ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಜಂಗಮ ಪ್ರಮಾಣಪತ್ರ ಸಿಗುವವರೆಗೆ ಹೋರಾಟ: ಬಿ.ಡಿ.ಹಿರೇಮಠ

ಬೇಡಜಂಗಮ ಸಂವಿಧಾನಬದ್ಧ ಹಕ್ಕೊತ್ತಾಯ ರಾಜ್ಯಮಟ್ಟದ ಸಮಾವೇಶದಲ್ಲಿ ಬಿ.ಡಿ.ಹಿರೇಮಠ ಎಚ್ಚರಿಕೆ
Last Updated 8 ಫೆಬ್ರುವರಿ 2021, 2:13 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಬೇಡ ಜಂಗಮ ಜಾತಿ ಪ್ರಮಾಣಪತ್ರ ಸಿಗುವವರೆಗೆ ಹೋರಾಟ ನಿಲ್ಲದು’ ಎಂದು ಬೇಡಜಂಗಮ ಸಂಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಬಿ.ಡಿ.ಹಿರೇಮಠ ಎಚ್ಚರಿಸಿದರು.

ಇಲ್ಲಿನ ಬಿಕೆಡಿಬಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಬೇಡಜಂಗಮ ಸಂವಿಧಾನಾತ್ಮಕ ಹಕ್ಕೊತ್ತಾಯ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಬೇಡಜಂಗಮರಲ್ಲಿ ಶೇ 5ರಷ್ಟು ಮಾತ್ರ ಆರ್ಥಿಕವಾಗಿ ಮುಂದುವರೆದಿದ್ದಾರೆ. ಇವರ ಸರ್ವಾಂಗೀಣ ಪ್ರಗತಿಗೆ ಬೇಡಜಂಗಮ ಪ್ರಮಾಣಪತ್ರ ನೀಡುವುದು ಅತ್ಯಂತ ಅಗತ್ಯವಾಗಿದೆ. ಇದಕ್ಕಾಗಿ 30 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಆದರೂ ಶಾಸಕಾಂಗ ದವರು ಕಾರ್ಯಾಂಗದವರ ಮೇಲೆ ಒತ್ತಡ ಹೇರಿ ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜಕಾರಣಿಗಳ ಲಕ್ಷ್ಯ ಚುನಾವಣೆಗಳ ಮೇಲೆ ಇರುತ್ತದೆ. ಇಲ್ಲಿ ಈಗ ಉಪ ಚುನಾವಣೆ ಇರುವುದರಿಂದ ರಾಜ್ಯಮಟ್ಟದ ಸಮಾವೇಶ ಆಯೋಜಿಸಿ ಹಕ್ಕೊತ್ತಾಯ ಮಾಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಬೇಡಜಂಗಮರಿಗೆ ಟಿಕೆಟ್ ಹಾಗೂ ಈ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ಏರುಪೇರು ಮಾಡುವುದಕ್ಕೂ ನಾವು ಹಿಂಜರಿಯುವುದಿಲ್ಲ. ಫೆಬ್ರುವರಿ 19ರವರೆಗೆ ಪ್ರಮಾಣಪತ್ರ ನೀಡುವ ಬಗ್ಗೆ ಸರ್ಕಾರ ತೀರ್ಮಾನ ತೆಗೆದು ಕೊಳ್ಳದಿದ್ದರೆ ಚನ್ನಗಿರಿಯಲ್ಲಿ ಸಮಾವೇಶ ನಡೆಸುತ್ತೇವೆ' ಎಂದು ತಿಳಿಸಿದರು.

ಕೊಳದ ಮಠದ ಶಾಂತವೀರ ಶಿವಾಚಾರ್ಯರು ಮಾತನಾಡಿ, ‘ಬಿ.ಎಸ್.ಯಡಿಯೂರಪ್ಪ ಅವರು ನಾನು ಮುಖ್ಯಮಂತ್ರಿಯಾದ ವಾರದಲ್ಲೇ ಬೇಡಜಂಗಮ ಪ್ರಮಾಣಪತ್ರ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೂ ಅವರು ನಿಷ್ಕಾಳಜಿ ತೋರಿದ್ದರಿಂದ ರಾಜ್ಯ ಮಟ್ಟದ ಸಂಘಟನೆಗಳ ಒಕ್ಕೂಟ ರಚಿಸಿ ಹೋರಾಟ ಮುಂದುವರೆಸಿದ್ದೇವೆ. ಒಂದು ವೇಳೆ ಅವರು ಪ್ರಮಾಣಪತ್ರ ನೀಡುವ ಬಗ್ಗೆ ಶೀಘ್ರ ಘೋಷಣೆ ಮಾಡಿ ದರೆ ಈ ಬಸವಣ್ಣನವರ ನೆಲದಲ್ಲಿಯೇ ಯಡಿಯೂರಪ್ಪ ಅವರ ಅಭಿನಂದನಾ ಸಮಾರಂಭ ಆಯೋಜಿಸುತ್ತೇವೆ. ಎಲ್ಲರೂ ಒಂದೇ ಇದ್ದೇವೆ. ಆದ್ದರಿಂದ ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂದು ಯಾರೂ ವಿವಾದ ಮಾಡಬಾರದು’ ಎಂದರು.

ತಡೋಳಾ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ‘ಜಂಗಮ ಮುನಿದರೆ ಸಂಸ್ಕೃತಿ ನಾಶ, ಜ್ಞಾನದ ದಾರಿದ್ರ್ಯ ಆಗುತ್ತದೆ. ಆದರೆ ಜಾಗತೀಕರಣದ ಹೆಸರಲ್ಲಿ ಪರಂಪರೆ ಮರೆಯುತ್ತಿದ್ದೇವೆ. ಜಂಗಮರು ತ್ಯಾಗದ ಧ್ಯೋತಕ ಆಗಿದ್ದಾರೆ. ಬ್ರಿಟಿಷರು, ಹೈದರಾಬಾದ್ ನಿಜಾಮ್ ಅರಸರು, ಕೆಳದಿ ದೊರೆಗಳು ಬೇಡಜಂಗಮರಿಗೆ ಇನಾಮಿ ಜಮೀನು, ಮೀಸಲಾತಿ ನೀಡಿದ್ದರು. ಆದರೆ ಯಾವುದೇ ಸೌಲಭ್ಯ ಗಳಿಲ್ಲದೆ ಈಗ ಇವರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ’ ಎಂದು ಹೇಳಿದರು.

ಡಾ.ಬಸವರಾಜಸ್ವಾಮಿ ತ್ರಿಪುರಾಂತ ಮಾತನಾಡಿ, ‘ಹಿಟ್ಟು ಬೇಡುವುದು ಬೇಡಜಂಗಮರ ಕುಲವೃತ್ತಿ ಆಗಿದೆ. ಇದಕ್ಕಾಗಿ ಪ್ರಮಾಣಪತ್ರಕ್ಕೆ ಬೇಡಿಕೆ ಸಲ್ಲಿಸಲಾಗುತ್ತದೆ. ಇಲ್ಲಿನ ಸಮಾವೇಶದಲ್ಲಿ ನಾಡಿನ ಸಾವಿರಾರು ಜನರು ಪಾಲ್ಗೊಂಡಿದ್ದು ಹಿಂದಿನ ಎಲ್ಲ ಸಮಾವೇಶಗಳ ದಾಖಲೆ ಇದು ಮುರಿದಿದೆ. ಎಷ್ಟೇ ಸಂಕಟಗಳು ಎದುರಾದರೂ ಈ ಹೋರಾಟ ಈಗ ನಿಲ್ಲುವುದಿಲ್ಲ’ ಎಂದು ಹೇಳಿದರು.

ಆಂದೋಲಾ ಸಿದ್ಧಲಿಂಗ ಸ್ವಾಮೀಜಿ, ಶಿವಯ್ಯಸ್ವಾಮಿ ಕಮಠಾಣಾ, ಶ್ರೀಕಾಂತಸ್ವಾಮಿ ಸೊಲಪುರ, ಹೇಮಲತಾ ಹಿರೇಮಠ, ಸಿದ್ದಯ್ಯ ಮರ್ಪಳ್ಳಿ ಮಾತನಾಡಿದರು.

ಭಾತಂಬ್ರಾ ಶಿವಯೋಗೇಶ್ವರ ಸ್ವಾಮೀಜಿ, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾ ಚಾರ್ಯರು, ಗೋರಟಾ ಡಾ.ರಾಜಶೇಖರ ಶಿವಾಚಾರ್ಯರು, ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ, ಸಾಯಗಾಂವ ಶಿವಾನಂದ ದೇವರು, ಶರಣಬಸವರಾಜ ಸ್ವಾಮಿ, ಬೇಲೂರ ಚಿದ್ಘನಲಿಂಗ ಶಿವಾಚಾರ್ಯರು ಪಾಲ್ಗೊಂಡಿದ್ದರು.

‘ಪ್ರಮಾಣಪತ್ರ ನೀಡದಿದ್ದರೆ ಮೊಕದ್ದಮೆ ಹೂಡಿ’

‘ಜಂಗಮರಿಗೆ ಪೂಜ್ಯರಂತೆ ನೋಡಿ ಗೌರವ ಕೊಡಲಾಗುತ್ತಿದೆ. ಆದರೂ, ಸೌಲಭ್ಯಗಳಿಲ್ಲ. ಊರಲ್ಲಿ ಮನೆ, ಹೊಲವಿಲ್ಲ. ವ್ಯಾಪಾರದಲ್ಲಿ ತೊಡಗಿಸಿಕೊಂಡಿಲ್ಲ. ಆದ್ದರಿಂದ ಒಗ್ಗಟ್ಟಾಗಿ ಹೋರಾಡುವುದು ಅನಿವಾರ್ಯವಾಗಿದೆ. ಎಲ್ಲರೂ ಒಂದಾಗಿ ತಹಶೀಲ್ದಾರ್ ಬಳಿ ಹೋಗಿ ಕೇಳಿದರೆ ಬೇಡಜಂಗಮ ಪ್ರಮಾಣಪತ್ರ ದೊರಕುತ್ತದೆ. ಒಂದು ವೇಳೆ ತಹಶೀಲ್ದಾರರು ಪ್ರಮಾಣಪತ್ರ ನೀಡದಿದ್ದರೆ ಮೊಕದ್ದಮೆ ಹೂಡಿ’ ಎಂದು ನಿವೃತ್ತ ಐಜಿಪಿ ಜ್ಯೋತಿಪ್ರಕಾಶ ಮಿರ್ಜಿ ಹೇಳಿದರು.

‘ಬೇಡಜಂಗಮ ಪ್ರಮಾಣಪತ್ರ ಪಡೆಯುವುದಕ್ಕಾಗಿ ಹೋರಾಟ ತೀವ್ರಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಬೇಕಾಗಿದೆ. ಸಂವಿಧಾನಬದ್ಧವಾದ ಹಕ್ಕು ಪಡೆದುಕೊಳ್ಳುವುದಕ್ಕಾಗಿ ನಾವು ಯಾರನ್ನೂ ವಿರೋಧಿಸುವ ಅವಶ್ಯಕತೆ ಇಲ್ಲ’ ಎಂದು ಅವರು ತಿಳಿಸಿದರು.

ಅಚ್ಚುಕಟ್ಟಾದ ದಾಸೋಹ

ಸಭಾಂಗಣದ ಹೊರಭಾಗದಲ್ಲಿ ಸಮೀಪದಲ್ಲಿಯೇ ಎಲ್ಲರಿಗೂ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಅನ್ನ, ಸಾಂಬಾರು ಬಡಿಸಲಾಯಿತು. ಸಮಾವೇಶಕ್ಕೆ ಆಯೋಜಕರ ನಿರೀಕ್ಷೆಗಿಂತ ಹೆಚ್ಚಿನ ಜನರು ಬಂದಿದ್ದರೂ ದಾಸೋಹ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.ಕುಡಿಯುವುದಕ್ಕೆ ಶುದ್ಧ ನೀರಿನ ವ್ಯವಸ್ಥೆಯಿತ್ತು. ದಾಸೋಹ ದಾನಿಗಳಾದ ಶರಣಬಸವರಾಜ ಸ್ವಾಮಿ ಹಾಗೂ ಕಾರ್ಯಕ್ರಮದ ಆಯೋಜಕರಾದ ಡಾ.ಬಸವರಾಜಸ್ವಾಮಿ ತ್ರಿಪುರಾಂತ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

19ರಂದು ಚನ್ನಗಿರಿಯಲ್ಲಿ ಬೇಡ ಜಂಗಮ ಸಮಾವೇಶ

‘ಬೇಡ ಜಂಗಮ ಜಾತಿ ಈ ಮೊದಲೇ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಪರಿಗಣಿತವಾಗಿದೆ. ಆದ್ದರಿಂದ ಜಾತಿ ಪ್ರಮಾಣಪತ್ರ ಪಡೆಯುವುದು ನಮ್ಮ ಹಕ್ಕು. ಇದರಿಂದ ವಂಚಿತಗೊಳಿಸುವುದು ಅಪರಾಧ ಆಗುತ್ತದೆ' ಎಂದು ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಬಿ.ಡಿ.ಹಿರೇಮಠ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಬೇಡ ಜಂಗಮ ಸಂವಿಧಾನಾತ್ಮಕ ಹಕ್ಕೊತ್ತಾಯ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಫೆಬ್ರುವರಿ 19ರಂದು ಚನ್ನಗಿರಿಯಲ್ಲಿ ಅಂತಿಮ ಸಮಾವೇಶ ನಡೆಸುತ್ತೇವೆ. ಅದರ ನಂತರವೂ ಬೇಡ ಜಂಗಮರಿಗೆ ಜಾತಿ ಪ್ರಮಾಣಪತ್ರ ನೀಡದಿದ್ದರೆ, ವಿಧಾನಸೌಧ ಚಲೋ ಹಮ್ಮಿಕೊಳ್ಳುತ್ತೇವೆ. ಆಮರಣ ಸತ್ಯಾಗ್ರಹ ನಡೆಸುತ್ತೇವೆ’ ಎಂದರು.

‘ರಾಜ್ಯದಲ್ಲಿ 45 ಸಾವಿರ ಬೇಡಜಂಗಮರಿದ್ದು, ರಾಜಕೀಯದಲ್ಲಿ ಬದಲಾವಣೆ ತರುವ ಶಕ್ತಿ ಈ ಸಮುದಾಯಕ್ಕಿದೆ. ಬೇಡಜಂಗಮ ಜಾತಿ ಬಗ್ಗೆ ದಾಖಲೆ, ಪುರಾವೆ, ಸರ್ಕಾರದ ಸುತ್ತೋಲೆಗಳಿವೆ. ನ್ಯಾಯಾಲಯದ ತೀರ್ಪುಗಳು ಕೂಡ ಪರವಾಗಿವೆ’ ಎಂದರು.

ಕಿಕ್ಕಿರಿದು ತುಂಬಿದ್ದ 7 ಸಾವಿರ ಆಸನದ ಸಭಾಂಗಣ

ಬಿಕೆಡಿಬಿ ಸಭಾಂಗಣದಲ್ಲಿ ಭಾನುವಾರ ನಡೆದ ಬೇಡಜಂಗಮರ ಸಂವಿಧಾನಬದ್ಧ ಹಕ್ಕೊತ್ತಾಯ ಸಮಾವೇಶದ ವೇದಿಕೆಯ ಮೇಲೆ ರಾಜಕೀಯ ವ್ಯಕ್ತಿಗಳು ಇರಲಿಲ್ಲ. ರಾಜ್ಯ, ಮಹಾರಾಷ್ಟ್ರ ಹಾಗೂ ಆಂಧ್ರದಿಂದ ಬಂದಿದ್ದ 200ಕ್ಕೂ ಅಧಿಕ ಶಿವಾಚಾರ್ಯರು ಉಪಸ್ಥಿತರಿದ್ದರು. ಹೀಗಾಗಿ ವೇದಿಕೆ ಕೇಸರಿಮಯವಾಗಿತ್ತು.

ನಾಡಿನ ವಿವಿಧ ಜಿಲ್ಲೆಗಳಿಂದ ಜನಸಾಗರ ಹರಿದು ಬಂದಿದ್ದರಿಂದ 7 ಸಾವಿರ ಆಸನ ಸಾಮರ್ಥ್ಯದ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಹೀಗಾಗಿ ಹೊರಗಡೆ ಡಿಜಿಟಲ್ ಪರದೆ ವ್ಯವಸ್ಥೆ ಮಾಡಿ ಸಮಾವೇಶದ ಕಾರ್ಯಕಲಾಪಗಳನ್ನು ತೋರಿಸಲಾಯಿತು.

ಸಭಾಂಗಣದ ಹೊರ ಭಾಗದಲ್ಲಿನ ತೇರು ಮೈದಾನದ ತುಂಬೆಲ್ಲ ವಿವಿಧೆಡೆಯಿಂದ ಜನರು ತೆಗೆದುಕೊಂಡು ಬಂದಿದ್ದ ಬಸ್, ಕಾರು ಹಾಗೂ ಇತರೆ ವಾಹನಗಳು ನಿಂತಿದ್ದವು. ಮುಖ್ಯ ರಸ್ತೆಯಲ್ಲಿ ಕೆಲಕಾಲ ವಾಹನ ದಟ್ಟಣೆಯೂ ಆಯಿತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ತಮ್ಮ ಜತೆ ತಂದಿದ್ದ ಕಾವಿ ಪಟ್ಟಿಗಳನ್ನು ಹಾಗೂ ಪಂಚಾಚಾರ್ಯರ ಪ್ರತೀಕವಾದ ಐದು ಬಣ್ಣಗಳಿರುವ ಪಟ್ಟಿಗಳನ್ನು ಹೆಗಲಿಗೆ ಹಾಕಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT