ಬೀದರ್: ‘ಪಟ್ಟಭದ್ರ ಹಿತಾಸಕ್ತಿಗಳಿಂದ ವಚನ ಸಾಹಿತ್ಯ ರಕ್ಷಿಸಲು ದೊಡ್ಡ ಮಟ್ಟದ ಜನಾಂದೋಲನ ನಡೆಸಬೇಕಾದ ಅಗತ್ಯವಿದೆ’ ಎಂದು ಸಾಹಿತಿ ಜೆ.ಎಸ್. ಪಾಟೀಲ ಅಭಿಪ್ರಾಯ ಪಟ್ಟರು.

ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ರಾಜ್ಯ ಹಾಗೂ ಜಿಲ್ಲಾ ಘಟಕದಿಂದ ನಗರದ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಐದನೇ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಶರಣ ಸಂಸ್ಕೃತಿ, ವಚನ ಸಾಹಿತ್ಯ ನಾಶಗೊಳಿಸುವ ಹುನ್ನಾರ ನಿರಂತರವಾಗಿ ನಡೆಸಲಾಗುತ್ತಿದೆ. ವಚನ ಸಾಹಿತ್ಯವನ್ನು ಮಲೀನಗೊಳಿಸುವ ಉದ್ದೇಶದಿಂದಲೇ ‘ವಚನ ದರ್ಶನ’ ಎಂಬ ಕೊಳಕು ಪುಸ್ತಕವನ್ನು ಪ್ರಕಟಿಸಲಾಗಿದೆ. ಇಂತಹ ಶಕ್ತಿಗಳ ವಿರುದ್ಧ ವಚನ ಸಾಹಿತ್ಯ ಪರಿಷತ್ತು ರಾಜ್ಯದಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಿ, ವಚನ ಸಾಹಿತ್ಯದ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಬಸವ ಪ್ರಜ್ಞೆ ಜಾಗೃತಗೊಳಿಸಲು ನಿರಂತರ ಕಾರ್ಯಕ್ರಮಗಳು ನಡೆಯುತ್ತಿರಬೇಕು. ವಚನ ದ್ವೇಷಿ, ಬಸವ ದ್ವೇಷಿಗಳಿಗೆ ಉತ್ತರ ಕೊಡಬೇಕಾದರೆ ವರ್ಗ ರಹಿತ ಸಮಾಜ, ಸಾಮಾಜಿಕ ಸಮಾನತೆ, ಧಾರ್ಮಿಕ ಸಮಾನತೆಯ ವಚನಗಳ ದರ್ಶನವನ್ನು ಜನಮಾನಸಕ್ಕೆ ಮುಟ್ಟಿಸಿ ಜಾಗೃತಗೊಳಿಸಬೇಕು. ಪಟ್ಟಭದ್ರರಿಗೆ ಈ ಮೂಲಕ ಉತ್ತರ ಕೊಡಬೇಕು ಎಂದು ಹೇಳಿದರು.

ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲೇ ಸಂಪ್ರದಾಯವಾದಿಗಳು ವಚನ ಸಾಹಿತ್ಯವನ್ನು ನಾಶಪಡಿಸಲು ಯತ್ನಿಸಿದರು. ವಚನ ಕ್ರಾಂತಿಗೆ ಪ್ರತಿಯಾಗಿ ವೈದಿಕ ಕ್ರಾಂತಿ ನಡೆಸಿ ವಚನಗಳಿಗೆ ಬೆಂಕಿ ಹಚ್ಚಲು ಯತ್ನಿಸಿದರು. ಶರಣರ ಕಗ್ಗೊಲೆ ಮಾಡಿದರು. ಆದರೆ, ಶರಣರು ಜೀವಕ್ಕಿಂತ ವಚನಗಳಿಗೆ ಪ್ರಾಮುಖ್ಯತೆ ಕೊಟ್ಟು ರಕ್ಷಿಸಿದರು. ಸುಮಾರು ಎರಡು ಶತಮಾನ ಅದು ಭೂಗತವಾಗಿತ್ತು ಎಂದು ಇತಿಹಾಸ ನೆನಪಿಸಿದರು.

1420ರಲ್ಲಿ ವಿಜಯನಗರ ಅರಸರ ಕಾಲದಲ್ಲಿ ವಚನ ಸಾಹಿತ್ಯ ಪುನರುತ್ಥಾನಗೊಂಡಿತ್ತು. ಪ್ರೌಢದೇವರಾಯ, ಮಲ್ಲಿಕಾರ್ಜುನ ಮತ್ತು ವಿರೂಪಾಕ್ಷ ಎಂಬ ಅರಸರು ಅದಕ್ಕಾಗಿ ಶ್ರಮಿಸಿದರು. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಪ್ರೌಢದೇವರಾಯನ ಆಸ್ಥಾನದೊಳಗೆ ನುಸುಳಿ ವಚನಗಳನ್ನು ಪ್ರಕ್ಷುಪ್ತಗೊಳಿಸಲು ಹುನ್ನಾರ ನಡೆಸುತ್ತಾರೆ. ವ್ಯವಸ್ಥಿತವಾಗಿ ವೀರಶೈವ ಹಾಗೂ ಸಂಸ್ಕೃತದ ಅನೇಕ ಪದಗಳನ್ನು ಸೇರಿಸುತ್ತಾರೆ. ವಚನಗಳ ಶುದ್ಧೀಕರಣ ಆಗಬೇಕಾದ ತುರ್ತು ಈಗಿದೆ ಎಂದರು.

ಆನಂತರ 1920ರಿಂದ 30ರ ವರೆಗೆ ಫ.ಗು. ಹಳಕಟ್ಟಿ ಅವರು ಪುನಃ ವಚನ ಸಾಹಿತ್ಯವನ್ನು ಪುನರುತ್ಥಾನಗೊಳಿಸುತ್ತಾರೆ. ಪಟ್ಟಭದ್ರ ಹಿತಾಸಕ್ತಿಗಳು ವಚನಗಳನ್ನು ದ್ವೇಷಿಸಿ ಅವುಗಳ ಬಗ್ಗೆ ವ್ಯಾಖ್ಯಾನ ಮಾಡುತ್ತಾರೆ. ವಚನಗಳು ಉಪನಿಷತ್ತುಗಳ ಮುಂದುವರಿದ ಭಾಗವೆಂದು ಅಪಪ್ರಚಾರ ಮಾಡುತ್ತಾರೆ. ವಚನ ಸಾಹಿತ್ಯವೆಂದರೆ ಸನಾತನ ಸಂಸ್ಕೃತಿ ಎಂದು ಬಿಂಬಿಸುತ್ತಾರೆ. ಇತ್ತೀಚೆಗೆ ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ನಂತರ ‘ವಚನ ದರ್ಶನ’ ಎಂಬ ಕೊಳಕು ಪುಸ್ತಕವನ್ನು ಪ್ರಕಟಿಸಿ ಅಪಪ್ರಚಾರ ಮಾಡುತ್ತಾರೆ. ಆ ಪುಸ್ತಕ ಜೀವ ವಿರೋಧಿ, ಜನಾಂಗ ವಿರೋಧಿ. ಶರಣ ಸಂಸ್ಕೃತಿ ನಾಶಪಡಿಸುವುದೇ ಅವರ ಹುನ್ನಾರ. ಇಂತಹ ಎಲ್ಲ ರೀತಿಯ ಹುನ್ನಾರಗಳ ಬಗ್ಗೆ ಜಾಗೃತರಾಗಿ ನಿರಂತರವಾಗಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಬೇಕು. ವಚನ ಸಾಹಿತ್ಯದ ಮೇಲೆ ವಕ್ರದೃಷ್ಟಿ ಬೀರುವವರ ವಿರುದ್ಧ ಹೋರಾಟ ನಡೆಸಬೇಕು ಎಂದು ಹೇಳಿದರು.

ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಎಂ.ವಿ.ತ್ಯಾಗರಾಜ ಮಾತನಾಡಿ, ನಡೆ-ನುಡಿ ಒಂದಾಗಿಸಿಕೊಂಡು ವಚನಗಳನ್ನು ಶರಣರು ರಚಿಸಿದ್ದಾರೆ. ಹೀಗಾಗಿಯೇ ಅವುಗಳು ಜನರಿಗೆ ತಲುಪಿವೆ. ನಾನು ಆಧುನಿಕ ವಚನಗಳ ವಿರೋಧಿಯಲ್ಲ. ಆದರೆ, ನಮಗೆ ಆಧುನಿಕ ವಚನಗಳು ಬೇಡ. ಏಕೆಂದರೆ ಅವುಗಳಲ್ಲಿ ನಡೆ-ನುಡಿ ಒಂದಾಗಿರುವುದಿಲ್ಲ. ಬಸವಾದಿ ಶರಣರ ಮೂಲ ವಚನಗಳನ್ನು ಶಾಲಾ ಕಾಲೇಜಿನ ಮಕ್ಕಳಿಗೆ ತಲುಪಿಸುವ ಅವಶ್ಯಕತೆ ಇದೆ. ಮಕ್ಕಳಿಗೆ ವಚನ ಓದಿಸಿದರೆ ಅವು ಅವರ ಹೃದಯದ ಮೇಲೆ ಧನಾತ್ಮಕ ಪರಿಣಾಮ ಬೀರಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಸುನೀತಾ ಎಸ್.ದಾಡಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಸಿದ್ಧರಾಮ ಬೆಲ್ದಾಳ ಶರಣರು, ಡಾ. ಗುರಮ್ಮಾ ಸಿದ್ದಾರೆಡ್ಡಿ, ಮಾಜಿ ಸಚಿವೆ ಲೀಲಾವತಿ ಆರ್.ಪ್ರಸಾದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಮುಖಂಡರಾದ ಚನ್ನಬಸವ ಬಳತೆ, ಬಾಬು ವಾಲಿ, ಗುರುನಾಥ ಕೊಳ್ಳೂರ, ಬಿ.ಜಿ.ಶೆಟಕಾರ, ಶ್ರೀಕಾಂತ ಸ್ವಾಮಿ, ಪರಿಷತ್ತಿನ ಪ್ರಮುಖರಾದ ಹಾಸನದ ರವಿ ನಾಕಲಗೂಡು, ಬಾಗಲಕೋಟೆಯ ಶ್ರೀಶೈಲ ಕರಿಶಂಕರ, ಚಿಕ್ಕಬಳ್ಳಾಪುರದ ಕೆ.ಪಿ.ನವಮೋಹನ, ಗದಗದ ಮಹಾಂತೇಶ ಗಜೇಂದ್ರಗಡ, ಆರ್.ಬಿ.ವೆಂಕಟೇಶ ಹಾಜರಿದ್ದರು.

ಭಾನುಪ್ರಿಯಾ ಅರಳಿ ತಂಡದವವರು ನಾಡಗೀತೆ ಹಾಡಿದರು. ಸಾಹಿತಿ ರಘುಶಂಖ ಭಾತಂಬ್ರಾ ಸ್ವಾಗತಿಸಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳಿಂದ ವಚನ ನೃತ್ಯ ಜರುಗಿತು. ಪುಟ್ಟರಾಜ ಶರಣಯ್ಯ ಸ್ವಾಮಿ ವಚನ ಗಾಯನ ನಡೆಸಿಕೊಟ್ಟರು. ದೀಪಕ ಥಮಕೆ ಮತ್ತು ಶ್ರೀದೇವಿ ಪಾಟೀಲ ನಿರೂಪಿಸಿದರು. ಶೈಲಜಾ ಚಳಕಾಪುರೆ ವಂದಿಸಿದರು.

‘ವಚನ ಸಾಹಿತ್ಯ ತಿದ್ದಲು ಸಾಧ್ಯವಿಲ್ಲ’

ಸಮ್ಮೇಳನದ ಸರ್ವಾಧ್ಯಕ್ಷ ಸಿ.ಸೋಮಶೇಖರ ಮಾತನಾಡಿ, ವಚನಗಳು ಜಗತ್ತಿನ ಜನರ ಜೀವನ ಸಂವಿಧಾನ. ಆಡಳಿತಾತ್ಮಕವಾದ ಸಂವಿಧಾನ ತಿದ್ದುಪಡಿ ಮಾಡಬಹುದು. ಆದರೆ, ಬಸವಾದಿ ಶರಣರ ಜೀವಪರ ಸಂವಿಧಾನವೆಂಬ ವಚನ ಸಾಹಿತ್ಯವನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಹೇಳಿದರು.

ಪ್ರತಿಯೊಬ್ಬರೂ ಕಾಯಕ ಮತ್ತು ದಾಸೋಹದ ಮೂಲಕ ಗುಣಾತ್ಮಕ ಬದುಕು ಕಟ್ಟಿಕೊಳ್ಳಬೇಕೆಂದು ವಚನ ಸಾಹಿತ್ಯ ತಿಳಿಸಿದೆ. ಜನ ಬದುಕಲಿ, ಜಗ ಬದುಕಲಿ ಎಂಬ ಸಂಕಲ್ಪದಿಂದ ರಚನೆಯಾಗಿದೆ. ಶರಣರು ನೈತಿಕ ಧಾರ್ಮಿಕ, ಆಧ್ಯಾತ್ಮಿಕತೆ ಜೊತೆಗೆ ಆರ್ಥಿಕ ಸಮಾನತೆ ನೀಡಿದರು. ಶರಣರು ನೀಡಿದ ಸೂತ್ರಗಳನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಂಡರೆ ಸರ್ವರಿಗೂ ಸಮಬಾಳು ಸಮಪಾಲು ನೀತಿ ಜಾರಿಗೆ ಬರುತ್ತದೆ ಎಂದರು.

ಜಗತ್ತಿನ ಎಲ್ಲ ತಲ್ಲಣಗಳಿಗೆ ವಚನ ಸಾಹಿತ್ಯದಲ್ಲಿ ಔಷಧಿ ಇದೆ. ದೇವರಿಗೂ ಮತ್ತು ಮನುಷ್ಯರಿಗೂ ನೇರಸಂಪರ್ಕ ಕಲ್ಪಿಸಿದ ಬಸವಾದಿ ಶರಣರು ಇಷ್ಟಲಿಂಗವನ್ನು ಪೂಜಿಸಲು ಆಧ್ಯಾತ್ಮಿಕ ಸ್ವಾತಂತ್ರ್ಯ ನೀಡಿದ್ದಾರೆ. ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅಹಂಕಾರ, ಅಧಿಕಾರದ ಮದ, ಕೀರ್ತಿ ವಾರ್ತೆಗಳಿಂದ ದೂರ ಉಳಿಯಬೇಕೆಂದು ತಿಳಿಸಿದರು.

ಮೆರವಣಿಗೆಯಲ್ಲಿ ಗಮನ ಸೆಳೆದ ಚಿಣ್ಣರು

ಸಮ್ಮೇಳನದ ಅಂಗವಾಗಿ ನಗರದ ಬಸವೇಶ್ವರ ವೃತ್ತದಿಂದ ರಂಗಮಂದಿರದ ವರೆಗೆ ಅಲಂಕೃತ ಸಾರೋಟಿನಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಸಿ.ಸೋಮಶೇಖರ ಅವರ ಮೆರವಣಿಗೆ ನಡೆಯಿತು. ಚಿಣ್ಣರು ಹನ್ನೆರಡನೇ ಶತಮಾನದ ಶರಣ/ಶರಣೆಯರ ವೇಷ ತೊಟ್ಟು ಗಮನ ಸೆಳೆದರು. ಮುಖಂಡರು ವಚನ ಸಂಗೀತಕ್ಕೆ ಮೈಮರೆತು ಹೆಜ್ಜೆ ಹಾಕಿದರು. ಮೆರವಣಿಗೆಯು ಭಗತಸಿಂಗ್ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮೂಲಕ ರಂಗಮಂದಿರ ತಲುಪಿತು. ಮೆರವಣಿಗೆಗೆ ಬಸವ ತತ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈಜಿನಾಥ ಕಮಠಾಣೆ ಚಾಲನೆ ನೀಡಿದರು. ನಾಡಧ್ವಜವನ್ನು ಡಾ. ವಿಜಯಶ್ರೀ ಬಶೆಟ್ಟಿ ನೆರವೇರಿಸಿದರೆ, ಷಟಸ್ಥಲ ಧ್ವಜವನ್ನು ಬಸವ ಬಾಂಧವ್ಯ ಬಳಗದ ಅಧ್ಯಕ್ಷ ಬಾಬುರಾವ ದಾನಿ ನೆರವೇರಿಸಿದರು. ಮೆರವಣಿಗೆಯ ನೇತೃತ್ವವನ್ನು ರಾಜೇಂದ್ರಕುಮಾರ ಮಣಗೇರೆ ವಹಿಸಿದ್ದರು.

ಸಾಧಕರಿಗೆ ಗೌರವ

ಚಿಕ್ಕಬಳ್ಳಾಪುರದ ಗ.ನ. ಅಶ್ವಥ ಅವರನ್ನು ಜಾನಪದ ಕ್ಷೇತ್ರದ ಸೇವೆಗಾಗಿ ಹಾಗೂ ಚ.ಭೀ. ಸೋಮಶೆಟ್ಟಿ ಬೀದರ್ ಇವರಿಗೆ ‘ಬಸವಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಿರಿಜಾ ಚಂದ್ರಶೇಖರ ಇಳಕಲ್, ಮಹಾದೇವಮ್ಮ ತಾಯಿ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಮಹಾಂತ ಸ್ವಾಮೀಜಿ ಪ್ರಶಸ್ತಿಯನ್ನು ಡಾ. ಅಮರನಾಥ ಸೋಲಪುರ ಅವರಿಗೆ ನೀಡಲಾಯಿತು. ‘ಶರಣ ಬಂಧು’ ಪ್ರಶಸ್ತಿಯನ್ನು 20 ಜನ ಸಾಧಕರಿಗೆ ನೀಡಿ ಗೌರವಿಸಲಾಯಿತು.

ವಚನ ಸಾಹಿತ್ಯವೆಂದರೆ ಸನಾತನ ಸಂಸ್ಕೃತಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅದರ ಬಗ್ಗೆ ಎಚ್ಚರದಿಂದಿರಿ.
–ಜೆ.ಎಸ್. ಪಾಟೀಲ, ಸಾಹಿತಿ

ವಚನ ಸಾಹಿತ್ಯಕ್ಕಿರುವಷ್ಟು ಶತ್ರುಗಳು ಬೇರೆ ಯಾವ ಸಾಹಿತ್ಯಕ್ಕೂ ಅಲ್ಲ. ಅಂಥವರಿಗೆ ತಿಳಿಹೇಳಿ ಮನಃಪರಿವರ್ತನೆ ಅಗತ್ಯ.
–ಎಂ.ವಿ.ತ್ಯಾಗರಾಜ, ಅಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.