ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿರುವ ಕೆಟ್ಟ ಸರ್ಕಾರಕ್ಕೆ ಚುನಾವಣೆಯಲ್ಲಿ ಬುದ್ಧಿ ಕಲಿಸಿ: ಖರ್ಗೆ ಮನವಿ

ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮನವಿ
Last Updated 30 ಮಾರ್ಚ್ 2021, 15:37 IST
ಅಕ್ಷರ ಗಾತ್ರ

ಬೀದರ್‌: ‘ರಾಜ್ಯದಲ್ಲಿರುವ ಅತ್ಯಂತ ಕೆಟ್ಟ ಸರ್ಕಾರಕ್ಕೆ ಬುದ್ಧಿ ಕಲಿಸಲು ಮತದಾರರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.

ಬಸವಕಲ್ಯಾಣದ ತೇರು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರಿಂದ ದೇಶಕ್ಕೆ ಒಳ್ಳೆಯದಾಗಿಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

‘70 ವರ್ಷಗಳಲ್ಲಿ ಕಾಂಗ್ರೆಸ್‌ ದೇಶಕ್ಕೆ ಏನು ಮಾಡಿದೆ ಎಂದು ನರೇಂದ್ರ ಮೋದಿ ಹಲವು ಬಾರಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ 70 ವರ್ಷಗಳ ಅವಧಿಯಲ್ಲಿ ಸ್ಥಾಪಿಸಿದ ಸಾರ್ವಜನಿಕ ಸಂಸ್ಥೆಗಳನ್ನೇ ಉಳಿಸಿಕೊಳ್ಳಲು ಇವರಿಗೆ ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ವಿಮಾ ಕಂಪೆನಿ, ರೈಲ್ವೆ ಹಾಗೂ ಅನೇಕ ಸಾರ್ವಜನಿಕ ವಲಯದ ಕಾರ್ಖಾನೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದೆ. 18 ಲಕ್ಷ ನೌಕರರ ಪೈಕಿ ಸದ್ಯ 12 ಲಕ್ಷ ಜನ ಮಾತ್ರ ಉದ್ಯೋಗದಲ್ಲಿ ಇದ್ದಾರೆ. ನಿರುದ್ಯೋಗ ಹೆಚ್ಚಿಸಿದ್ದೇ ಮೋದಿ ಸಾಧನೆ’ ಎಂದು ಟೀಕಿಸಿದರು.

‘ಮೊದಲು ದೇಶದಲ್ಲಿ ಟಾಟಾ, ಬಿರ್ಲಾ, ದಾಲ್ಮಿಯಾ ಅವರಂಥ ಉದ್ಯಮಿಗಳು ಮಾತ್ರ ಇದ್ದರು. ಕೇಂದ್ರ ಸರ್ಕಾರ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿರುವ ಕಾರಣ ಅದಾನಿ, ಅಂಬಾನಿ ಅವರಂಥವರು ಇನ್ನಷ್ಟು ಶ್ರೀಮಂತರಾಗಿದ್ದಾರೆ. ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ’ ಎಂದರು.

‘ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಕಾಂಗ್ರೆಸ್‌ ಸಂವಿಧಾನದ 371(ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟಿತು. ಆದರೆ, ಬಿಜೆಪಿ ಸರ್ಕಾರ ಅನುದಾನ ಕೊಡಲು ಸಿದ್ಧವಿಲ್ಲ. ಅಷ್ಟೇ ಅಲ್ಲ ಮೂರು ಕರಾಳ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಕಲಬುರ್ಗಿಗೆ ರೈಲ್ವೆ ವಿಭಾಗ ಮಂಜೂರು ಮಾಡಿತ್ತು. ಬಿಜೆಪಿ ಸರ್ಕಾರ ಅದನ್ನು ರದ್ದು ಮಾಡಿ ಮಹಾರಾಷ್ಟ್ರಕ್ಕೆ ಕೊಟ್ಟಿದೆ. ಕಲಬುರ್ಗಿಗೆ ಕೊಡಲಾಗಿದ್ದ ಸೌಲಭ್ಯಗಳನ್ನು ಒಂದೊಂದಾಗಿ ಹಿಂದಕ್ಕೆ ಪಡೆಯಲಾಗುತ್ತಿದೆ’ ಎಂದು ಆರೋಪ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮ್ಮದ್‌, ಶಾಸಕರಾದ ರಾಜಶೇಖರ ಪಾಟೀಲ, ಜಮೀರ್‌ ಅಹಮ್ಮದ್, ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್ ಮಾತನಾಡಿದರು.

ಶಾಸಕ ರಹೀಂ ಖಾನ್‌, ವಿಧಾನ ಪರಿಷತ್‌ ಸದಸ್ಯರಾದ ಚಂದ್ರಶೇಖರ ಪಾಟೀಲ, ಅರವಿಂದಕುಮಾರ ಅರಳಿ, ಮಹಿಳಾ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT