ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಕ್ಷ್ಮಿಯ ವಿಶೇಷ ಪೂಜೆ

ರಂಗೋಲಿ ಚಿತ್ತಾರ, ತಳಿರುತೋರಣ ಶೃಂಗಾರ
Last Updated 4 ನವೆಂಬರ್ 2021, 12:05 IST
ಅಕ್ಷರ ಗಾತ್ರ

ಬೀದರ್‌: ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಜಿಲ್ಲೆಯಲ್ಲಿ ಗುರುವಾರ ಮನೆ ಮನೆಗಳಲ್ಲಿ ಮಹಾಲಕ್ಷ್ಮಿಯ ವಿಶೇಷ ಪೂಜೆ ನಡೆಯಿತು. ದೇವಿ ಮಂದಿರಗಳಲ್ಲೂ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಹಿಳೆಯರು ಬೆಳಿಗ್ಗೆಯೇ ಮನೆಯಂಗಳ ಸ್ವಚ್ಛಗೊಳಿಸಿ ಆಕರ್ಷಕ ರಂಗೋಲಿಗಳನ್ನು ಹಾಕಿದರು. ನಿತ್ಯ ಚುಕ್ಕೆ ರಂಗೋಲಿ ಹಾಕುತ್ತಿದ್ದ ಅನೇಕ ಮಹಿಳೆಯರು ಬಣ್ಣದ ಹಾಗೂ ಬೃಹದಾಕಾರದ ರಂಗೋಲಿಗಳನ್ನು ಬಿಡಿಸಿ ಮನೆಯ ಆವರಣಕ್ಕೆ ಅಂದದ ರೂಪ ನೀಡಿದರು. ಮಕ್ಕಳು ಸಹ ತಾಯಂದಿರೊಂದಿಗೆ ಬಗೆ ಬಗೆಯ ಅಚ್ಚುಗಳಲ್ಲಿ ರಂಗೋಲಿಗಳನ್ನು ಮೂಡಿಸಿ ಸಂಭ್ರಮಿಸಿದರು.

ಸಂಜೆ ಮನೆಗಳ ಮುಂದೆ ಸಾಲು ಸಾಲಾಗಿ ಹಣತೆಗಳನ್ನು ಇಟ್ಟು ಎಣ್ಣೆ ಸುರಿದು ದೀಪ ಬೆಳಗಿದರು. ಯುವಕರು ತಮ್ಮ ಮನೆಗಳ ಮುಂಭಾಗದಲ್ಲಿ ಅಲಂಕಾರಿಕ ವಿದ್ಯುತ್‌ ದೀಪಗಳ ಸರಗಳನ್ನು ತೂಗು ಹಾಕಿ ಹಬ್ಬದ ಸಂಭ್ರಮ ಹೆಚ್ಚಿಸಿದರು.

ಮನೆಗಳಲ್ಲಿ ಕೊಡಗಳಲ್ಲಿ ನೀರು ತುಂಬಿ ಅದರ ಮೇಲೆ ತೆಂಗಿನ ಕಾಯಿ ವೀಳ್ಯದೆಲೆ ಇಟ್ಟು ಮಹಾಲಕ್ಷ್ಮಿಯ ಮುಖವಾಡ ಇಟ್ಟು ಮಹಾಲಕ್ಷ್ಮಿದೇವಿ ಪ್ರತಿಷ್ಠಾಪಿಸಿದರು. ಕಬ್ಬು, ಬಾಳೆ ಗಿಡ ಹಾಗೂ ಚೆಂಡು ಹೂವಿನ ಗಿಡಗಳನ್ನು ಇಟ್ಟು ಅಲಂಕರಿಸಿದರು. ಕುಟುಂಬದ ಸದಸ್ಯರೆಲ್ಲ ಸೇರಿ ಸಾಮೂಹಿಕವಾಗಿ ಆರತಿ ಬೆಳಗಿ ಪೂಜೆ ಮಾಡಿದರು.

ಮಕ್ಕಳು, ಮಹಿಳೆಯರು ಹಾಗೂ ಪುರುಷರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಕ್ಕಳು ಸುರ್‌ ಸುರ್‌ ಬತ್ತಿ ಹಾಗೂ ಬೆಂಕಿ ಚಕ್ರ ಉರಿಸಿ ಕೇಕೆ ಹಾಕಿ ಖುಷಿ ಪಟ್ಟರು. ಹಿರಿಯರೂ ಅವರಿಗೆ ಸಾಥ್‌ ನೀಡಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದರು.
ಕಳೆದ ವರ್ಷ ಆದಾಯ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ವ್ಯಾಪಾರಸ್ಥರು ಈ ವರ್ಷ ಸಂಭ್ರಮದಿಂದ ಹಬ್ಬ ಆಚರಿಸಿದರು. ಕಷ್ಟಗಳನ್ನು ದೂರ ಮಾಡಿ ಸುಖ, ಶಾಂತಿ ನೆಲೆಸುವಂತೆ ದೇವರಲ್ಲಿ ಪ್ರಾರ್ಥಿಸಿದರು.
ಮನೆಯಂಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಪಾಂಡವರ ಪ್ರತಿಮೆಗಳಿಗೆ ಪೂಜೆ ಸಲ್ಲಿಸಿದರು. ಶುಕ್ರವಾರ ವಿಸರ್ಜನೆ ಮಾಡಿ ಮನೆಯ ಮಾಳಿಗೆ ಮೇಲೆ ಇಡಲಿದ್ದಾರೆ.

ಮಿಠಾಯಿಗಳ ಮಾರಾಟ:

ಮಿಠಾಯಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ. ಮೋಹನ್‌ ಮಾರ್ಕೆಟ್‌ನಲ್ಲಿರುವ ಅನೇಕ ಮಿಠಾಯಿ ಅಂಗಡಿಗಳ ಮುಂದೆ ಗ್ರಾಹಕರ ಸಾಲು ಕಂಡು ಬಂದಿತು.

ಅನೇಕ ಜನ ಬಾಲುಶಾ, ಪೇಢೆ, ಬೂಂದಿ, ಮೈಸೂರ ಪಾಕ್‌, ಖಾರಾ, ಸೇವು ಹಾಗೂ ಗರಿಗರಿ ಚಕ್ಕಲಿ ಖರೀದಿಸಿದರು. ಕೆಲವರು ಮಿಠಾಯಿ ಪೊಟ್ಟಣಗಳನ್ನೇ ಖರೀದಿಸಿ ಗೆಳೆಯರಿಗೆ ಹಾಗೂ ಕಚೇರಿ ಸಿಬ್ಬಂದಿಗೆ ಉಡುಗೊರೆಯಾಗಿ ನೀಡಿದರು.
ನಗರದ ಅಂಬೇಡ್ಕರ್‌ ವೃತ್ತ, ಭಗತ್‌ಸಿಂಗ್‌ ವೃತ್ತ, ರೋಟರಿ ವೃತ್ತ, ಹಾರೂರಗೇರಿ ಕಮಾನ್‌, ಮೈಲೂರ್‌ ಕ್ರಾಸ್‌ ಹಾಗೂ ನೌಬಾದ್‌ನ ಬಸವೇಶ್ವರ ವೃತ್ತದಲ್ಲಿ ಕಬ್ಬು ಹಾಗೂ ಹೂವಿನ ವ್ಯಾಪಾರ ಭರ್ಜರಿಯಾಗಿ ನಡೆಯಿತು.


ಇಂದು ಬಲಿಪಾಡ್ಯಮಿ:

ಮಾರಾಟ ಮಳಿಗೆ, ಕಿರಾಣಿ ಅಂಗಡಿ, ಬಟ್ಟೆ ಅಂಗಡಿ ಹಾಗೂ ಎಲೆಕ್ಟ್ರಾನಿಕ್‌ ಅಂಗಡಿಗಳಲ್ಲಿ ಶುಕ್ರವಾರ ಬಲಿಪಾಡ್ಯಮಿ ಪೂಜೆ ಆಯೋಜಿಸಲಾಗಿದೆ. ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಅಂಗಡಿಗಳ ಮಾಲೀಕರು ಪ್ರಸಾದ ವ್ಯವಸ್ಥೆ ಸಹ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT