ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಂದಲೇ ಸಾಮಾಜಿಕ ಪರಿವರ್ತನೆ ಸಾಧ್ಯ

ಸಿದ್ಧಲೋಕ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಪೂಜಾರ ಹೇಳಿಕೆ
Last Updated 15 ಸೆಪ್ಟೆಂಬರ್ 2022, 13:31 IST
ಅಕ್ಷರ ಗಾತ್ರ

ಬೀದರ್: ‘ಸಾಮಾಜಿಕ ಪರಿವರ್ತನೆ ಶಿಕ್ಷಕನಿಂದ ಮಾತ್ರ ಸಾಧ್ಯವಿದೆ’ ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಬಿ.ಬಿ. ಪೂಜಾರ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಸಿದ್ಧಾರೆಡ್ಡಿ ನಾಗೋರಾ ಅಭಿನಂದನಾ ಸಮಿತಿ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಿವೃತ್ತ ಮುಖ್ಯಶಿಕ್ಷಕ ಸಿದ್ಧಾರೆಡ್ಡಿ ನಾಗೋರಾ ಅವರ ಕುರಿತ ಅಭಿನಂದನಾ ಗ್ರಂಥ ‘ಸಿದ್ಧಲೋಕ' ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕನ ಬಹು ದೊಡ್ಡ ಪಾತ್ರ ಇದೆ. ಯಾವುದೇ ಅಭಿವೃದ್ಧಿಯ ಹಿಂದೆ ಒಬ್ಬ ಶಿಕ್ಷಕ ಇದ್ದೇ ಇರುತ್ತಾನೆ. ಅಕ್ಷರ ಕಲಿಸಿದವರಷ್ಟೇ ಅಲ್ಲ, ದಾರಿ ತೋರಿಸಿದವರು, ಮಾರ್ಗದರ್ಶನ ಮಾಡಿದವರು ಕೂಡ ಗುರು’ ಎಂದು ಬಣ್ಣಿಸಿದರು.
‘ಸಿದ್ಧಾರೆಡ್ಡಿ ನಾಗೋರಾ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದಾರೆ. ಶಿಕ್ಷಕ ವೃತ್ತಿ ಜತೆಗೆ ಸಾಮಾಜಿಕ, ಧಾರ್ಮಿಕ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಸಾಮಾಜಿಕ ಕಾಳಜಿ, ಸಂಪೂರ್ಣ ವ್ಯಕ್ತಿತ್ವದ ಚಿತ್ರಣ ಅಭಿನಂದನಾ ಗ್ರಂಥದಲ್ಲಿ ದಾಖಲಾಗಿದೆ’ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಸಿದ್ಧಾರೆಡ್ಡಿ ಉದಾತ್ತ ವ್ಯಕ್ತಿತ್ವಕ್ಕೆ ಮಾದರಿಯಾಗಿದ್ದಾರೆ. ಶಿಕ್ಷಕ ವೃತ್ತಿ ಹಾಗೂ ಸಮಾಜಮುಖಿ ಕಾರ್ಯಗಳಿಂದಾಗಿ ಜನ ಮನ್ನಣೆ ಗಳಿಸಿದ್ದಾರೆ. ಅವರಿಗೆ ಗೌರವ ಸಂದದ್ದು ಬಹಳ ಸೂಕ್ತವಾಗಿದೆ’ ಎಂದು ಹೇಳಿದರು.

ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ಸಿದ್ಧಾರೆಡ್ಡಿ ಬಾಲ್ಯದಿಂದಲೇ ಗುರುಭಕ್ತಿ ಬೆಳೆಸಿಕೊಂಡಿದ್ದರು. ಆಧ್ಯಾತ್ಮ ಅವರ ಮೇಲೆ ಸಹಜವಾಗಿಯೇ ಪ್ರಭಾವ ಬೀರಿತ್ತು. ಅದರಿಂದಾಗಿ ಅವರು ಒಳ್ಳೆಯ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ. ಮದುವೆಯಲ್ಲಿ ಮಾವ ಹಾಕಿದ್ದ ಮೂರು ತೊಲದ ಚಿನ್ನದ ಚೌಕದ ಸರವನ್ನು ನನಗೆ ಹಾಕಿದ್ದು ಅವರ ಉದಾರತೆಗೊಂದು ಉದಾಹರಣೆಯಾಗಿದೆ’ ಎಂದು ತಿಳಿಸಿದರು.

ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರು ಮಾತನಾಡಿ, ‘ಸಿದ್ಧಾರೆಡ್ಡಿ ಅವರು ಒಳ್ಳೆಯ ನಡೆ, ನುಡಿಯ ಸಮಾಜದ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಇಲ್ಲಿ ಸೇರಿದ ಜನಸ್ತೋಮವೇ ಅದಕ್ಕೆ ನಿದರ್ಶನವಾಗಿದೆ. ಅವರ ನಿವೃತ್ತಿ ಜೀವನ ಸಮಾಜದ ಒಳಿತಿಗೆ ಬಳಕೆಯಾಗಲಿ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಸಮಾಜ ಪರವಾದ ಕೆಲಸ ಮಾಡಿದ ವ್ಯಕ್ತಿಯನ್ನು ಗುರುತಿಸಿ, ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಆ ಹೊಣೆಗಾರಿಕೆಯನ್ನು ನಿಭಾಯಿಸಿದೆ’ ಎಂದು ತಿಳಿಸಿದರು.

ಕೆಆರ್‍ಇ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕೆಆರ್‍ಇ ನ್ಯಾಸ್ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರ ಮಾತನಾಡಿದರು. ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಲ್ಲೂರ ಆಶಯ ನುಡಿ ಆಡಿದರು.
ನಿವೃತ್ತ ಮುಖ್ಯಶಿಕ್ಷಕ ಸಿದ್ಧಾರೆಡ್ಡಿ ನಾಗೋರಾ ದಂಪತಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಖಾನಾಪುರದ ಆನಂದ ಆಶ್ರಮದ ಜಗದೇಶ್ವರಿ ಮಾತೆ ಸಮ್ಮುಖ ವಹಿಸಿದ್ದರು. ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಸಿ. ವೀರಣ್ಣ ಕಾರ್ಯಕ್ರಮ ಉದ್ಘಾಟಿಸಿದರು.

ಹಿರಿಯ ಸಾಹಿತಿ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಡಾ. ಟಿ.ಆರ್. ದೊಡ್ಡೆ, ಸೋಮಶೇಖರ ಹಂಚನಾಳ, ಸಹಜಾನಂದ ಕಂದಗೂಳ, ಬಾಲಾಜಿ ಬಿರಾದಾರ, ವಿಜಯಕುಮಾರ ಬೆಳಮಗಿ, ಶಿವಕುಮಾರ ಪಾಟೀಲ ತೇಗಂಪುರ, ಶಶಿಧರ ಹೊಸಳ್ಳಿ, ರಾಜಾರಾಮ ಚಿಟ್ಟಾ, ಶಿವಾಜಿರಾವ್ ಢೋಣೆ, ಅಶೋಕ ರೆಡ್ಡಿ ಗುಡೂರು, ಆನಂದಕುಮಾರ ಪಬ್ಬಾ, ಡಾ. ಸಿ. ಆನಂದರಾವ್, ಡಾ.ಆನಂದ ಜಾಬಶೆಟ್ಟಿ, ರಮೇಶ ಬಿರಾದಾರ, ಬಾಬುರಾವ್ ದಾನಿ, ಬಸವರಾಜ ಸ್ವಾಮಿ, ಕೆ.ಟಿ. ವಿಶ್ವನಾಥ, ಪೀರಪ್ಪ ಔರಾದೆ, ಅನಿಲಕುಮಾರ ಅಟ್ಟಂಗೆ, ಟಿ.ಎಂ. ಮಚ್ಚೆ, ಶಿವಶಂಕರ ಟೋಕರೆ, ಶಿವಕುಮಾರ ಕಟ್ಟೆ, ಶಿವಕುಮಾರ ಪಟಪಳ್ಳಿ, ಜಗನ್ನಾಥ ಕಮಲಾಪುರೆ ಇದ್ದರು. ಹಾವಯ್ಯ ಸ್ವಾಮಿ ಸ್ವಾಗತಿಸಿದರು. ರೇಣುಕಾ ಮಳ್ಳಿ ಪೂಜಾರಿ ನಿರೂಪಿಸಿದರು. ದೇವೇಂದ್ರ ಕರಂಜೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT