ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಸಂಕುಲಕ್ಕಾಗಿ ಪರಿಸರ ಉಳಿಸಿ

ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಶಿವಶಂಕರ ಸಲಹೆ
Last Updated 16 ನವೆಂಬರ್ 2021, 12:37 IST
ಅಕ್ಷರ ಗಾತ್ರ

ಬೀದರ್‌: ‘ಪರಿಸರ ನೈರ್ಮಲ್ಯದಿಂದ ಮಾತ್ರ ಜೀವ ಸಂಕುಲ ಉಳಿಯಲು ಸಾಧ್ಯ. ಆದ್ದರಿಂದ ಜೀವ ಸಂಕುಲಕ್ಕಾಗಿ ಪರಿಸರ ಸಂರಕ್ಷಣೆ ಮಾಡಬೇಕು’ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಶಿವಶಂಕರ ಹೇಳಿದರು.

ಇಲ್ಲಿಯ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಸಾರಿಗೆ ಇಲಾಖೆ ಹಾಗೂ ಭಾಗ್ಯವಂತಿ ಮೋಟರ್ ಡ್ರೈವಿಂಗ್ ಸ್ಕೂಲ್ ಸಹಯೋಗದಲ್ಲಿ ವಾಯು ಮಾಲಿನ್ಯ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶುದ್ಧ ಗಾಳಿಯಿಂದಾಗಿಯೇ ಜೀವಿಗಳು ಬದುಕಿ ಉಳಿದಿವೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಗಿಡ ಮರಗಳನ್ನು ಕಡಿದು ಹಾಕಿ ಅಪಾಯ ತಂದೊಡ್ಡಿದ್ದಾನೆ’ ಎಂದು ತಿಳಿಸಿದರು.

‘ವಾಹನಗಳ ಮಾಲೀಕರು ತಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಎಂಜಿನ್ ಆಯಿಲ್ ಬದಲಿಸಬೇಕು. ವಾಹನಗಳ ಸರ್ವಿಸ್‌ ಮಾಡಿಸಬೇಕು. ಅಂದಾಗ ಮಾತ್ರ ವಾಹನಗಳು ಹೆಚ್ಚು ಹೊಗೆ ಸೂಸುವುದು ಕಡಿಮೆಯಾಗುತ್ತದೆ’ ಎಂದು ಹೇಳಿದರು.

ಹಿರಿಯ ಮೋಟಾರ್ ವಾಹನ ನಿರೀಕ್ಷಕ ಸಾಯಿಪ್ರಸಾದ ಜಿ. ಮಾತನಾಡಿ, 'ಪರಿಸರ ನೈರ್ಮಲ್ಯ ಕಾಯ್ದುಕೊಳ್ಳಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ರಸ್ತೆ ಬದಿಗೆ ಹಾಗೂ ಕಾಡಿನಲ್ಲೂ ಗಿಡ ಮರಗಳನ್ನು ಬೆಳೆಸುತ್ತಿದೆ. ಕಾಡಿನಲ್ಲೂ ಬೆಂಕಿ ಹೊತ್ತಿಕೊಂಡು ಅರಣ್ಯ ನಾಶವಾಗುತ್ತಿದೆ. ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದರು.

ಭಾಗ್ಯವಂತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಪ್ರಾಚಾರ್ಯ ಶಿವರಾಜ ಜಮಾದಾರ ಮಾತನಾಡಿ, ‘ಪಾಲಕರು 18 ವರ್ಷದೊಳಗಿರುವ ಮಕ್ಕಳಿಗೆ ಯಾವುದೇ ಕಾರಣಕ್ಕೂ ವಾಹನಗಳನ್ನು ಕೊಡಬಾರದು’ ಎಂದು ಮನವಿ ಮಾಡಿದರು.

ಕಲಿಕಾ ಚಾಲನಾಪತ್ರ, ಹೊಸ ವಾಹನ ನೋಂದಣಿ, ಕಾಯಂ ಚಾಲನಾ ಪತ್ರ ಪಡೆಯಲು ಕಚೇರಿಗೆ ಬಂದಿರುವ ಪ್ರತಿಯೊಬ್ಬರಿಗೂ ಸಸಿಗಳನ್ನು ವಿತರಿಸಲಾಯಿತು.

ಕಚೇರಿಯ ಅಧೀಕ್ಷಕ ಬಿರಿಯಾನಿ ಖಾಜಾಬಾಷಾ, ಸಿಬ್ಬಂದಿ ವಿರೇಂದ್ರ ಮೇತ್ರೆ, ವಿಶ್ವನಾಥ ಎಂ. ನಾಗೇಶ, ಅಮನೂನ್, ವೀರಣ್ಣ, ಅನಂತ ಕೆ. ಎಸ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT