವರಿ 2024, 5:26 IST
Last Updated 20 ಫೆಬ್ರುವರಿ 2024, 5:26 IST
ಅಕ್ಷರ ಗಾತ್ರ

ಬೀದರ್‌: ನಿವೇಶನಗಳ ಹಂಚಿಕೆಯಲ್ಲಿ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ನಿಯಮಗಳನ್ನು ಉಲ್ಲಂಘಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.

2020ರ ನವೆಂಬರ್‌ 27ರಿಂದ 2023ರ ಮೇ 23ರ ಅವಧಿಯಲ್ಲಿ ನಿವೇಶನಗಳ ಹಂಚಿಕೆಯಲ್ಲಿ ‘ಬುಡಾ’ ನಿಯಮಗಳನ್ನು ಅನುಸರಿಸಿಲ್ಲ. ಇದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರು ನಗರಾಭಿವೃದ್ಧಿ ಇಲಾಖೆಗೆ ದೂರು ಸಲ್ಲಿಸಿದ್ದರು.

ಅವರ ದೂರು ಆಧರಿಸಿ ಇಲಾಖೆಯು ಕಲಬುರಗಿ ವಿಭಾಗೀಯ ಕಚೇರಿಯ ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕ ಎ.ಎಸ್‌.ಕಾಂಬಳೆ, ಜಂಟಿ ನಿರ್ದೇಶಕಿ ಶಾಂತಲಾ ಎಂ.ಎಸ್‌. ಹಾಗೂ ಧಾರವಾಡ ವಲಯ ಕಚೇರಿಯ ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕ ವಿವೇಕ ಎನ್‌.ಕಾರೇಕರ್‌ ಅವರನ್ನು ಒಳಗೊಂಡ ಜಂಟಿ ಪರಿವೀಕ್ಷಣಾ ತಂಡ ರಚಿಸಿದ್ದರು. ಜಂಟಿ ಪರಿವೀಕ್ಷಣಾ ತಂಡದ ಮೂವರು ಅಧಿಕಾರಿಗಳ ತಂಡವು 2023ರ ಸೆಪ್ಟೆಂಬರ್‌ 13ರಿಂದ ಸೆಪ್ಟೆಂಬರ್‌ 15ರವರೆಗೆ ಬುಡಾದಲ್ಲಿ ದಾಖಲೆಗಳ ಪರಿಶೀಲನೆ ನಡೆಸಿ, ಲೇಔಟ್‌ಗಳಿಗೆ ಭೇಟಿ ನೀಡಿ ನಿವೇಶನಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿದೆ. ನಿಯಮಗಳನ್ನು ಪಾಲಿಸದೆ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದು, ಅದರ ಪ್ರಕಾರ ಅಂದಿನ ಬುಡಾ ಆಯುಕ್ತ (ಹಾಲಿ ಶಹಬಾದ್‌ ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌) ಅಭಯ ಕುಮಾರ್‌ ಅವರನ್ನು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತಿರುಮಲಾಚಾರ್‌ ಜೆ. ಅವರು ಸೇವೆಯಿಂದ ಅಮಾನತುಗೊಳಿಸಿ ಫೆ. 14ರಂದು ಆದೇಶ ಹೊರಡಿಸಿದ್ದಾರೆ.

ಅರವಿಂದಕುಮಾರ ಅರಳಿ
ಅರವಿಂದಕುಮಾರ ಅರಳಿ

ಆಯುಕ್ತ ಅಧ್ಯಕ್ಷರ ವಿರುದ್ಧ ಕ್ರಿಮಿನಲ್‌ ಕೇಸ್‌ಗೆ ಆಗ್ರಹ

‘ನಿಯಮ ಉಲ್ಲಂಘಿಸಿದ ಅಂದಿನ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಆಯುಕ್ತ ಅಭಯ ಕುಮಾರ್‌ ಅವರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಆಯುಕ್ತರು ಹಾಗೂ ಅಂದಿನ ಬಿಡಿಎ ಅಧ್ಯಕ್ಷ ಬಾಬುವಾಲಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ಇಬ್ಬರಿಂದಲೇ ಭರಿಸಬೇಕು’ ಎಂದು ದೂರುದಾರ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಆಗ್ರಹಿಸಿದ್ದಾರೆ.

ಬಾಬುವಾಲಿ
ಬಾಬುವಾಲಿ
‘ಉದ್ಯಾನದ ಜಾಗ ನೋಂದಣಿ ಮಾಡಿಸಿಕೊಡದ್ದಕ್ಕೆ ಸುಳ್ಳು ಆರೋಪ’
‘ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರು ನಾನು ಬುಡಾ ಅಧ್ಯಕ್ಷನಾಗಿದ್ದಾಗ ಉದ್ಯಾನದ ಜಾಗ ನೋಂದಣಿ ಮಾಡಿಸಿಕೊಡುವಂತೆ ಕೇಳಿದ್ದರು. ಆ ಕೆಲಸ ನಾನು ಮಾಡಿಕೊಡಲಿಲ್ಲ. ಈ ಕಾರಣಕ್ಕಾಗಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂಬು ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬುವಾಲಿ ಆರೋಪಿಸಿದ್ದಾರೆ. ಅರಳಿ ಅವರು ಎರಡು ಆಧಾರ್‌ ಕಾರ್ಡ್‌ಗಳನ್ನು ಹೊಂದಿದ್ದರು. ಅವರ ಎಂಎಲ್‌ಸಿ ಸದಸ್ಯತ್ವ ರದ್ದುಪಡಿಸಬೇಕು ಎಂದು ದೂರು ಕೊಟ್ಟಿದ್ದೆ. ಅದನ್ನು ಸಹಿಸಿಕೊಳ್ಳಲಾರದೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಬುಡಾದಲ್ಲಿ ನಡೆದ ಎರಡು ಸಭೆಗಳನ್ನು ಹೊರತುಪಡಿಸಿದರೆ ಎಲ್ಲ ಸಭೆಗಳಲ್ಲಿ ಅರಳಿ ಭಾಗವಹಿಸಿದ್ದರು. ಅವರ ಸಮ್ಮುಖದಲ್ಲೇ ಎಲ್ಲ ತೀರ್ಮಾನವಾಗಿದೆ. ಪ್ರತಿಯೊಂದಕ್ಕೂ ಬುಡಾ ಆಯುಕ್ತರು ಮನೆಗೆ ಬಂದು ವಿವರಿಸಬೇಕು ಎಂದು ಹೇಳುತ್ತಿದ್ದರು. ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಅರಳಿ ಕ್ರಿಮಿನಲ್‌ ಇದ್ದಾರೆ. ಅನೇಕ ಅಪರಾಧಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಅಧಿಕಾರ ದುರ್ಬಳಕೆ ಮಾಡಿಕೊಂಡು ನನಗೆ ಕಿರುಕುಳ ಕೊಡುತ್ತಿದ್ದಾರೆ. ವೈಯಕ್ತಿಕವಾಗಿ ದ್ವೇಷ ಸಾಧಿಸುತ್ತಿದ್ದಾರೆ. ಇವರ ಕುಟುಂಬದ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು ಅದನ್ನು ಬಯಲಿಗೆಳೆಯುತ್ತೇನೆ. ಅದಕ್ಕಾಗಿ ಕಾನೂನು ಹೋರಾಟ ನಡೆಸುವೆ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತನಿಖಾ ತಂಡದ ವರದಿಯಲ್ಲಿ ಏನಿದೆ? ಏನೇನು ಉಲ್ಲಂಘನೆ?:

  • ಬೀದರ್‌ ನಗರದ ಸಿದ್ರಾಮಯ್ಯ ಬಡಾವಣೆಯಲ್ಲಿನ ಒಟ್ಟು 33ಎ–12 ಗುಂಟೆ ವಿಸ್ತೀರ್ಣದ ಜಮೀನಿನ ಪರಿಷ್ಕೃತ ವಿನ್ಯಾಸಕ್ಕೆ ಸರ್ಕಾರದಿಂದ ಅನುಮೋದನೆ ಪಡೆದಿಲ್ಲ. ನೌಬಾದ್‌ ಸರ್ವೆ ನಂಬರ್‌ 8ರ ಅನುಮೋದಿತ ವಿನ್ಯಾಸದ ನಕ್ಷೆ ಇಲ್ಲ.

  • ಚಿದ್ರಿ ಗ್ರಾಮದ ಸರ್ವೆ ನಂಬರ್‌ 125ರ ಅಭಿವೃದ್ಧಿಯಾಗಿರುವ ವಸತಿ ಯೋಜನೆ ಪ್ರದೇಶವನ್ನು ಇಟಿಎಸ್‌ಸರ್ವೆ ಕೈಗೊಂಡು ಸದರಿ ಸರ್ವೆಯಲ್ಲಿ ಉದ್ಯಾನವನ/ ಬಯಲು ಜಾಗೆ ಹಾಗೂ ನಾಗರಿಕ ಸೌಲಭ್ಯ ಪ್ರದೇಶಗಳ ವಿಸ್ತೀರ್ಣವು ನಿಯಮಾನುಸಾರ ಇಲ್ಲ. ಜಾಗ ಕೂಡ ಕಡಿಮೆಯಾಗಿದೆ. ಈ ಬಗ್ಗೆ ಪರಿಶೀಲಿಸದೆ ಸರ್ಕಾರದಿಂದ ಅನುಮೋದನೆ ಪಡೆಯದೆ ವಸತಿ ಉದ್ದೇಶಕ್ಕೆ ಕಾಯ್ದಿರಿಸಿದ ವಿಸ್ತೀರ್ಣದಲ್ಲಿ ಹೆಚ್ಚುವರಿಯಾಗಿ ದೊರೆತ ಪ್ರದೇಶದಲ್ಲಿ ಮಧ್ಯಂತರ ನಿವೇಶನಗಳನ್ನು ಗುರುತಿಸುವುದು ನಿಯಮಬಾಹಿರ.

  • ಚಿದ್ರಿ ಗ್ರಾಮದ ಸರ್ವೆ ನಂಬರ್‌ 125ರ ಪರಿಷ್ಕೃತ ವಿನ್ಯಾಸ ಅನೆಕ್ಷರ್‌–4 ನಕ್ಷೆಯೊಂದಿಗೆ ಸ್ಥಳ ಪರಿಶೀಲಿಸಲಾಗಿ ನಕ್ಷೆಯಲ್ಲಿನ ರಸ್ತೆಗಳು ಹಾಗೂ ನಿವೇಶನಗಳ ಅಳತೆಗಳಿಗೂ ವ್ಯತ್ಯಾಸ ಇರುವುದು ಕಂಡು ಬಂದಿದೆ.

  • ಪ್ರಾಧಿಕಾರದಿಂದ ಇ–ಪ್ರೊಕ್ಯೂರ್‌ಮೆಂಟ್‌ ಮೂಲಕ ಹರಾಜು ಮಾಡಲು ಬೀದರ್‌ ನಗರದ ‘ಬೀದರ್‌ ಕ್ರಾಂತಿ’ ಹಾಗೂ ‘ಬೀದರ್‌ ಸಂದೇಶ’ ದಿನಪತ್ರಿಕೆಗಳಲ್ಲಿ 2022ರ ಮಾರ್ಚ್‌ 2627ರ ಪ್ರಕಟಣೆಯಲ್ಲಿ ಕ್ರಮ ಸಂಖ್ಯೆ: 3 4ರಲ್ಲಿ ದಿನಾಂಕಗಳನ್ನು ತಪ್ಪಾಗಿ ನಮೂದಿಸಲಾಗಿದೆ. ಮಾರ್ಚ್‌ 26ರ ‘ಬೀದರ್‌ ಕ್ರಾಂತಿ’ ದಿನಪತ್ರಿಕೆಯ ಪುಟ ಸಂಖ್ಯೆ 4ರಲ್ಲಿ ಪ್ರಾಧಿಕಾರದ ಹರಾಜು ಪ್ರಕಟಣೆ ಇರುವುದಿಲ್ಲ. ಆದರೆ ಕಚೇರಿ ಕಡತದಲ್ಲಿರುವ ಇದೇ ದಿನಾಂಕದ ಇದೇ ಪತ್ರಿಕೆಯ ಪುಟ ಸಂಖ್ಯೆ: 4ರಲ್ಲಿ ಪ್ರಕಟಣೆ ಹೊರಡಿಸಿರುವ ಬಗ್ಗೆ ಮುದ್ರಿತ ಪ್ರತಿ ಇರುತ್ತದೆ.

  • ಬಿಡಿ ನಿವೇಶನಗಳನ್ನು ಹರಾಜು ಮಾಡುವಾಗ ಸರ್ಕಾರದ ಸುತ್ತೋಲೆ (ಶೇ 75–ಶೇ 25) ವರ್ಗವಾರು ಮೀಸಲಾತಿ ಪರಿಗಣಿಸಿಲ್ಲ.

  • ಮೂಲೆ (ಕಾರ್ನರ್‌) ನಿವೇಶನ ದರಗಳನ್ನು ನಿಗದಿಪಡಿಸುವಾಗ ಆಯಾ ಪ್ರದೇಶದ ನಿವೇಶನಗಳ ದರಗಳ ಶೇ 10ರಷ್ಟು ಹೆಚ್ಚಿಗೆ ದರ ನಿಗದಿಪಡಿಸಿಲ್ಲ.

  • ನೋಂದಣಿ ಶುಲ್ಕ ಪಾವತಿಸಿರುವ ಬ್ಯಾಂಕ್‌ ಚಲನ್‌ಗಳಲ್ಲಿ ಬೇರೆ ಬೇರೆ ಹೆಸರುಗಳಿವೆ. ಆದರೆ ಸಹಿ ಒಂದೇ ತರಹ ಇದೆ. ಖರೀದಿ ಪತ್ರದಲ್ಲಿ ಬೇರೆ ಸಹಿಗಳು ಇವೆ. ಸದರಿ ಚಲನ್‌ಗಳನ್ನು ಒಂದೇ ದಿನ ಪಾವತಿಸಲಾಗಿದೆ. ಈ ಪೈಕಿ ಎರಡು ಚಲನ್‌ಗಳನ್ನು ತಿದ್ದುಪಡಿ ಮಾಡಿ ಬೇರೆ ಹೆಸರು ಬರೆದಿರುವುದನ್ನು ಗಮನಿಸಿ ಬ್ಯಾಂಕಿನಿಂದ ಚಲನ್‌ಗಳನ್ನು ತರಿಸಿ ಪರಿಶೀಲಿಸಿದಾಗ ತಿದ್ದುಪಡಿ ಇಲ್ಲದೇ ಬೇರೆಯವರ ಹೆಸರಿಗೆ ಇರುವುದು ಗಮನಕ್ಕೆ ಬಂದಿದೆ.

  • ಒಟ್ಟು 11 ನಿವೇಶನಗಳಿಗೆ ‘ಸಿಂಗಲ್‌ ಬಿಡ್‌’ ಆಗಿದ್ದು ಹರಾಜಿನಲ್ಲಿ ಸ್ಪರ್ಧೆ ಆಗಿರುವುದಿಲ್ಲ. ಆಯುಕ್ತರು ಈ ಬಗ್ಗೆ ಅಧ್ಯಕ್ಷರಿಗೆ ಟಿಪ್ಪಣಿ ಮಂಡಿಸಿರುವುದು ಇದೆ. ಆದರೆ ಈ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸದೆ ತೀರ್ಮಾನ ಕೈಗೊಳ್ಳಲಾಗಿದೆ.

  • ನೌಬಾದ್‌ಸರ್ವೆ ನಂಬರ್‌ 4ರಲ್ಲಿನ ನಿವೇಶನಗಳನ್ನು ಈಗಾಗಲೇ ಹಂಚಿಕೆ ಆಗಿರುವುದರಿಂದ ನಿಯಮಾನುಸಾರ ಹಂಚಿಕೆಯಾದವರ ಹಂಚಿಕೆಯನ್ನು ರದ್ದುಪಡಿಸದೆ ಪುನಃ ಹರಾಜಿಗೆ ಪರಿಗಣಿಸಲಾಗಿದೆ.

  • ಸಾಕಷ್ಟು ನ್ಯೂನತೆಗಳು ತನಿಖಾ ಸಂದರ್ಭದಲ್ಲಿ ಕಂಡು ಬಂದಿದೆ. ನಿಯಮಗಳನ್ನು ಅನುಸರಿಸಿಲ್ಲ. ಇದರಿಂದ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಷ್ಟ ಉಂಟಾಗಿದೆ.

ಎಂಜಿನಿಯರ್‌ ಅಮಾನತು

ಬೀದರ್‌: ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಬುಡಾ) ನಿಯಮಾನುಸಾರ ಕೆಲಸ ಮಾಡದೆ ಆರ್ಥಿಕ ನಷ್ಟ ಉಂಟು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬುಡಾದ ಹಿಂದಿನ ಆಯುಕ್ತ, ಶಹಾಬಾದ್‌ ನಗರಸಭೆಯ ಹಾಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅಭಯ್‌ ಕುಮಾರ್‌ ಅವರನ್ನು ಅಮಾನತುಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ದಾಂಡೇಲಿ ನಗರಸಭೆಯಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಪರಿಸರ) ಹುದ್ದೆಗೆ ಸ್ಥಳಾಂತರಿಸಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತಿರುಮಲಾಚಾರ್‌ ಜೆ. ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT