ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಶಾಲೆಗಳಲ್ಲಿ ಇಂಗ್ಲಿಷ್‌ ಶಿಕ್ಷಕರ ಕೊರತೆ

ನಗರದ ಶಾಲೆಗಳಲ್ಲಿ ಕಾರ್ಯನಿರ್ವಹಿಸಲು ಪೈಪೋಟಿ
Last Updated 17 ಡಿಸೆಂಬರ್ 2018, 10:49 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕರಿಲ್ಲದ ಕಾರಣ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹಿರಿಯ ಪ್ರಾಥಮಿಕ ಶಾಲೆಗಳಲ್ಲೂ ಇಂತಹದ್ದೇ ಪರಿಸ್ಥಿತಿ ಇರುವ ಕಾರಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಅಧ್ಯಯನ ಕಷ್ಟವಾಗುತ್ತಿದೆ. ಇದರಿಂದ ಪ್ರೌಢ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತಿದೆ.

ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಕಲಿಯದೆ ಪ್ರೌಢ ಶಾಲೆಗಳಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಶಿಕ್ಷಕರೇ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ವಿಷಯ ಓದಿದ್ದರೆ ಮಾತ್ರ ಪ್ರವೇಶ ಪಡೆಯಿರಿ ಎಂದು ಒತ್ತಡ ಹಾಕುತ್ತಿರುವುದರಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಗ್ರಾಮೀಣ ಹಾಗೂ ಬಡ ಕುಟುಂಬದ ವಿದ್ಯಾರ್ಥಿಗಳು ಸರ್ಕಾರದ ತಪ್ಪಿನಿಂದಾಗಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಪ್ರೌಢ ಶಾಲೆಯಲ್ಲಿ ಇಂಗ್ಲಿಷ್‌ ಗೊತ್ತಾಗದ ಕಾರಣ ಅವರಲ್ಲಿ ಕೀಳರಿಮೆ ಬೆಳೆಯುತ್ತಿದೆ. ಬಹುತೇಕ ಇಂಗ್ಲಿಷ್‌ ಶಿಕ್ಷಕರು ನಗರ ಸೇರಿಕೊಂಡಿರುವ ಕಾರಣ ಗ್ರಾಮೀಣ ವಿದ್ಯಾರ್ಥಿಗಳ ಪಡಿಪಾಟಲು ಅಧಿಕವಾಗಿದೆ.

‘ನಮ್ಮ ಶಾಲೆಗೆ ಇಂಗ್ಲಿಷ್‌ ಶಿಕ್ಷಕರನ್ನು ನಿಯೋಜಿಸುವಂತೆ ಐದನೇ ತರಗತಿಯಲ್ಲಿ ಇದ್ದಾಗಲೇ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದೇನೆ. ಗ್ರಾಮ ಸಭೆಯಲ್ಲೂ ಒತ್ತಾಯಿಸಿದ್ದೇನೆ. ನಾನು ಈಗ ಏಳನೇ ತರಗತಿಗೆ ಬಂದರೂ ಇಂಗ್ಲಿಷ್‌ ಶಿಕ್ಷಕರಿಲ್ಲ. ಶಿಕ್ಷಕರೇ ಇಲ್ಲದಿದ್ದರೆ ನಾವು ಇಂಗ್ಲಿಷ್ ಹೇಗೆ ಕಲಿತುಕೊಳ್ಳಬೇಕು’ ಎಂದು ಬೀದರ್‌ ತಾಲ್ಲೂಕಿನ ಚಟ್ನಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರೆಸಿಲ್ಲಾ ಪ್ರಭಾಕರ್ ಪ್ರಶ್ನಿಸುತ್ತಾರೆ.

‘ರಾಜ್ಯದಲ್ಲಿ 10 ಸಾವಿರ ಇಂಗ್ಲಿಷ್‌ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ರಾಜ್ಯ ಸರ್ಕಾರ ಈಚೆಗೆ ಕೇವಲ 3,500 ಶಿಕ್ಷಕರನ್ನು ಮಾತ್ರ ನೇಮಕ ಮಾಡಿಕೊಂಡಿದೆ. ಜಿಲ್ಲೆಯಲ್ಲಿ 5,476 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಜಿಲ್ಲೆಯಲ್ಲಿ 945 ಇಂಗ್ಲಿಷ್‌ ಶಿಕ್ಷಕರ ಅಗತ್ಯವಿದ್ದರೂ ಸರ್ಕಾರ ಕೇವಲ 192 ಇಂಗ್ಲಿಷ್‌ ಶಿಕ್ಷಕರನ್ನು ನೇಮಕ ಮಾಡಿಕೊಂಡಿದೆ’ ಎಂದು ಶಿಕ್ಷಣಾಧಿಕಾರಿ ಇನಾಯತ್‌ಅಲಿ ಸಿಂದೆ ಹೇಳುತ್ತಾರೆ.

ಒಂದನೆಯ ತರಗತಿಯಿಂದ ಇಂಗ್ಲಿಷ್‌ ಬೋಧನೆ ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ ಇಂಗ್ಲಿಷ್‌ ಜತೆಗೆ ಗಣಿತ ಹಾಗೂ ವಿಜ್ಞಾನ ಶಿಕ್ಷಕರ ಕೊರತೆಯೂ ಇದೆ. ಈ ಬಾರಿ ಇಲಾಖೆ ಕೇವಲ 11 ಗಣಿತ ಹಾಗೂ ವಿಜ್ಞಾನ ಶಿಕ್ಷಕರನ್ನು ನೇಮಕ ಮಾಡಿಕೊಂಡಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ಶಿಕ್ಷಣ ಇಲಾಖೆ ಮೂರು ವಲಯಗಳಲ್ಲಿ ಶಾಲೆಗಳನ್ನು ವಿಭಜಿಸಿದೆ. ನಗರ ವ್ಯಾಪ್ತಿಯಲ್ಲಿರುವ ಶಾಲೆಗಳು ‘ಎ’ ವಲಯ, ನಗರದಿಂದ 10 ಕಿ.ಮೀ ಅಂತರದಲ್ಲಿರುವ ಶಾಲೆಗಳು ‘ಬಿ’ ವಲಯ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಗಳು ‘ಸಿ’ ವಲಯದಲ್ಲಿವೆ. ‘ಎ’ ವಲಯ ಇಂಗ್ಲಿಷ್‌ ಶಿಕ್ಷಕರು ಗ್ರಾಮೀಣ ಪ್ರದೇಶಕ್ಕೆ ಹೋಗಲು ಸಿದ್ಧರಿಲ್ಲ.

‘ಎ ವಲಯದಲ್ಲಿರುವ ಶಿಕ್ಷಕರು ಪ್ರಭಾವಿಗಳಾಗಿದ್ದು, ಚುನಾಯಿತ ಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಆಪ್ತರಾಗಿದ್ದಾರೆ. ‘ಎ’ ವಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಾರಣ ಕೆಲಸದ ಒತ್ತಡವೂ ಕಡಿಮೆ ಇದೆ. ಇವರನ್ನು ‘ಸಿ’ ವಲಯದ ಶಾಲೆಗಳಿಗೆ ವರ್ಗಾವಣೆ ಮಾಡಿದರೂ ಶಾಸಕರ ಪ್ರಭಾವ ಬಳಸಿಕೊಂಡು ನಗರದ ಶಾಲೆಗಳಿಗೆ ಸೇರುತ್ತಿದ್ದಾರೆ. ಇದರಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಸಹಾಯಕರಾಗಿದ್ದಾರೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ.

‘ಸಿ ವಲಯದ ಶಾಲೆಗಳ ಸ್ಥಿತಿಯೇ ಬೇರೆ ರೀತಿಯಲ್ಲಿದೆ. ಹೆಚ್ಚುವರಿ ಶಿಕ್ಷಕರು ಇಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಕೃಷಿ ಕೂಲಿ ಕಾರ್ಮಿಕರು ಹಾಗೂ ಬಡವರ ಮಕ್ಕಳು ಈ ಶಾಲೆಗಳಲ್ಲಿ ಓದುವುದರಿಂದ ಈ ಶಾಲೆಗಳ ಶಿಕ್ಷಕರ ಮೇಲೆ ಪಾಲಕರ ನಿಗಾ ಸಹ ಕಡಿಮೆ ಇರುತ್ತದೆ. ಈ ಶಾಲೆಗಳಿಗೆ ಶಿಕ್ಷಕರು ಯಾವಾಗ ಬರುತ್ತಾರೆ ಅಥವಾ ಹೋಗುತ್ತಾರೆ ಎನ್ನುವುದು ಗೊತ್ತಾಗದು. ಸಿಆರ್‌ಪಿ, ಬಿಆರ್‌ಪಿಗಳು ಗ್ರಾಮೀಣ ಶಾಲೆಗಳಿಗೆ ಭೇಟಿ ಕೊಡುವುದೇ ಅಪರೂಪ. ಇಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ’ ಎಂದು ಬೇಸರದಿಂದ ನುಡಿಯುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT