ಗುರುವಾರ , ಅಕ್ಟೋಬರ್ 22, 2020
22 °C
ಮೂರು ವರ್ಷಗಳಿಂದ ಕ್ರೀಡಾ ಚಟುವಟಿಕೆಗಳಿಗೆ ಹಿನ್ನಡೆ

ಬೀದರ್‌ | ಪಾಳು ಬಿದ್ದ ಕ್ರೀಡಾಂಗಣಗಳು: ಗೋಳು ಕೇಳುವವರಿಲ್ಲ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿರುವ ಕ್ರೀಡಾಂಗಣಗಳ ಸ್ಥಿತಿ ನೋಡಿದರೆ ನಿಜಕ್ಕೂ ಮರುಕ ಹುಟ್ಟಿಸುತ್ತದೆ. ಜಿಲ್ಲಾ ಕೇಂದ್ರದಲ್ಲೇ ಹೊಸ ಕ್ರೀಡಾಂಗಣ ಪಾಳು ಬಿದ್ದರೂ ಕೇಳುವವರಿಲ್ಲ. ತಾಲ್ಲೂಕು ಕೇಂದ್ರಗಳಲ್ಲಿರುವ ಕ್ರೀಡಾಂಗಣಗಳ ಸ್ಥಿತಿಯೂ ಶೋಚನೀಯವಾಗಿದೆ.

ಮೈದಾನದ ಸುತ್ತಲೂ ವೃತ್ತಾಕಾರದಲ್ಲಿ ನಿರ್ಮಿಸಿದ್ದ ನೆಹರು ಕ್ರೀಡಾಂಗಣದಲ್ಲಿನ ಪ್ರೇಕ್ಷಕರ ಗ್ಯಾಲರಿ ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಯೋಗ್ಯವಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಯಾಗಿದ್ದ ದಿ.ಅನುರಾಗ ತಿವಾರಿ ಅವರು ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗೆ ಮನವರಿಕೆ ಮಾಡಿ ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ತರುವಲ್ಲಿ ಯಶ ಕಂಡಿದ್ದರು. 2016ರಲ್ಲಿ ಹಳೆಯದಾದ ಕ್ರೀಡಾಂಗಣದ ಗ್ಯಾಲರಿಯನ್ನು ನೆಲಸಮಗೊಳಿಸಲಾಯಿತು. ಆದರೆ ಕಾಮಗಾರಿ ವೇಗ ಪಡೆದುಕೊಳ್ಳಲಿಲ್ಲ.

ಪೊಲೀಸ್‌ ಹೌಸಿಂಗ್‌ ಕಾರ್ಪೋರೇಷನ್‌ ಮೂಲಕ ಹೊಸ ಕ್ರೀಡಾಂಗಣ ನಿರ್ಮಿಸಲಾಗಿದೆ. ಒಪ್ಪಂದದ ಪ್ರಕಾರ 2019ರಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಕ್ರೀಡಾಂಗಣದ ವಿನ್ಯಾಸಕ್ಕೆ ಕ್ರೀಡಾಪಟುಗಳಿಂದ ಆಕ್ಷೇಪ ವ್ಯಕ್ತವಾದ್ದರಿಂದ ತೊಡಕು ಉಂಟಾಯಿತು. ಕ್ರೀಡಾಂಗಣಕ್ಕೆ ನಾಲ್ಕು ಕಡೆ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ನಾಲ್ಕು ಕಡೆ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಿದರೂ ಮೊದಲಿದ್ದ ಗ್ಯಾಲರಿಗಿಂತ ಈಗಿನ ಗ್ಯಾಲರಿ ವಿಸ್ತಾರ ಕಡಿಮೆ ಮಾಡಲಾಗಿದೆ. ಕ್ರೀಡಾಂಗಣ ಅಂದ ಕಳೆದುಕೊಂಡಿದೆ. ಕ್ರೀಡಾಂಗಣದಲ್ಲಿ ಎದೆ ಮಟ್ಟದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. 

ಮೂರು ವರ್ಷಗಳಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ದಸರಾ ಕ್ರೀಡಾಕೂಟ, ಸರ್ಕಾರಿ ನೌಕರರ ಕ್ರೀಡಾಕೂಟಗಳು ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿಯೇ ನಡೆದಿವೆ. ಒಂದು ವರ್ಷ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯೂ ಖಾಲಿ ಇತ್ತು. 

ನೆಹರು ಕ್ರೀಡಾಂಗಣದ ಮೇಲ್ಮಹಡಿಯ ನವೀಕರಣಕ್ಕಾಗಿ ಕ್ರೀಡಾ ಹಾಸ್ಟೆಲ್‌ನ್ನೂ ತೆರವುಗೊಳಿಸಲಾಗಿದೆ. ಟೇಬಲ್‌ ಟೆನಿಸ್‌ ಹಾಲ್‌ನಲ್ಲಿ ಮಕ್ಕಳು ಮೂರು ವರ್ಷ ವಾಸ್ತವ್ಯ ಮಾಡಿದ್ದಾರೆ. ಕ್ರೀಡಾಪಟುಗಳ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲ. ನಾಲ್ಕು ವರ್ಷಗಳ ಅವಧಿಯಲ್ಲಿ ಒಬ್ಬ ಜಿಲ್ಲಾಧಿಕಾರಿಯೂ ಕ್ರೀಡಾಂಗಣಕ್ಕೆ ಭೇಟಿಕೊಟ್ಟು ಕ್ರೀಡಾ‍ಪಟುಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿಲ್ಲ ಎಂದು ಕ್ರೀಡಾಪಟು ಬೇಸರ ವ್ಯಕ್ತಪಡಿಸುತ್ತಾರೆ.

ಎಂಟು ವರ್ಷಗಳ ನಂತರ ಹಿಂದಿನ ಸರ್ಕಾರದಲ್ಲಿ ಜಿಲ್ಲೆಯ ಮೂವರು ಶಾಸಕರು ಸಚಿವರಾಗಿದ್ದರು. ಬೀದರ್‌ ಶಾಸಕ ರಹೀಂ ಖಾನ್‌ ಕ್ರೀಡಾ ಸಚಿವರಾಗಿದ್ದರೂ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಅನುಕೂಲವಾಗಲಿಲ್ಲ. ನಂತರ ಸರ್ಕಾರವೂ ಪತನವಾಯಿತು. ಬಿಜೆಪಿ ಸರ್ಕಾರ ಬಂದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ಕ್ರೀಡಾಂಗಣ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಒಂದೇ ಒಂದು ಸಭೆ ನಡೆಸಿಲ್ಲ ಎಂದು ನೋವಿನಿಂದ ನುಡಿಯುತ್ತಾರೆ ಕ್ರೀಡಾಪಟುಗಳು.

‘ಮೂರು ವರ್ಷಗಳ ಅವಧಿಯಲ್ಲಿ ಕ್ರೀಡೆಗಳು ಸತ್ತಿವೆ. ಕ್ರೀಡಾಪಟುಗಳು ಬೀದಿ ಪಾಲಾಗಿದ್ದಾರೆ. ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹಿನ್ನಡೆಯಾಗಲು ರಾಜಕಾರಣಿಗಳು ಅಷ್ಟೇ ಅಲ್ಲ; ಜಿಲ್ಲೆಯ ಅಧಿಕಾರಿಗಳು ಸಹ ಕಾರಣರಾಗಿದ್ದಾರೆ’ ಎಂದು ಬೀದರ್‌ ಕ್ರಿಕೆಟ್‌ ಕಂಟ್ರೋಲ್ ಅಸೋಸಿಯೇಷನ್‌ ಕಾರ್ಯದರ್ಶಿ ಅನಿಲ ದೇಶಮುಖ ಬೇಸರದಿಂದ ಹೇಳುತ್ತಾರೆ.

‘ನೆಹರು ಕ್ರೀಡಾಂಗಣದಲ್ಲಿನ ಹಾಕಿ, ವಾಲಿಬಾಲ್‌ ಕೋರ್ಟ್‌ ತೆರವುಗೊಳಿಸಲಾಗಿದೆ. ಮೂರು ವರ್ಷಗಳಿಂದ ಯಾವುದೇ ಕ್ರೀಡಾ ಚಟುವಟಿಕೆಗಳು ನಡೆದಿಲ್ಲ. ಟೇಬಲ್‌ ಟೆನಿಸ್‌ ಹಾಲ್‌ ಕ್ರೀಡಾ ಹಾಸ್ಟೆಲ್‌ ಆಗಿ ಪರಿವರ್ತನೆಯಾಗಿದೆ. ಮಕ್ಕಳು ಇಲ್ಲಿಯೇ ಮಲಗುತ್ತಿದ್ದರು. ಈ ವರ್ಷ ಕೋವಿಡ್‌ ಕಾರಣದಿಂದ ಕ್ರೀಡಾ ಚಟುವಟಿಕೆ ನಡೆದಿಲ್ಲ. ಆದರೆ, ಕಾಮಗಾರಿಗಳನ್ನು ಪೂರ್ಣಗೊಳಿಸಬಹುದಿತ್ತು. ಕ್ರೀಡಾಂಗಣ ಕಾಮಗಾರಿ ಸಂಪೂರ್ಣ ತೆವಳುತ್ತ ಸಾಗಿದೆ’ ಎನ್ನುತ್ತಾರೆ ವೀಕ್‌ಎಂಡ್‌ ರಿಕ್ರಿಯೇಷನ್‌ ಕ್ಲಬ್‌ ಅಧ್ಯಕ್ಷ ಸುನೀಲ್‌ ಮೊಟ್ಟಿ.

ಗುತ್ತಿಗೆದಾರರು ಸಮಪರ್ಕವಾಗಿ ಕೆಲಸ ಮಾಡಿಲ್ಲ ಎಂದು ಕ್ರೀಡಾ ಇಲಾಖೆಯ ಅಧಿಕಾರಿಗಳು ಹೇಳಿದರೆ, ಕಾಮಗಾರಿ ಪೂರ್ಣಗೊಳಿಸಿದರೂ ಅಧಿಕಾರಿಗಳು ಹಣ ಪಾವತಿಸುತ್ತಿಲ್ಲ ಎಂದು ಗುತ್ತಿಗೆದಾರ ಕಂಪನಿಯ ಸಿಬ್ಬಂದಿ ಹೇಳುತ್ತಾರೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮುಸುಕಿನ ಗುದ್ದಾಟದಿಂದಾಗಿ ಕ್ರೀಡಾಪಟುಗಳು ತೊಂದರೆ ಅನುಭವಿಸುತ್ತಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ ಅತ್ಯಾಧುನಿಕ ಕ್ರೀಡಾಂಗಣ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿತ್ತು. ಕ್ರೀಡಾಂಗಣದಲ್ಲಿ ಫುಟ್‌ಬಾಲ್‌, ಹಾಕಿ, ಅಥ್ಲೆಟಿಕ್‌ ಟ್ರ್ಯಾಕ್, ಹೊರ ಆವರಣದಲ್ಲಿ ವಾಲಿಬಾಲ್‌, ಲಾನ್ ಟೆನಿಸ್‌, ಬ್ಯಾಸ್ಕೆಟ್‌ಬಾಲ್‌ ಸೇರಿದಂತೆ ಕಬಡ್ಡಿ, ಕೊಕ್ಕೊಗೂ ಅಂಗಣ ನಿರ್ಮಾಣ ಮಾಡುವ ಯೋಜನೆ ಇತ್ತು. ಮೂರು ವರ್ಷಗಳಲ್ಲಿ ಯೋಜನೆಯ ಲೆಕ್ಕಾಚಾರವೇ ಬುಡಮೇಲಾಗಿದೆ.

‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಗುತ್ತಿಗೆದಾರರಿಗೆ ₹ 80 ಲಕ್ಷ ಪಾವತಿಯಾಗಬೇಕಿತ್ತು. ಕೆಲ ಕಾಮಗಾರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಹಿಂದಿನ ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ಅವರು ಪೊಲೀಸ್‌ ಹೌಸಿಂಗ್‌ ಕಾರ್ಪೋರೇಷನ್‌ಗೆ ಪತ್ರಬರೆದಿದ್ದರು. ಇದೀಗ ಬಹುತೇಕ ಎಲ್ಲ ಸಮಸ್ಯೆಗಳು ಬಗೆ ಹರಿದಿವೆ. ಒಂದು ತಿಂಗಳಲ್ಲಿ ನೆಹರು ಕ್ರೀಡಾಂಗಣ ಕ್ರೀಡಾ ಚಟುವಟಿಕೆಗಳಿಗೆ ಮುಕ್ತವಾಗಲಿದೆ‘ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ ನಾಡಿಗೇರ ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಭಾಲ್ಕಿ ಹಾಗೂ ಮೂರು ಹೊಸ ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣಕ್ಕೆ ಜಾಗ ಒದಗಿಸುವಂತೆ ಕಂದಾಯ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳುತ್ತಾರೆ.

ಬೇಸಿಗೆಯಲ್ಲಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯೇ ಖಾಲಿ ಇತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂದೆ ಅವರಿಗೆ ಕ್ರೀಡಾ ಇಲಾಖೆಯ ಹೆಚ್ಚುವರಿ ಹೊಣೆ ವಹಿಸಲಾಗಿತ್ತು. ಎರಡು ತಿಂಗಳ ಹಿಂದೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ರಾಜೇಶ ನಾಡಿಗೇರ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಕ್ರೀಡಾಂಗಣವನ್ನು ಕ್ರೀಡಾಪಟುಗಳಿಗೆ ಮುಕ್ತಗೊಳಿಸುವ ಪ್ರಯತ್ನ ಕಡತಗಳಲ್ಲೇ ಉಳಿದುಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು