ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು ಹಂಗಾಮಿನ ಬಿತ್ತನೆ: ರೈತರಿಗೆ ಸಲಹೆಗಳು

Last Updated 12 ಅಕ್ಟೋಬರ್ 2021, 15:21 IST
ಅಕ್ಷರ ಗಾತ್ರ

ಬೀದರ್‌: ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಜಿಲ್ಲೆಯ 30 ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್ ತಿಳಿಸಿದ್ದಾರೆ.

ರೈತರು ಆಧಾರ ಸಂಖ್ಯೆ ನೀಡಿ ಕಡಲೆ, ಹಿಂಗಾರು ಜೋಳ, ಗೋಧಿ ಮತ್ತು ಕುಸುಬೆ ಪ್ರಮಾಣಿಕೃತ ಬಿತ್ತನೆ ಬೀಜಗಳನ್ನು ಪಡೆಬಹುದಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಆರ್.ಡಿ. ನಂಬರ್ ಹೊಂದಿರುವ ಜಾತಿ ಪ್ರಮಾಣಪತ್ರ ನೀಡಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಪಡೆಯಬೇಕು. ಅಧಿಕೃತ ಬೀಜ ಮಾರಾಟ ಕೇಂದ್ರದಲ್ಲಿ ಖರಿದೀಸಿ ಬಿಲ್‌ ಪಡೆಯಬೇಕು.

ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಕೈಗೊಂಡು ಬಿತ್ತನೆ ಮಾಡಬೇಕು. ಇದರಿಂದ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದಾಗಿದೆ. ಅಲ್ಲದೇ ಮಣ್ಣಿನ ಫಲವತ್ತತೆ ಹೆಚ್ಚಿಸಲು ಅನುಕೂಲವಾಗಲಿದೆ. ಏಕಬೆಳೆ ಪದ್ಧತಿ ಬದಲಾಗಿ ಬಹುಬೆಳೆ, ಮಿಶ್ರ ಬೆಳೆ ಹಾಗೂ ಅಂತರ ಬೆಳೆ ಪದ್ಧತಿ ಅನುಸರಿಸಿ ಹೆಚ್ಚಿನ ಲಾಭ ಪಡೆಯಬಹುದು.

ಸೂಕ್ತವಾದ ಸ್ಥಳಗಳಲ್ಲಿ ಬಸಿಗಾಲುವೆ ನಿರ್ಮಿಸಿ ಹೊಲಗದ್ದೆಗಳಲ್ಲಿ ನಿಂತ ನೀರನ್ನು ಆದಷ್ಟು ಬೇಗ ಬಸಿದು ಹೋಗುವ ವ್ಯವಸ್ಥೆ ಮಾಡಬೇಕು. ಅತಿಯಾದ ತೇವಾಂಶದಿಂದ ಬೇರುಗಳ ಉಸಿರಾಟದಲ್ಲಿ ವ್ಯತ್ಯಯವಾಗಿ ಪೋಷಕಾಂಶಗಳ ಅತಿಯಾದ ಸೋರಿಕೆಯಿಂದ ಬೆಳೆಗಳ ಎಲೆಗಳು ಹಳದಿಯಾಗುವುದರಿಂದ ನೀರಿನಲ್ಲಿ ಕರಗುವ 19:19:19 ಅನ್ನು 10 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ತೊಗರಿಯಲ್ಲಿ ಪೈಟೋಪ್ತರಾ ಮಚ್ಚೆರೋಗ ನಿರ್ವಹಣೆಗಾಗಿ ಮೆಟಲಾಕ್ಸಿಲ್ ಅನ್ನು 1 ಮಿ.ಲೀ, ಗೊಡ್ಡುರೋಗ ಹತೋಟಿಗಾಗಿ ವೆಟ್ಟೆಬಲ್ ಸಲ್ಫರ್2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಶುಂಠಿ ಬೆಳೆಯ ಗಡ್ಡೆ ಕೊಳೆ ರೋಗ ಬಾಧಿತ ಗಿಡಗಳನ್ನು ಕಿತ್ತೆಸೆದು ತಾಮ್ರದ ಆಕ್ಸಿ ಕ್ಲೋರೈಡ್ ಅನ್ನು ಪ್ರತಿ ಲೀಟರ್ ನೀರಿಗೆ 3 ಗ್ರಾಂ ಬೆರೆಸಿ ಸಿಂಪಡಿಸಬೇಕು. ಬೆಳೆಗಳನ್ನು ಏರು ಮಡಿ ಪದ್ಧತಿಯಲ್ಲಿ ಬೆಳೆಯಬೇಕು.

ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT