ಗುರುವಾರ , ಸೆಪ್ಟೆಂಬರ್ 23, 2021
22 °C
ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹೇಳಿಕೆ

ನಾಳೆ ಮಂದಿರಗಳಲ್ಲಿ ವಿಶೇಷ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಯುಕ್ತ ಆಗಸ್ಟ್ 5 ರಂದು ಬೆಳಿಗ್ಗೆ ಜಿಲ್ಲೆಯ ಮಂದಿರಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ತಿಳಿಸಿದೆ.

ನಗರದ ಹೈದರಾಬಾದ್‌ ರಸ್ತೆಯಲ್ಲಿರುವ ಹನುಮಾನ ಮಂದಿರದಲ್ಲಿ ಬುಧವಾರ ಬೆಳಿಗ್ಗೆ 11.30ಕ್ಕೆ ಅಯೋಧ್ಯೆಯಲ್ಲಿ ಶಿಲನ್ಯಾಸದ ನಿಮಿತ್ತ ಪೂಜೆಯನ್ನು ಆಯೋಜಿಸಲಾಗಿದೆ. ನಂತರ ಮಧ್ಯಾಹ್ನ 1 ಗಂಟೆಗೆ ಭಕ್ತರು ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಮಡಿವಾಳೇಶ್ವರ ವೃತ್ತಗಳಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಿದ್ದಾರೆ. ಸಂಜೆ 5 ರಿಂದ 7 ಗಂಟೆಯ ವರೆಗೆ ದೀಪೋತ್ಸವ ನಡೆಯಲಿದೆ.

ನಗರದ ವಿದ್ಯಾನಗರ ಕಾಲೊನಿ, ಕುಂಬಾರವಾಡ, ಹಳ್ಳದಕೇರಿ, ಮೈಲೂರ್. ಬೀದರ್‌ ತಾಲ್ಲೂಕಿನ ಯದಲಾಪುರ, ರೇಕುಳಗಿ, ವಾಲದೊಡ್ಡಿ. ದದ್ದಾಪುರ, ಚಿಟ್ಟಾ, ಘೋಡಂಪಳ್ಳಿ, ಮರಖಲ್ ಹಾಗೂ ಅಲಿಯಂಬರ್‌ದಲ್ಲಿ ವಿಶೇಷ ಪೂಜೆ ಪೂಜೆ ಹಾಗೂ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಬಜರಂಗ ದಳದ ಜಿಲ್ಲಾ ಸಂಯೋಜಕ ಸುನೀಲ ದಳವೆ
ಹಾಗೂ ವಿಶ್ವ ಹಿಂದೂಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಸತೀಶ ನೌಬಾದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿಯಿಂದಲೂ ವಿಶೇಷ ಪೂಜೆ

ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಯುಕ್ತ ಆಗಸ್ಟ್ 5 ರಂದು ನಗರದ 11 ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಲಾಗುವುದು ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ ತಿಳಿಸಿದ್ದಾರೆ.

ಮುಖಂಡರಾದ ಬಾಬುವಾಲಿ, ಈಶ್ವರ ಸಿಂಗ್ ಠಾಕೂರ್ ಹಾಗೂ ಅಶೋಕ ಹೊಕ್ರಾಣೆ ಅವರ ಮಾರ್ಗದರ್ಶನದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ರಾಮಮಂದಿರ, ಶಹಾಗಂಜ್ ಹನುಮಾನ ಮಂದಿರ, ಕ್ರಾಂತಿ ಗಣೇಶ, ವನವಾಸಿ ರಾಮ ಮಂದಿರ, ವಿದ್ಯಾನಗರ ರಾಮ ಮಂದಿರ, ಶಿವನಗರ ಹನುಮಾನ ಮಂದಿರ, ಹೌಸಿಂಗ್ ಬೋರ್ಡ್ ಶಿವ ಮಂದಿರ, ಗಣೇಶ ಮೈದಾನ, ರಾಮ ಚೌಕ್, ಮಂಗಲಪೇಟ್ ಮಡಿವಾಳ ಮಂದಿರ, ಸಿದ್ಧಾರೂಢ ಮಠ ಹಾಗೂ ದೇವಿ ಮಂದಿರಗಳಲ್ಲಿ ಪಕ್ಷದ ಪ್ರಮುಖರು ಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಅಂದು ಹಿಂದೂಗಳು ದೇವಸ್ಥಾನಗಳಿಗೆ ಕೇಸರಿ ಧ್ವಜ ಕಟ್ಟಿ, ದೀಪಾಲಂಕಾರ ಮಾಡಿ, ಪೂಜೆ ನೆರವೇರಿಸಿ ಸಿಹಿ ಹಂಚಿ ಹಬ್ಬದ ರೀತಿಯಲ್ಲಿ ಸಂಭ್ರಮ ಆಚರಿಸಬೇಕು. ಮನೆಗಳ ಮೇಲೆ ಕೇಸರಿ ಧ್ವಜ ಹಾರಿಸಬೇಕು. ಶ್ರೀರಾಮ, ಹನುಮಾನ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು