ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗನಳ್ಳಿ: ಸಾರ್ವಜನಿಕ ಜಾಗೃತಿಗೆ ಚಿತ್ರ ರಚನೆ

ಸ್ವಂತ ಖರ್ಚಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಪುತ್ರನಿಂದ ಸಾಮಾಜಿಕ ಕಾರ್ಯ
Published 24 ಆಗಸ್ಟ್ 2024, 5:55 IST
Last Updated 24 ಆಗಸ್ಟ್ 2024, 5:55 IST
ಅಕ್ಷರ ಗಾತ್ರ

ಸಂಗನಳ್ಳಿ(ಜನವಾಡ): ಚೋಟಾ ಬೀಮ್, ಫುಟ್‌ಬಾಲ್‌ ಆಟಗಾರ, ಸಿಂಹ, ಬಗೆಬಗೆಯ ಮರಗಳು... ಈ ಎಲ್ಲ ಚಿತ್ರಗಳು ಕಾಣುವುದು ಯಾವುದೋ ಶಾಲೆಯ ಆವರಣದಲ್ಲಾಗಲಿ, ಅಂಗನವಾಡಿ ಕಟ್ಟಡ ಗೋಡೆ ಮೇಲಾಗಲಿ ಅಲ್ಲ...

ಒಮ್ಮೆ ನಿಂತು ನೋಡಿ ಹೋಗುವಷ್ಟು ಚಂದದ ಚಿತ್ರಗಳು ಕಂಡುಬರುವುದು ಬೀದರ್‌ ತಾಲ್ಲೂಕಿನ ಜನವಾಡ ಸಮೀಪದ ಸಂಗನಳ್ಳಿಯಲ್ಲಿ.

ಜನವಾಡ ಗ್ರಾಮ ಪಂಚಾಯಿತಿಯ ಸಂಗನಳ್ಳಿ ಕ್ಷೇತ್ರದ ಸದಸ್ಯೆ ಲಕ್ಷ್ಮೀಬಾಯಿ ಸುಭಾಷ್ ಕವಾಲೆ ಅವರ ಪುತ್ರ  ಎಂ.ಎ. ಪದವೀಧರ  ಜಿತೇಂದ್ರ ಕವಾಲೆ ಅವರ ಸಾಮಾಜಿಕ ಕಾಳಜಿಯಿಂದಾಗಿ ಸಂಗನಳ್ಳಿ ಗ್ರಾಮದಲ್ಲಿ ಚಿತ್ರಗಳ ಚಿತ್ತಾರ ಮೂಡಿದೆ.

ಶಾಲಾ ಗೋಡೆ, ಕಿರು ನೀರು ಸರಬರಾಜು ಟ್ಯಾಂಕ್, ವಿದ್ಯುತ್ ಕಂಬಗಳ ಮೇಲೆ ಬಗೆ ಬಗೆಯ ಚಿತ್ರಗಳು ಅರಳಿವೆ.

ಶಾಲೆಗೆ ಹೊರಟ ಚಿಣ್ಣರು, ಯೋಗಾಭ್ಯಾಸದಲ್ಲಿ ಮಗ್ನನಾದ ಬಾಲಕ, ಉದ್ಯಾನದಲ್ಲಿ ಆಟದಲ್ಲಿ ಮೈಮರೆತ ಬಾಲಕಿ, ವಿಜ್ಞಾನ ಪ್ರಯೋಗ ನಿರತ ಬಾಲಕ, ಬ್ಯಾಟರ್, ಬ್ಯಾಸ್ಕೆಟ್‍ಬಾಲ್, ಬ್ಯಾಡ್ಮಿಂಟನ್, ಫುಟ್‍ಬಾಲ್ ಆಟಗಾರ, ತೆಂಗಿನ ಮರ, ಸೂರ್ಯ, ಸಿಂಹ, ಗೊರಿಲ್ಲಾ, ಹಕ್ಕಿ, ಮೀನಿನ ಚಿತ್ರಗಳು, ಛೋಟಾ ಭೀಮ್, ಡೊರೆಮಾನ್ ಕಾರ್ಟೂನ್‍ಗಳು ಎಲ್ಲರ ಚಿತ್ತ ತಮ್ಮತ್ತ ಸೆಳೆಯುತ್ತಿವೆ.

‘ನಮ್ಮೂರೇ ನಮಗೆ ಚೆಂದ’ ಬರಹ ಸಾರ್ವಜನಿಕರಲ್ಲಿ ಗ್ರಾಮದ ಬಗ್ಗೆ ಹೆಮ್ಮೆ ಹಾಗೂ ಅಭಿಮಾನ ಉಂಟು ಮಾಡುತ್ತಿದೆ. ನಾಡ ಧ್ವಜ ಹಾಗೂ ರಾಷ್ಟ್ರಧ್ವಜದ ಚಿತ್ರಗಳು ರಾಜ್ಯ ಹಾಗೂ ದೇಶದ ಅಭಿಮಾನ ಮೂಡಿಸುತ್ತಿವೆ.

‌‘ಬೀದರ್‌ ಚಿತ್ರ ಕಲಾವಿದ ನೋಹನ್, ಸಂಗನಳ್ಳಿಯ ಕವಿರಾಜ ಹಾಗೂ ದಿಗಂಬರ ಅವರ ಮೂಲಕ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಶಿಕ್ಷಣ, ಪರಿಸರ, ವಿಜ್ಞಾನ, ಯೋಗ, ಕ್ರೀಡೆ, ಸ್ವಚ್ಛತೆ ಮೊದಲಾದವುಗಳ ಅರಿವು ಮೂಡಿಸುವ ಚಿತ್ರಗಳನ್ನು ಬಿಡಿಸಲಾಗಿದೆ’ ಎಂದು ತಿಳಿಸುತ್ತಾರೆ ಜಿತೇಂದ್ರ ಕವಾಲೆ.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಣೆಯ ಹಿಂಬದಿ ಗೋಡೆ, ಏಳು ಕಿರು ನೀರು ಸರಬರಾಜು ಟ್ಯಾಂಕ್‍ಗಳು, 60 ವಿದ್ಯುತ್ ಕಂಬಗಳ ಮೇಲೆ ಚಿತ್ರ ಬಿಡಿಸಲಾಗಿದೆ. ವಿದ್ಯುತ್ ಕಂಬಗಳ ಪೈಕಿ ಅರ್ಧದಷ್ಟು ಕಂಬಗಳ ಮೇಲೆ ರಾಷ್ಟ್ರ ಧ್ವಜ ಹಾಗೂ ಉಳಿದ ಅರ್ಧದಷ್ಟು ಕಂಬಗಳ ಮೇಲೆ ನಾಡ ಧ್ವಜದ ಚಿತ್ರ ರಚಿಸಲಾಗಿದೆ ಎಂದು ಹೇಳುತ್ತಾರೆ.

ಚಿತ್ರಗಳ ರಚನೆಗೆ ₹1 ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ. ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ವಿಜ್ಞಾನಿಗಳು, ಕಲೆ, ಸಂಸ್ಕೃತಿ, ಕೃಷಿಗೆ ಸಂಬಂಧಿಸಿದ ಚಿತ್ರಗಳನ್ನು ರಚಿಸುವ ಯೋಜನೆ ಇದೆ ಎಂದು ಅವರು ವಿವರಿಸುತ್ತಾರೆ.

ವಿದ್ಯುತ್ ಕಂಬಗಳ ಮೇಲೆ ಬಿಡಿಸಿದ ರಾಷ್ಟ್ರ ಧ್ವಜ ಹಾಗೂ ನಾಡ ಬಾವುಟದ ಚಿತ್ರ
ವಿದ್ಯುತ್ ಕಂಬಗಳ ಮೇಲೆ ಬಿಡಿಸಿದ ರಾಷ್ಟ್ರ ಧ್ವಜ ಹಾಗೂ ನಾಡ ಬಾವುಟದ ಚಿತ್ರ

ಚಿತ್ರಗಳು ಸಾರ್ವಜನಿಕರಲ್ಲಿ ವಿವಿಧ ವಿಷಯಗಳ ಅರಿವು ಮೂಡಿಸುತ್ತಿವೆ. ಮಕ್ಕಳಿಗೆ ಪ್ರೇರಣೆ ನೀಡುತ್ತಿವೆ. ಗ್ರಾಮದ ಸೌಂದರ್ಯವನ್ನೂ ಹೆಚ್ಚಿಸಿವೆ. ಚಿತ್ರಗಳ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಸಾರ್ವಜನಿಕ ಜಾಗೃತಿಯ ನನ್ನ ಪ್ರಯತ್ನ ಫಲ ಕೊಟ್ಟಿದೆ ಎಂದು ಹೇಳುತ್ತಾರೆ.

ಜಿತೇಂದ್ರ ಕವಾಲೆ
ಜಿತೇಂದ್ರ ಕವಾಲೆ
ಜಿತೇಂದ್ರ ಅವರು ಕಲಾವಿದರ ಮೂಲಕ ಬಿಡಿಸಿರುವ ಚಿತ್ರಗಳು ಗ್ರಾಮದ ಜನರಿಗೆ ವಿವಿಧ ವಿಷಯಗಳ ಜ್ಞಾನ ನೀಡುವಲ್ಲಿ ನೆರವಾಗಿವೆ
ಪಂಢರಿ ವರ್ಮಾ ಸಂಗನಳ್ಳಿ ಗ್ರಾಮಸ್ಥ ಕಲೆ ಸಂಸ್ಕೃತಿ ಕೃಷಿ ಚಿತ್ರ ರಚನೆಗೆ ಯೋಜನೆ
ನಮ್ಮದು ಸ್ಥಿತಿವಂತ ಕುಟುಂಬವೇನೂ ಅಲ್ಲ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ತುಡಿತದಿಂದ ಗ್ರಾಮದಲ್ಲಿ ಚಿತ್ರಗಳನ್ನು ರಚಿಸಿರುವೆ
ಜಿತೇಂದ್ರ ಕವಾಲೆ ಗ್ರಾ.ಪಂ. ಸದಸ್ಯೆ ಪುತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT