ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳನ್ನು ಆಕರ್ಷಿಸಲು ಉಚಿತ ನೋಟ್‍ಬುಕ್, ಪೆನ್ ವಿತರಣೆ’

ಶಮಶರಪೂರವಾಡಿ: ಕಲಿಕೆಗೆ ಸಹಕಾರಿಯಾದ ನಲಿ-ಕಲಿ
Last Updated 12 ಫೆಬ್ರುವರಿ 2020, 9:31 IST
ಅಕ್ಷರ ಗಾತ್ರ

ಭಾಲ್ಕಿ: ಖಾಸಗಿ ಶಾಲೆ, ಇಂಗ್ಲಿಷ್ ಮಾಧ್ಯಮ ಶಾಲೆಗಳ ಹಾವಳಿ ಮಧ್ಯೆಯೂ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಬೇಕು ಎಂದು ಸಮಾನ ಮನಸ್ಕ ಶಿಕ್ಷಕರ ಗುಂಪೊಂದು ತಮ್ಮ ವೈಯಕ್ತಿಕ ಹಣ ಖರ್ಚು ಮಾಡಿ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ವರ್ಷ ಪೂರ್ತಿ ಅಗತ್ಯವಿರುವ ನೋಟ್‍ಬುಕ್, ಪೆನ್ ವಿತರಣೆಗೆ ನಿರ್ಧರಿಸಿದ್ದಾರೆ.

ಹೌದು! ತಾಲ್ಲೂಕಿನ ಶಮಶರಪೂರವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ, ಸಿಬ್ಬಂದಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ಹೇಗಾದರೂ ಮಾಡಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಈ ರೀತಿಯ ವಿಭಿನ್ನ ಯೋಚನೆ ಮಾಡಿದ್ದಾರೆ.

ಕೆಲ ವರ್ಷಗಳ ಹಿಂದೆ ಎಲ್ಲ ಹಳ್ಳಿಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಸಾರಿಗೆ ಸಂಪರ್ಕ, ರಸ್ತೆ, ಖಾಸಗಿ, ಇಂಗ್ಲಿಷ್ ಮಾಧ್ಯಮ ಶಾಲೆಗಳು ಇರಲಿಲ್ಲ. ಆಗ ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ ಮಕ್ಕಳನ್ನು ದಾಖಲು ಮಾಡುತ್ತಿದ್ದರು. ಈಗ ಸೌಕರ್ಯಗಳು ಹೆಚ್ಚಾಗಿದ್ದು, ಪಾಲಕರು ಹೇಗಾದರೂ ಮಾಡಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿಯೇ ಓದಿಸಬೇಕು ಎನ್ನುವ ಮನಸ್ಥಿತಿ ಹೊಂದಿದ್ದಾರೆ. ಗ್ರಾಮದಿಂದ ತಾಲ್ಲೂಕು ಕೇಂದ್ರ ಕೇವಲ 3 ಕಿ.ಮೀ ಅಂತರದಲ್ಲಿದೆ. ನಮ್ಮ ಶಾಲೆಯ ಉಳಿವಿಗೆ ಸಮುದಾಯದ ಸಹಕಾರದೊಂದಿಗೆ ಏಪ್ರಿಲ್ ತಿಂಗಳಿನಲ್ಲಿಯೇ ಎಲ್ಲ ಮನೆಗಳಿಗೆ ಭೇಟಿ ನೀಡಿ, ಪಾಲಕರ ಮನವೊಲಿಸಿ, ಉಚಿತ ನೋಟ್‍ಬುಕ್ ಪೆನ್ ನೀಡುವುದರ ಮೂಲಕ ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎನ್ನುತ್ತಾರೆ ಎಂದು ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಮಲ್ಲೇಶೆ, ಲಲಿತಾ, ಪ್ರಭಾವತಿ.

ಶಾಲೆಯ 1ರಿಂದ 3ನೇ ತರಗತಿವರೆಗಿನ ನಲಿ-ಕಲಿ ವಿಭಾಗದಲ್ಲಿ 15 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಮಾಡುತ್ತ ಕಲಿ ಎನ್ನುವ ಮಹಾತ್ಮ ಗಾಂಧೀಜಿ ತತ್ವದ ಅಕ್ಷರಶಃ ಪಾಲನೆ ಆಗುತ್ತಿದೆ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳ ವಯಸ್ಸಿಗೆ ಮೀರಿದ ಭಾರವನ್ನು ಹೊರುವ ಶಾಲಾ ಬ್ಯಾಗ್‌ನ್ನು ಹೊತ್ತುಕೊಂಡು ಶಾಲೆಗೆ ಬರುವಷ್ಟರಲ್ಲಿಯೇ ಮಕ್ಕಳು ಸುಸ್ತಾಗಿರುತ್ತಾರೆ. ಹೀಗಾಗಿ ಶಾಲೆಗಳು ಮಕ್ಕಳನ್ನು ಅವರ ಸ್ವಆಸಕ್ತಿಯಿಂದ ತಮ್ಮತ್ತ ಸೆಳೆಯುವಲ್ಲಿ ಹೆಚ್ಚು ಕಡಿಮೆ ವಿಫಲವಾಗುತ್ತಿವೆ.

ಗುಣಾತ್ಮಕ ಶಿಕ್ಷಣ ಎಂಬ ಮೂಲ ತಳಹದಿಯ ಮೇಲೆ ಜನ್ಮ ತಾಳಿರುವ ನಲಿ–ಕಲಿ ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದಾರೆ. ನಲಿ–ಕಲಿ ಶಿಶು ಮತ್ತು ಶಿಕ್ಷಕ ಸ್ನೇಹಿಯಾಗಿದೆ. ಮಕ್ಕಳಿಗೆ ಚಟುವಟಿಕೆ ಆಧಾರಿತವಾಗಿ, ಅವರ ಕಲಿಕಾ ವೇಗಕ್ಕೆ ಅನುಗುಣವಾಗಿ ಕಲಿಸಲು ಇದು ಸಹಕಾರಿಯಾಗಿದೆ ಎನ್ನುತ್ತಾರೆ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಮಾಯಾದೇವಿ.

ಶಾಲೆಯ 1ರಿಂದ 7ನೇ ತರಗತಿವರೆಗೆ 38 ಮಕ್ಕಳ ಸಂಖ್ಯೆ ಇದೆ. ಶಾಲೆಯಲ್ಲಿ ಗಣಿತ, ವಿಜ್ಞಾನ, ಇಂಗ್ಲಿಷ್, ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ, ಪ್ರತ್ಯೇಕ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಸೌಲಭ್ಯ ಇಲ್ಲದಿರುವುದರಿಂದ ಮಕ್ಕಳ ಸರ್ವತೋಮುಖ ಏಳಿಗೆಗೆ ತೊಂದರೆ ಆಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗಳನ್ನು ಪರಿಹರಿಸಿದ್ದಲ್ಲಿ ಶಾಲೆಯಲ್ಲಿ ಇನ್ನು ಹೆಚ್ಚಿನ ವಿದ್ಯಾರ್ಥಿಗಳು ದಾಖಲಾತಿ ಪಡೆಯುತ್ತಾರೆ.ಸದ್ಯ ಇರುವ ಮಕ್ಕಳಿಗೂ ಪರಿಪೂರ್ಣ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಪಾಲಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT