ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಅರ್ಧಗಂಟೆಯಲ್ಲಿ ಕೊನೆಗೊಂಡ ಬಜೆಟ್‌ ಸಭೆ

₹2.80 ಕೋಟಿ ಉಳಿತಾಯ ಬಜೆಟ್‌; ಚರ್ಚೆಯಿಲ್ಲದೆ ಅನುಮೋದನೆ
Published 6 ಮಾರ್ಚ್ 2024, 0:09 IST
Last Updated 6 ಮಾರ್ಚ್ 2024, 0:09 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿನ ಬೀದರ್‌ ನಗರಸಭೆಯಲ್ಲಿ ಮಂಗಳವಾರ 2024–25ನೇ ಸಾಲಿನ ಬಜೆಟ್ ತರಾತುರಿಯಲ್ಲಿ ಮಂಡಿಸಲಾಯಿತು.

₹2.80 ಕೋಟಿ ಉಳಿತಾಯ ಬಜೆಟ್‌ ಮಂಡನೆ ಮಾಡಲಾಯಿತು. ₹49 ಕೋಟಿ ಬಜೆಟ್‌ ಮಂಡಿಸಿದ್ದು, ವಿವಿಧ ಮೂಲಗಳಿಂದ ನಗರಸಭೆಗೆ ₹94.69 ಕೋಟಿ ಆದಾಯ ಬರಲಿದೆ. ಇನ್ನು, ₹111 ಕೋಟಿ ವಿವಿಧ ಉದ್ದೇಶ, ಯೋಜನೆ, ಕಾಮಗಾರಿಗಳಿಗೆ ಖರ್ಚು ಮಾಡಲು ನಿರ್ಧರಿಸಲಾಯಿತು.

ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಜೆಟ್‌ ಮಂಡಿಸಲಾಯಿತು. ಎಲ್ಲರೂ ಬಜೆಟ್‌ ಬೆಂಬಲಿಸಿ, ಅಭಿವೃದ್ಧಿಗೆ ಸಹಕರಿಸಬೇಕು ಎಂದು ಗೌಸ್‌ ಕೋರಿದರು. ಅದಕ್ಕೆ ಯಾರೂ ಕೂಡ ತಕರಾರು ತೆಗೆಯಲಿಲ್ಲ. ಹೀಗಾಗಿ ಹೆಚ್ಚಿನ ಚರ್ಚೆಯಿಲ್ಲದೆ ಬಜೆಟ್‌ ಅನುಮೋದನೆ ಪಡೆಯಿತು. ಬಜೆಟ್‌ಗಿಂತ ಅನ್ಯ ವಿಷಯಗಳ ಕುರಿತು ಕೆಲಕಾಲ ಚರ್ಚೆ ನಡೆಯಿತು. ಸಭೆ ಅರ್ಧ ಗಂಟೆಯಲ್ಲಿ ಕೊನೆಗೊಂಡಿತು.

ನಗರಸಭೆ ಪೌರಾಯುಕ್ತ ಶಿವರಾಜ ರಾಥೋಡ, ಉಪಾಧ್ಯಕ್ಷೆ ಉಮಾದೇವಿ ಹಂಗರಗಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಎಲ್ಲಾ ಸದಸ್ಯರಿಗೆ ನಗರ ಹೊರವಲಯದ ದೇವ ವನದಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಘೋಷಿಸಿ ಸಭೆ ಕೊನೆಗೊಳಿಸಲಾಯಿತು.

ಅಂಕಿ ಅಂಶಗಳು... ₹49 ಕೋಟಿ ಒಟ್ಟು ಬಜೆಟ್‌ ಗಾತ್ರ ₹94.69 ಕೋಟಿ ಒಟ್ಟು ಸ್ವೀಕೃತಿಗಳು ₹111 ಕೋಟಿ ಒಟ್ಟು ಪಾವತಿಗಳು ₹2.80 ಕೋಟಿ ಉಳಿತಾಯ ಬಜೆಟ್‌

‘ಉರ್ದು ಭಾಷೆಯಲ್ಲಿ ಅಜೆಂಡಾ ಕೊಡಿ’

ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಎಐಎಂಐಎಂ ಪಕ್ಷದ ಸದಸ್ಯ ಮುನ್ನಾ ‘ನನಗೆ ಕನ್ನಡ ಮಾತೃಭಾಷೆಯ ಬಗ್ಗೆ ಅಪಾರ ಗೌರವ ಇದೆ. ಆದರೆ ನನಗೆ ಕನ್ನಡ ಓದಲು ಬರುವುದಿಲ್ಲ. ಹಾಗಾಗಿ ಸಭೆಯ ಅಜೆಂಡಾ ಕಾಪಿ ಉರ್ದು ಭಾಷೆಯಲ್ಲಿ ಕೊಡುವಿರಾ ಇಲ್ಲವೋ ಎಂಬುದನ್ನು ತಿಳಿಸಿ’ ಎಂದು ಕೇಳಿದರು. ಅದಕ್ಕೆ ದನಿಗೂಡಿಸಿದ ಕಾಂಗ್ರೆಸ್‌ ಸದಸ್ಯ ರಿಯಾಜ್‌ ‘ಕಳೆದ 10–12 ವರ್ಷಗಳಿಂದ ಅಜೆಂಡಾ ಕಾಪಿ ಉರ್ದುವಿನಲ್ಲೂ ಕೊಡುತ್ತಿದ್ದಾರೆ. ಈಗಲೂ ಕೊಡಬೇಕು’ ಎಂದು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಶಿವರಾಜ ರಾಥೋಡ ‘ಈ ಕುರಿತು ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು. ಆನಂತರ ಮುಂದಿನ ಸಭೆಯಲ್ಲಿ ಉರ್ದುವಿನಲ್ಲಿ ಅಜೆಂಡಾ ಪ್ರತಿ ಕೊಡುವುದರ ಬಗ್ಗೆ ತೀರ್ಮಾನಿಸಲಾಗುವುದು’ ಎಂದರು.

ಕನ್ನಡ ನಾಮಫಲಕ ಗಡುವು ವಿಸ್ತರಣೆಗೆ ಆಗ್ರಹ ‘

ಎಲ್ಲಾ ಅಂಗಡಿ ಮುಂಗಟ್ಟುಗಳ ಮೇಲೆ ಶೇ 60ರಷ್ಟು ಕನ್ನಡದಲ್ಲಿಯೇ ನಾಮಫಲಕ ಹಾಕಿಸಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದರ ಗಡುವು ಮುಗಿದಿದೆ. ಅದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯವರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವು ಅಂಗಡಿಗಳ ಬೆಲೆಬಾಳುವ ಬೋರ್ಡ್‌ಗಳನ್ನು ಹಾಳುಗೆಡವಿದ್ದಾರೆ. ಬೆಂಗಳೂರಿನಲ್ಲಿ ಬಿಬಿಎಂಪಿ ಈಗಾಗಲೇ ಎರಡು ತಿಂಗಳು ಕಾಲಾವಕಾಶ ವಿಸ್ತರಿಸಿದೆ. ಅದೇ ರೀತಿ ನಗರಸಭೆಯೂ ಸಮಯ ವಿಸ್ತರಿಸಬೇಕು’ ಎಂದು ಬಿಜೆಪಿ ಸದಸ್ಯ ಶಶಿಧರ ಹೊಸಳ್ಳಿ ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಶಿವರಾಜ ರಾಥೋಡ ‘ಬಿಬಿಎಂಪಿ ಸ್ವಾಯತ್ತ ಸಂಸ್ಥೆಯಾಗಿದೆ. ಅವಧಿ ವಿಸ್ತರಿಸುವ ಅಧಿಕಾರ ಅದಕ್ಕಿದೆ. ಆದರೆ ನಗರಸಭೆಗೆ ಆ ಅಧಿಕಾರ ಇಲ್ಲ. ಆದರೆ ಮುಂದಿನ ಸಭೆಯಲ್ಲಿ ಈ ಕುರಿತು ಚರ್ಚಿಸಿ ಸದಸ್ಯರ ಸರ್ವಸಮ್ಮತಿಯಿಂದ ನಿರ್ಧಾರ ಕೈಗೊಳ್ಳಬಹುದು’ ಎಂದರು.

ಡೀಸೆಲ್‌ನಲ್ಲಿ ಅಕ್ರಮ; ತನಿಖೆಗೆ ಆಗ್ರಹ

‘ನಗರಸಭೆಗೆ ಸೇರಿದ ವಾಹನಗಳಿಗೆ ಡೀಸೆಲ್‌ ತುಂಬಿಸುವಲ್ಲಿ ಭಾರಿ ಅಕ್ರಮ ನಡೆಯುತ್ತಿದೆ. ಇದರಲ್ಲಿ ಭಾರಿ ಹೇರಾ ಫೇರಿ ನಡೆಯುತ್ತಿದೆ. ಅದನ್ನು ನಾನೇ ನೋಡಿದ್ದೇನೆ. ಜನರ ತೆರಿಗೆ ಹಣ ಈ ರೀತಿಯಾದರೆ ಹೇಗೆ? ಅದರ ಬಗ್ಗೆ ತನಿಖೆ ನಡೆಸಬೇಕು’ ಎಂದು ಬಿಜೆಪಿ ಸದಸ್ಯ ಶಶಿಧರ ಹೊಸಳ್ಳಿ ಒತ್ತಾಯಿಸಿದರು. ಪೌರಾಯುಕ್ತ ಶಿವರಾಜ ರಾಥೋಡ ಪ್ರತಿಕ್ರಿಯಿಸಿ‘ವಾಹನಗಳಿಗೆ ತುಂಬಿಸುವ ಡೀಸೆಲ್‌ ವಿವರವನ್ನು ಲಾಗ್‌ಬುಕ್‌ನಲ್ಲಿ ದಾಖಲಿಸಲಾಗುತ್ತದೆ. ಒಂದು ವೇಳೆ ಸೋರಿಕೆ ಆಗುತ್ತಿದ್ದರೆ ತನಿಖೆ ನಡೆಸಲಾಗುವುದು’ ಎಂದರು. ಎಐಎಂಐಎಂ ಸದಸ್ಯ ಮುನ್ನಾ ಮಧ್ಯ ಪ್ರವೇಶಿಸಿ ಡೀಸೆಲ್‌ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ನಾನೂ ಗಮನಿಸಿದ್ದೇನೆ. ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

‘ಬಾಡಿಗೆ ಬದಲು ಹೊಸ ವಾಹನ ಖರೀದಿಸಿ’

‘ಪೌರಾಯುಕ್ತರು ಸೇರಿದಂತೆ ಇತರೆ ಅಧಿಕಾರಿಗಳಿಗೆ ಬಾಡಿಗೆ ವಾಹನಗಳನ್ನು ಪಡೆಯುವುದರ ಬದಲು ನಗರಸಭೆಯಿಂದಲೇ ಖರೀದಿಸಬೇಕು’ ಎಂದು ಜೆಡಿಎಸ್‌ ಸದಸ್ಯ ರಾಜು ಚಿಂತಾಮಣಿ ಸಲಹೆ ನೀಡಿದರು. ಪೌರಾಯುಕ್ತ ಶಿವರಾಜ ರಾಥೋಡ ಸರ್ಕಾರದ ಸುತ್ತೋಲೆ ಪ್ರಕಾರ ಸರ್ಕಾರಿ ಬಜೆಟ್‌ನಲ್ಲಿ ಅದನ್ನು ಖರೀದಿಸುವಂತಿಲ್ಲ. ನಗರಸಭೆ ಆದಾಯದಲ್ಲಿ ಖರೀದಿಸಲು ಅವಕಾಶ ಇದೆ. ಮೂರು ವಾಹನಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲಾಗಿದೆ. ವಾರ್ಷಿಕ ₹15 ಲಕ್ಷ ವೆಚ್ಚ ಭರಿಸಲಾಗುತ್ತಿದೆ ಎಂದರು. ಕೆಲ ಸದಸ್ಯರು ಅದಕ್ಕೆ ಆಕ್ಷೇಪಿಸಿ ವಾಹನ ಖರೀದಿಸಿದರೆ ನಿರ್ವಹಣೆ ಸೇರಿದಂತೆ ಹೆಚ್ಚಿನ ಖರ್ಚು ಬರುತ್ತದೆ. ಬಾಡಿಗೆ ಮೇಲೆ ವಾಹನ ಪಡೆಯುವುದೇ ಸೂಕ್ತ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT