ಸೋಮವಾರ, ಆಗಸ್ಟ್ 8, 2022
21 °C
ಕೋವಿಡ್ ಲಾಕ್‌ಡೌನ್‌ನಲ್ಲಿ ಸಲ್ಲಿಸಿದ ಸೇವೆ ಮರೆಯದ ಕ್ಷೇತ್ರದ ಮತದಾರರು

ಬಸವಕಲ್ಯಾಣ: ‘ಶರಣು’ ಆಗಿ ಕಲ್ಯಾಣದವರ ಮನಗೆದ್ದರು

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಶರಣು ಸಲಗರ ಅವರ ದಾಖಲೆಗಳಲ್ಲಿನ ಹೆಸರು ಶರಣಬಸಪ್ಪ ಇದ್ದರೂ ‘ಶರಣು’ ಆಗಿ ಬಸವಣ್ಣನವರ ಕಾರ್ಯಕ್ಷೇತ್ರ ಕಲ್ಯಾಣಕ್ಕೆ ಬಂದು ಕೋವಿಡ್ ಲಾಕ್‌ಡೌನ್‌ನಲ್ಲಿನ ಸೇವಾ ಕೈಂಕರ್ಯದಿಂದ ಮತದಾರರ ಮನಗೆದ್ದು ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಈ ಕ್ಷೇತ್ರದ 15ನೇ ಶಾಸಕರಾಗಿದ್ದಾರೆ.

ಇವರ ಹುಟ್ಟೂರು ಈ ವಿಧಾನಸಭಾ ಕ್ಷೇತ್ರದ ಗಡಿ ಗ್ರಾಮ ಕೊಹಿನೂರನಿಂದ ಕೇವಲ 2 ಕಿ.ಮೀ. ಅಂತರದಲ್ಲಿರುವ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ವಿ.ಕೆ.ಸಲಗರ. ಆ ಊರಿನ ಹೆಸರನ್ನು ಅಡ್ಡ ಹೆಸರಾಗಿ ಇಟ್ಟುಕೊಂಡು ‘ಶರಣು ಸಲಗರ’ ಆಗಿದ್ದಾರೆ. ಆದರೆ, ಸಲಗರದಲ್ಲಿ ಯಾರಿಗೆ ವಿಚಾರಿಸಿದರೂ ‘ಹಿರೇನಾಗಾಂವ’ ಮನೆತನದವರು ಎಂದೇ ಇವರನ್ನು ಗುರುತಿಸುತ್ತಾರೆ.

ಹಿರೇನಾಗಾಂವ ಗ್ರಾಮವು ಬಸವಕಲ್ಯಾಣ ತಾಲ್ಲೂಕಿನ ಮುಡಬಿ ಹೋಬಳಿಯಲ್ಲಿದೆ. ಇವರ ಪೂರ್ವಜರು ವ್ಯಾಪಾರ ನಿಮಿತ್ತ ಇಲ್ಲಿಂದ ಸಲಗರಗೆ ವಲಸೆ ಹೋಗಿದ್ದರಿಂದ ಅಲ್ಲಿ ಈ ಊರಿನ ಹೆಸರು ಮನೆತನದ ಹೆಸರಾಗಿ ಚಾಲ್ತಿಗೆ ಬಂದಿದೆ. ಆದರೂ, ಹಿರೇನಾಗಾಂವ ಎಂಬ ಅಡ್ಡ ಹೆಸರು ಬಳಸದೆ ಸಲಗರ ಎಂದು ಇಟ್ಟುಕೊಂಡಿದಕ್ಕೆ ಚುನಾವಣೆಯಲ್ಲಿ ಇವರು ಹೊರಗಿನವರು ಎಂಬ ನೆಪ ಮುಂದೆ ಮಾಡಿ ಕೆಲವರು ವ್ಯಕ್ತಪಡಿಸಿದ ಪ್ರಬಲ ವಿರೋಧವನ್ನು ಎದುರಿಸಬೇಕಾಯಿತು.

ಇವರ ಆಯ್ಕೆಯಿಂದ ಮೂರು ಶಾಸಕರನ್ನು ನೀಡಿದ ನೆಲ ಎಂದೇ ಗುರುತಿಸಿಕೊಳ್ಳುವ ಕೊಹಿನೂರ ಮತ್ತು ಸಲಗರ ಹೋಬಳಿಗಳ ಸರಹದ್ದು ಈಗ ನಾಲ್ವರು ಶಾಸಕರ ನೆಲ ಎಂದೇ ಗುರುತಿಸಿಕೊಳ್ಳಲಿದೆ. ಸಲಗರದಿಂದ ಕೇವಲ 3 ಕಿ.ಮೀ ಅಂತರದಲ್ಲಿನ ಅಟ್ಟೂರ್ ಗ್ರಾಮವು ಈ ಕ್ಷೇತ್ರದಲ್ಲಿ ಐದು ಸಲ ಶಾಸಕರಾಗಿದ್ದ ಬಸವರಾಜ ಪಾಟೀಲ ಅಟ್ಟೂರ್ ಅವರ ಊರು. ಅಲ್ಲಿಂದ 2 ಕಿ.ಮೀ ದೂರದ ಬೆಳಮಗಿ ತಾಂಡಾ ಮಾಜಿ ಸಚಿವ ರೇವುನಾಯಕ ಬೆಳಮಗಿ ಅವರ ಸ್ವಂತ ಗ್ರಾಮ. ಅಲ್ಲಿಂದ ಮುಂದೆ 4 ಕಿ.ಮೀ ದಾಟಿದರೆ ಬರುವ ತಡಕಲ್ ಗ್ರಾಮವು ಮಾಜಿ ಸಚಿವ ಸುಭಾಷ ಗುತ್ತೇದಾರ್ ಅವರ ಊರಾಗಿದೆ.

ಇವರ ಪತ್ನಿ ಸಾವಿತ್ರಿ ಸಲಗರ ಅವರು 2016ರಲ್ಲಿ ಕೆಎಎಸ್ ಉತ್ತೀರ್ಣರಾಗಿ ಬಸವಕಲ್ಯಾಣದ ತಹಶೀಲ್ದಾರ್ ಹುದ್ದೆಗೆ ನೇಮಕಗೊಂಡಿದ್ದರಿಂದ ಸಹಜವಾಗಿಯೇ ಈ ಕ್ಷೇತ್ರದ ಜತೆ ಸಂಪರ್ಕ ಇಟ್ಟುಕೊಂಡು ಸಮಾಜಸೇವೆ ಆರಂಭಿಸಿದರು. 2020ರ ಕೋವಿಡ್ ಲಾಕ್‌ಡೌನ್‌ ಕಾಲದಲ್ಲಿ ತಾಲ್ಲೂಕಿನ ಹಳ್ಳಿಗಳಿಗೆ ಹೋಗಿ 50 ಸಾವಿರಕ್ಕಿಂತ ಹೆಚ್ಚಿನ ಜನರಿಗೆ ಆಹಾರಧಾನ್ಯ ವಿತರಿಸಿದರಲ್ಲದೆ ಇತರೆ ರೂಪದಲ್ಲಿಯೂ ಸಹಾಯ ಸಹಕಾರ ನೀಡಿದರು.

ಇದೇ ಸಮಯದಲ್ಲಿ ಶಾಸಕ ಬಿ.ನಾರಾಯಣರಾವ್ ಅವರ ನಿಧನ ಆಗಿದ್ದರಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಹತ್ತಾರು ಆಕಾಂಕ್ಷಿಗಳನ್ನು ಹಿಂದಿಕ್ಕಿ ಟಿಕೆಟ್ ಪಡೆದರಲ್ಲದೆ ಚುನಾವಣೆಯಲ್ಲಿ ವಿಜೇತರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು