‘2024ರ ಜೂನ್‌ನಲ್ಲಿ ಕೆಲಸ ಪೂರ್ಣ’
‘ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮ ಆಗಸ್ಟ್ 6ರಂದು ಬೆಳಿಗ್ಗೆ 9.30ಕ್ಕೆ ಬೀದರ್ ರೈಲು ನಿಲ್ದಾಣದ ಮುಂಭಾಗದಲ್ಲಿ ನಡೆಯಲಿದೆ. ಅದಾದ ನಂತರ ಕೆಲಸ ತ್ವರಿತ ಗತಿಯಲ್ಲಿ ಆರಂಭಗೊಂಡು 2024ರ ಜೂನ್‌ನಲ್ಲಿ ಪೂರ್ಣಗೊಳ್ಳಲಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ‘ನಾನು ಸಂಸದನಾದ ಬಳಿಕ ಬೀದರ್‌ನಿಂದ 13 ಹೊಸ ರೈಲುಗಳನ್ನು ಪ್ರಾರಂಭಿಸಿದ್ದೇನೆ. ತೆಲಂಗಾಣದ ವಿಕಾರಾಬಾದ್‌ನಿಂದ ಮಹಾರಾಷ್ಟ್ರದ ಪರಳಿವರೆಗೆ ₹262.12 ಕೋಟಿಯಲ್ಲಿ 269 ಕಿ.ಮೀ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಮಂಜೂರುಗೊಳಿಸಿ ಪೂರ್ಣಗೊಳಿಸಿದ್ದೇನೆ. ಬೀದರ್–ಯಶವಂತಪುರ ಲಾತೂರ್–ಯಶವಂತಪುರ ಬೀದರ್–ಮುಂಬೈ ಹೈದರಾಬಾದ್–ಬೀದರ್ ಬೀದರ್–ಮಚಲಿಪಟ್ಟಣ ರೈಲುಗಳು ವಿದ್ಯುತ್ ಮಾರ್ಗದಲ್ಲಿ ಸಂಚರಿಸುತ್ತಿವೆ. ಬೀದರ್-ಕಲಬುರಗಿ ರೈಲ್ವೆ ಮಾರ್ಗ 1998-99ರಲ್ಲಿ ಪ್ರಾರಂಭಗೊಂಡು 2013-14ರ ವರೆಗೆ ₹150 ಕೋಟಿ ಅನುದಾನದಲ್ಲಿ 37 ಕಿ.ಮೀ ಪೂರ್ಣಗೊಂಡಿತ್ತು. 2014ರಲ್ಲಿ ನಾನು ಸಂಸದನಾದ ನಂತರ ಮೂರು ವರ್ಷದಲ್ಲಿ ₹1392 ಕೋಟಿ ಅನುದಾನ ತಂದು 73.193 ಕಿ.ಮೀ ಕೆಲಸ ಪೂರ್ಣಗೊಳಿಸಿ 2017ರ ಅಕ್ಟೋಬರ್ 29ರಂದು ಪ್ರಧಾನಿಯವರಿಂದ ಉದ್ಘಾಟಿಸಲಾಗಿತ್ತು’ ಎಂದು ಹೇಳಿದರು.