ಬಸವಕಲ್ಯಾಣ: ‘ಎಷ್ಟೇ ದೊಡ್ಡ ಕಟ್ಟಡಗಳನ್ನು ನಿರ್ಮಿಸಲಿ, ಆರ್ಥಿಕವಾಗಿ ಎಷ್ಟೇ ಮುಂದುವರೆದರೂ ಶೈಕ್ಷಣಿಕವಾಗಿ ಸುಧಾರಣೆಯಾದರೆ ಮಾತ್ರ ತಾಲ್ಲೂಕಿಗೆ ಗೌರವ ದೊರಕುತ್ತದೆ’ ಎಂದು ಶಾಸಕ ಶರಣು ಸಲಗರ ಹೇಳಿದರು.
ಶಿಕ್ಷಣ ಇಲಾಖೆಯಿಂದ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಸಿದ್ಧತೆ ಹಾಗೂ ಮುಖ್ಯ ಅಧೀಕ್ಷಕರ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
‘ಎಸ್ಸೆಸ್ಸೆಲ್ಸಿಯಲ್ಲಿ ಕಳೆದ ಸಲ ಉತ್ತಮ ಫಲಿತಾಂಶ ಬಂದಿತ್ತು. ಅದರಂತೆ ಈ ಸಲವೂ ಕೋವಿಡ್ ಕಾರಣ ಏನೇ ತೊಂದರೆ ಆಗಿದ್ದರೂ ಅದಕ್ಕಿಂತ ಒಳ್ಳೆಯ ಫಲಿತಾಂಶ ಬರುತ್ತದೆ ಎಂಬ ಭರವಸೆ ಇದೆ. ಶಿಕ್ಷಕರು ಇನ್ನಷ್ಟು ಶ್ರಮ ಪಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು. ಇಲ್ಲದಿದ್ದರೆ ತಾಲ್ಲೂಕಿನ ಗಡಿಗೆ ಹೊಂದಿಕೊಂಡಿರುವ ಆಂಧ್ರ, ಮಹಾರಾಷ್ಟ್ರಕ್ಕೆ ಗುಳೆ ಹೋಗುವ ಯುವಕರನ್ನು ನಾವು ತಯಾರಿಸಿದಂತಾಗುತ್ತದೆ’ ಎಂದರು.
‘ಶಾಲೆಗಳ ಪರಿಸರ ಸುಂದರವಾಗಿಡಬೇಕು. ಶಾಲೆಗಳ ಆವರಣದಲ್ಲಿ ಯಾರೇ ಬಂದು ನಿಂತರೂ ಶಾಲೆಯ ಬಗ್ಗೆ ಉತ್ತಮ ಭಾವನೆ ಮೂಡುವಂತಾಗಬೇಕು. ಆದ್ದರಿಂದ ಪ್ರತಿ ಶಾಲೆಯಲ್ಲಿ ಸಸಿ ನೆಡಬೇಕು’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಮಾತನಾಡಿ, ‘ಕೋವಿಡ್ ಕಾರಣ ತರಗತಿಗಳು ನಿಯಮಿತವಾಗಿ ನಡೆದಿಲ್ಲ. ಬರೀ ಆನ್‌ಲೈನ್ ಮೂಲಕ ಪಾಠಬೋಧನೆ ನಡೆದಿದೆ. ಅಲ್ಲದೆ, ಕೋವಿಡ್ ಮೂರನೇ ಅಲೆ ಬರುತ್ತದೆ ಎಂಬ ಅನುಮಾನವಿರುವ ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೀ ಎರಡು ದಿನ ಮಾತ್ರ ನಿಗದಿಗೊಳಿಸಲಾಗಿದೆ. ಪ್ರಶ್ನೆ ಪತ್ರಿಕೆಯಲ್ಲೂ ಬದಲಾವಣೆ ಆಗಲಿದೆ’ ಎಂದರು.
‘ಸುರಕ್ಷಿತ ಅಂತರ ಕಾಪಾಡುವ ಉದ್ದೇಶದಿಂದ ವಿದ್ಯಾರ್ಥಿಗಳನ್ನು ದೂರದೂರಕ್ಕೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ 19ರಷ್ಟಿದ್ದ ಪರೀಕ್ಷಾ ಕೇಂದ್ರಗಳ ಸಂಖ್ಯೆ 32ಕ್ಕೆ ಹೆಚ್ಚಿದೆ. ಶಿಕ್ಷಕರನ್ನು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ’ ಎಂದರು.
ಹುಲಸೂರ ಕ್ಷೇತ್ರ ಶಿಕ್ಷಣಾಧಿಕಾರಿ ಸಂಜಯಕುಮಾರ ಕಾಂಗೆ, ತಹಶೀಲ್ದಾರ್ ಸಾವಿತ್ರಿ ಸಲಗರ, ನೋಡಲ್ ಅಧಿಕಾರಿ ಸೂರ್ಯಕಾಂತ ಬೇಲೂರೆ, ರವೀಂದ್ರ ಬಿರಾದಾರ ಮಾತನಾಡಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಹಿಪಾಲರೆಡ್ಡಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಪಾಟೀಲ, ಸಿಪಿಐ ಜೆ.ಎಸ್.ನ್ಯಾಮಗೌಡ, ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ರಾಜಕುಮಾರ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.