ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ | ಕರ್ತವ್ಯಲೋಪ ಎಸಗಿದ ಇನ್‌ಸ್ಪೆಕ್ಟರ್‌ಗಳ ವಿರುದ್ಧ ಶಿಸ್ತು ಕ್ರಮ: ಎಸ್‌ಪಿ

ಮತ ಎಣಿಕೆ ಕೇಂದ್ರದೊಳಗೆ ಶಾಸಕ ಶರಣು ಸಲಗರ್‌ ಪ್ರವೇಶ
Published 6 ಜೂನ್ 2024, 5:02 IST
Last Updated 6 ಜೂನ್ 2024, 5:02 IST
ಅಕ್ಷರ ಗಾತ್ರ

ಬೀದರ್‌: ಮತ ಎಣಿಕೆ ಕೇಂದ್ರದಲ್ಲಿ ಕರ್ತವ್ಯಲೋಪ ಎಸಗಿದ ಇಬ್ಬರು ಇನ್‌ಸ್ಪೆಕ್ಟರ್‌ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರು ಕಲಬುರಗಿ ವಲಯದ ಡಿ.ಐ.ಜಿ ಅವರಿಗೆ ಪತ್ರ ಬರೆದಿದ್ದಾರೆ.

ಬೀದರ್‌ ಸೈಬರ್‌ ಠಾಣೆಯ ಇನ್‌ಸ್ಪೆಕ್ಟರ್ ಶಿವಾನಂದ ಗಾಣಿಗೇರ್‌, ಧನ್ನೂರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ವಿಶ್ವರಾಧ್ಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಿಫಾರಸು ಮಾಡಿದ್ದಾರೆ.

ಆಗಿದ್ದೇನು?: ಬೀದರ್‌ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆದ ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನಲ್ಲಿ ಮಂಗಳವಾರ ಎರಡನೇ ಗೇಟ್‌ ಬಳಿ ಶಿವಾನಂದ ಹಾಗೂ ವಿಶ್ವರಾಧ್ಯ ಅವರನ್ನು ಕೆಲಸಕ್ಕೆ ನಿಯೋಜಿಸಲಾಗಿತ್ತು. ಆ ದ್ವಾರದಿಂದ ಮತ ಎಣಿಕೆ ಸಿಬ್ಬಂದಿ ಹಾಗೂ ಪತ್ರಕರ್ತರಿಗಷ್ಟೇ ತೆರಳಲು ಅವಕಾಶ ಕಲ್ಪಿಸಲಾಗಿತ್ತು. ಆಯಾ ಪಕ್ಷಗಳ ಅಭ್ಯರ್ಥಿಗಳಿಗೆ ಮುಖ್ಯ ಪ್ರವೇಶ ದ್ವಾರದಲ್ಲಿ ಹೋಗಿ ಬರಲು ಅನುವು ಮಾಡಲಾಗಿತ್ತು. ಆದರೆ, ಮಾಜಿ ಸಂಸದ ಭಗವಂತ ಖೂಬಾ ಅವರು ಮುಖ್ಯ ಪ್ರವೇಶ ದ್ವಾರದ ಬದಲು ಎರಡನೇ ಗೇಟ್‌ನಿಂದ ಅವರ ಕಾರಿನಲ್ಲಿ ಶಾಸಕ ಶರಣು ಸಲಗರ್‌ ಅವರನ್ನು ಮತ ಎಣಿಕೆ ಕೇಂದ್ರದೊಳಗೆ ಕರೆದೊಯ್ದಿದ್ದರು. ಪ್ರವೇಶ ದ್ವಾರದಲ್ಲಿದ್ದು ಪರಿಶೀಲಿಸಬೇಕಿದ್ದ ಇನ್‌ಸ್ಪೆಕ್ಟರ್‌ಗಳಾದ ಶಿವಾನಂದ ಹಾಗೂ ವಿಶ್ವರಾಧ್ಯ ಅವರು ಅಲ್ಲಿರಲಿಲ್ಲ. ವಿಷಯ ತಿಳಿದ ಎಸ್ಪಿಯವರು ಶರಣು ಸಲಗರ್‌ ಅವರನ್ನು ಕೇಂದ್ರದಿಂದ ಹೊರಗೆ ಕಳುಹಿಸಿಕೊಟ್ಟರು. ಇಬ್ಬರು ಇನ್‌ಸ್ಪೆಕ್ಟರ್‌ಗಳ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ ಎಸ್ಪಿಯವರು, ಆನಂತರ ಅವರ ವಿರುದ್ಧ ಕ್ರಮಕ್ಕೆ ಪತ್ರ ಬರೆದಿದ್ದಾರೆ.

ಅಭ್ಯರ್ಥಿಗಳು, ಆಯಾ ಪಕ್ಷಗಳ ಏಜೆಂಟರನ್ನು ಹೊರತುಪಡಿಸಿ ಶಾಸಕ, ಸಚಿವರಿಗೆ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶ ಇರಲಿಲ್ಲ. ಹೀಗಾಗಿಯೇ ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್‌ ಅವರು ಮತ ಎಣಿಕೆ ಮುಗಿದು, ಫಲಿತಾಂಶ ಘೋಷಿಸಿದ ಬಳಿಕವಷ್ಟೇ ಅಲ್ಲಿಗೆ ಬಂದಿದ್ದರು. ಆದರೆ, ಇನ್‌ಸ್ಪೆಕ್ಟರ್‌ಗಳ ಕರ್ತವ್ಯ ಲೋಪದಿಂದ ಶಾಸಕ ಶರಣು ಸಲಗರ್‌ ಅವರು ಕೇಂದ್ರದೊಳಗೆ ಪ್ರವೇಶಿಸಿದ್ದರು. ಇದನ್ನು ಎಸ್ಪಿ ಗಂಭೀರವಾಗಿ ತೆಗೆದುಕೊಂಡು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT