ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಯಮದಿಂದ ಬಾಳುವವನೆ ಶೀಲವಂತ: ಶ್ರೀ ಬಸವಲಿಂಗ ಪಟ್ಟದ್ದೇವರು

ಭಾಲ್ಕಿ ಹಿರೇಮಠ ಸಂಸ್ಥಾನದ
Last Updated 19 ಜುಲೈ 2021, 11:06 IST
ಅಕ್ಷರ ಗಾತ್ರ

ಬೀದರ್‌: ಶೀಲ ಎಂದರೆ ಕೇವಲ ಮಡಿವಂತಿಕೆಯಲ್ಲ. ನದಿಯಲ್ಲಿ ಮುಳಗಿ ಹಸಿಬಟ್ಟೆಯನ್ನು ಉಟ್ಟುಕೊಂಡು ಗಡಗಡ ನಡಗುತ್ತ ಪೂಜೆ ಮಾಡುವವನು ಶೀಲವಂತನಲ್ಲ. ಉಪ್ಪು, ಹುಳಿ, ಬೆಳ್ಳೊಳ್ಳಿ ಬಿಟ್ಟವ ಶೀಲವಂತನಲ್ಲ. ಶೀಲ ಎಂಬುದು ಅಂತರಂಗದ ಸೌಂದರ್ಯ. ನಡೆ-ನುಡಿ ಒಂದೆಯಾಗಿರುವುದೇ ಶೀಲ. ಮನದ ಮದವ ಕಳೆದು ತನ್ನೊಳಗಿರುವ ದುರ್ಗುಣಗಳು, ದುರಾಚಾರಗಳು ನಿರ್ಮೂಲನೆ ಮಾಡಿ ಸಂಯಮದಿಂದ ಬಾಳುವವನೆ ಶೀಲವಂತ.

`ಶೀಲ ಶೀಲವೆಂದು ಗರ್ವಿಸಿ ನುಡಿವುತಿಪ್ಪರು, ಶೀಲವಾವುದೆಂದರಿಯರು. ಇದ್ದುದ ವಂಚನೆಯಹ ಮಾಡಿರಿರ್ಪುದೇ ಶೀಲ. ಇಲ್ಲದುದಕ್ಕೆ ಕಡನ ಬೇಡದಿರ್ಪುದೇ ಶೀಲ, ಪರಧನ, ಪರಸತಿಗೆಳಸದಿಪ್ಪುದೆ ಶೀಲ, ಪರದೈವ ಪರಸಮಯಕ್ಕೆಳಸದಿಪ್ಪುದೆ ಶೀಲ, ಗುರುನಿಂದೆ, ಜಂಗಮನಿಂದೆಯ ಕೇಳದಿಪ್ಪುದೆ ಶೀಲ, ಕೂಡಲಚೆನ್ನಸಂಗನ ಶರಣರ ಬರವಿಂಗೆ ಮುಯ್ಯಾಂತು ಪರಿಣಾಮಿಸಬಲ್ಲರೆ ಅಚ್ಚಶೀಲ’ ಎಂದು ಚನ್ನಬಸವಣ್ಣನವರು ಹೇಳುತ್ತಾರೆ. ಪರದೈವ, ಪರಧನ, ಪರಸತಿಯನ್ನು ಬಯಸದಿರುವವರೇ ಶೀಲವಂತರು. ಗುರುನಿಂದೆ, ಜಂಗಮನಿಂದೆ ಕೇಳಲಾರದವರೆ ಶೀಲವಂತರು. ಆಸೆರೋಷಗಳೆಲ್ಲವು ಬಿಟ್ಟು ದೇವನ ನೆನಹು ತುಂಬಿಕೊಂಡು ಸದಾಚಾರ ನಡೆಯನು ಅಳವಡಿಸಿಕೊಂಡವನೆ ಶೀಲವುಳ್ಳವರು.

ಬಾಹ್ಯದ ಆಚರಣೆಯನ್ನು ಅಂತರಂಗಕ್ಕೆ ಅಳವಡಿಸಿಕೊಂಡವರೇ ಶೀಲವಂತರು. ತನು-ಮನ-ಭಾವವೆಲ್ಲವೂ ಶಿವನ ಸೊಮ್ಮು ಎಂದು ಶಿವನಿಗೆ ಅರ್ಪಿಸುವುದೇ ನಿಜವಾದ ಶೀಲ. ಶರಣರು ಬೋಧಿಸಿದ ಶೀಲ ರಕ್ಷಣೆಯನ್ನು ನಮಗೆ ನಾವೇ ಮಾಡಿಕೊಳ್ಳಬೇಕು. ಶೀಲದ ರಕ್ಷಣೆಯಿಂದ ನಮ್ಮ ಬದುಕು ಘನವಾಗುತ್ತದೆ. ಅಂತರಂಗದಲ್ಲಿ ಶೀಲವಿಲ್ಲದವರ ಬದುಕು ಹೆಂಡದ ಮಡಕೆಯು ಹೊರಗೆ ತೊಳೆದಂತಾಗುತ್ತದೆ. ನಿಜವಾದ ಶೀಲವಂತರಿಂದಲೇ ಸಮಾಜದಲ್ಲಿ ನೆಮ್ಮದಿ ಸಾಮರಸ್ಯ ಕಾಣಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT